ಬಂಟ್ವಾಳ: ಜಿ.ಪಂ. ಎಂಜಿನಿಯರ್ ಹಾಗೂ ಗುತ್ತಿಗೆದಾರರ ವಿಶೇಷ ಸಭೆ ಬಂಟ್ವಾಳ ಎಸ್.ಜಿ.ಆರ್.ವೈ. ಸಭಾಂಗಣದಲ್ಲಿ ನ. 28ರಂದು ನಡೆಯಿತು. ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿ ಗುತ್ತು ಮಾತನಾಡಿ, 2018-19ನೇ ಸಾಲಿನ ತಾ.ಪಂ. 1 ಕೋ. ರೂ. ಅನುದಾನ, ಅಧಿಭಾರ ಶುಲ್ಕ 35 ಲಕ್ಷ ರೂ. ಅನುದಾನ ಕಾಮಗಾರಿಗಳನ್ನು ಫೆ. 15ರ ಒಳಗೆ ಮುಗಿಸಬೇಕು. ಗುಣಮಟ್ಟ ಕಾಯ್ದು ಕೊಂಡು, ಅನುದಾನ ಸಂಪೂರ್ಣ ಬಳಕೆಯಾಗಬೇಕು. ಗುತ್ತಿಗೆದಾರರು – ಎಂಜಿನಿಯರ್‌ಗಳು ಹೊಂದಾಣಿಕೆಯಿಂದ ಕೆಲಸ ಮಾಡಿ. ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಸಕರನ್ನು ಸಂಪರ್ಕಿಸಿ ವಿಚಾರ ವಿಮರ್ಶೆ ನಡೆಸಿ ಎಂದರು.
ಜಿ.ಪಂ. ಎಂಜಿನಿಯರ್ ನರೇಂದ್ರ ಬಾಬು ಮಾತನಾಡಿ, ಎಂಜಿನಿಯರ್‌ಗಳ ಜತೆ ಪಿ.ಡಿ.ಒ.ಗಳು ಸ್ಪಂದಿಸುವುದಿಲ್ಲ. ಹಾಗಾಗಿ ಕಾಮಗಾರಿಯನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ತಾಲೂಕು ಪಂಚಾಯತ್ ಇ.ಒ. ರಾಜಣ್ಣ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಎಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಕರೆದು ಸಭೆ ನಡೆಸಿದ್ದು ಇಲ್ಲ. ಹೊಂದಾಣಿಕೆಯಿಂದ ಕೆಲಸ ಮಾಡಲು ಸಹಕಾರ ನೀಡಿ ಎಂದರು. ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಆಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ ಉಪಸ್ಥಿತರಿದ್ದರು.
ಮರಳು ಸಮಸ್ಯೆ
ಗುತ್ತಿಗೆದಾರರಿಗೆ ಗಡಿ ಪ್ರದೇಶದ ಸುಮಾರು 8 ಗ್ರಾ.ಪಂ.ಗಳಲ್ಲಿ ಮರಳು ಸಮಸ್ಯೆ ಉಂಟಾಗುತ್ತಿದೆ. ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ಅನುದಾನ ಇಲಾಖೆ ನೀಡದಿದ್ದರೆ ಕಾಮಗಾರಿ ನಡೆಸಲು ತೊಂದರೆಯಾಗುತ್ತಿದೆ ಎಂದು ಜಿ.ಪಂ. ಎಂಜಿನಿಯರ್ ನರೇಂದ್ರ ಬಾಬು ಹೇಳಿದರು.
ಶಾಸಕ ರಾಜೇಶ್ ನಾೖಕ್ ಮಾತನಾಡಿ, ನಾನ್ ಸಿ.ಆರ್. ಝಡ್. ಏರಿಯಾದಲ್ಲಿ 76 ಜನರಿಗೆ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 3 ಸಾವಿರ ರೂ.ನಲ್ಲಿ ಮರಳು ನೀಡಬೇಕು ಎಂದು ಜಿಲ್ಲಾಧಿಕಾರಿಯವರ ಸಭೆಯಲ್ಲಿ ತಿಳಿಸಿದ್ದೇನೆ. ಎಲ್ಲ ಕಡೆಗಳಲ್ಲಿ ಮರಳು ತೆಗೆಯಲು ಅವಕಾಶ ನೀಡಿದಾಗ ದರ ಇನ್ನಷ್ಟು ಕಡಿಮೆ ಮಾಡಲು ಒತ್ತಾಯ ಮಾಡುತ್ತೇನೆ. ಜಿ.ಎಸ್.ಟಿ. ಗೊಂದಲ ನಿವಾರಣೆ ಮಾಡಲು ಚರ್ಚಿಸಿ ನಿರ್ಧರಿಸಲಾಗುವುದು. ಸರಕಾರಿ ಕೆಲಸಗಳಿಗೆ ಮರಳು ಸಾಗಿಸುವ ವೇಳೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಪ್ರಯತ್ನ ಮಾಡುತ್ತೇನೆ. ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವ ಯತ್ನ ಮಾಡಬೇಡಿ ಎಂದರು.