ಬೆಂಗಳೂರು: “ಶ್ರೀಲಂಕಾ ಬಾಂಬ್ ಸ್ಫೋಟ ರೂವಾರಿಗಳು ಬೆಂಗಳೂರಿಗೆ ಬಂದಿದ್ದರು ಎಂಬುದು ಸೂಕ್ಷ್ಮ ವಿಚಾರ. ಈ ಬಗ್ಗೆ ಎಚ್ಚರ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಶ್ರೀಲಂಕಾ ಘಟನೆಯಿಂದ ನಾವು ಎಚ್ಚರವಹಿಸಬೇಕು. ಉಗ್ರರು ಬೆಂಗಳೂರಿನಲ್ಲಿ ಇದ್ದ ವಿಚಾರದ ಬಗ್ಗೆ ಡಿಜಿಯವರಿಂದ ಮಾಹಿತಿ ಪಡೆದಿದ್ದೇನೆ. ಕೆಲವೊಂದು ಮಾಹಿತಿ ಸತ್ಯ ಇರುತ್ತೆ, ಕೆಲವು ಸುಳ್ಳು ಇರುತ್ತದೆ.
ಆದರೂ ನಾವು ಎಚ್ಚರಿಕೆಯಿಂದ ಇರಬೇಕು ಎಂದರು. ಟ್ರಕ್ ಡ್ರೈವರ್‌ವೊಬ್ಬ ಇದ್ದ ಎಂಬ ಮಾಹಿತಿ ಬಂದಿತ್ತು. ಆದರೆ, ಖಚಿತತೆ ಇಲ್ಲ. ಇಂತಹ ವಿಚಾರದಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚಾಗಿದೆ. ನಾವು ಕೇಂದ್ರದ ಸೂಚನೆಗಳನ್ನು ಪಾಲನೆ ಮಾಡುತ್ತೇವೆ ಎಂದು ತಿಳಿಸಿದರು.
ಶೀಘ್ರ ತಂಡ ರಚನೆ: ಆಪರೇಷನ್ ಕಮಲ ಕಾರ್ಯಾಚರಣೆಗೆ ಸಂಬಂಧಿಸಿದ ಯಡಿಯೂರಪ್ಪ ಆಡಿಯೋ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಲೋಕಸಭೆ ಚುನಾವಣೆ ಇದ್ದ ಕಾರಣ ಆಡಿಯೋ ತನಿಖೆಗೆ ತಂಡ ರಚನೆ ಮಾಡುವುದು ವಿಳಂಬವಾಗಿದೆ.
ಈ ಬಗ್ಗೆ ಶೀಘ್ರವೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಮೇ 23 ರ ನಂತರ ಯಡಿಯೂರಪ್ಪ ಅವರ ಆಡಿಯೋ ತನಿಖೆಗೆ ತಂಡ ರಚನೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ಪತನಗೊಳಿಸುವ ನಿಟ್ಟಿನಲ್ಲಿ ನಡೆದ ಆಪರೇಷನ್ ಕಮಲ ಕಾರ್ಯಾಚರಣೆಯ ಆಡಿಯೋ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ವಿಧಾನಸಭೆಯಲ್ಲಿ ದಿನಗಟ್ಟಲೆ ಚರ್ಚೆಗೂ ಕಾರಣವಾಗಿತ್ತು. ಅಂತಿಮವಾಗಿ ಪ್ರಕರಣದ ತನಿಖೆಗೆ ಸರ್ಕಾರ ತೀರ್ಮಾನಿಸಿತ್ತು. ಆ ನಂತರ ತನಿಖೆಗೆ ತಂಡ ರಚನೆಯಾಗಿರಲಿಲ್ಲ.