ಬಜಪೆ: ಎಂಎಸ್‌ಇಝಡ್‌ನ ಅಣೆಕಟ್ಟು ಒಡೆದು ಮನೆ, ದೇವಸ್ಥಾನ ಹಾನಿಗೀಡಾದ ದೊಡ್ಡಿಕಟ್ಟ ಪ್ರದೇಶಕ್ಕೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಶಾಸಕ ಉಮಾನಾಥ ಕೋಟ್ಯಾನ್ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಶ್ರೀಸ್ವಯಂ ಭೂಲಿಂಗೇಶ್ವರ ದೇವಸ್ಥಾನ, ದೈವಸ್ಥಾನ ಹಾಗೂ ಮನೆಗಳಿಗೆ ಆಗಿರುವ ಹಾನಿಯ ತುರ್ತು ಪರಿಹಾರ ಕಾರ್ಯ ನಡೆಸುವಂತೆ ಮತ್ತು ಹಾನಿಗೀಡಾದ ವಸ್ತುಗಳ ಸಂಪೂರ್ಣ ಮೌಲ್ಯವನ್ನು ಭರಿಸುವಂತೆ ಎಂಎಸ್‌ಇಝಡ್ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.
ಈ ಸಂದರ್ಭ ಎಲ್.ವಿ. ಅಮೀನ್, ಮಾಧವ ಅಮೀನ್ ಹಾಗೂ ಗೋಪಾಲ ಅಮೀನ್ ದೇವಸ್ಥಾನ ಹಾಗೂ ಮನೆಗೆ ಆಗಿರುವ ಹಾನಿಯ ಬಗ್ಗೆ ಮಾಹಿತಿ ನೀಡಿದರು. ತುರ್ತಾಗಿ ಪರಿಹಾರ ಕಾರ್ಯಗಳನ್ನು ಮುಗಿಸುವಂತೆ ಆಗ್ರಹಿಸಿದರು. ಹೂಳು, ಮಣ್ಣು, ಕೆಸರು ತೆಗೆಯುವ ಕಾರ್ಯ ಭರದಿಂದ ಸಾಗುತ್ತಿದ್ದು, ಒಂದು ಜೆಸಿಬಿ ಹಾಗೂ ಎರಡು ಹಿಟಾಚಿಗಳು ಕಾರ್ಯ ನಿರತವಾಗಿವೆ. ಶುಕ್ರವಾರ ರಾತ್ರಿ ಒಂದು ಗಂಟೆ ತನಕ ಮಾಧವ ಅಮೀನ್ ಅವರ ಮನೆಯೊಳಗೆ ಕೆಸರಿನಲ್ಲಿ ಮುಳುಗಿದ್ದ ಮನೆ ಸಾಮಗ್ರಿಗಳನ್ನು ಹುಡುಕಿ ಹೊರಗಿಡಲಾಯಿತು. ಬಳಿಕ ನೀರಿನೊಂದಿಗೆ ಬಂದು ಮನೆಯೊಳಗೆ ತುಂಬಿದ್ದ ಕೆಸರು, ಮಣ್ಣು, ಗಿಡ ಗಂಟಿಗಳನ್ನು ತೆಗೆದು ಸ್ವತ್ಛಗೊಳಿಸಲಾಯಿತು.
ಮನೆ ಕೆಲವೆಡೆ ಬಿರುಕು ಬಿಟ್ಟಿದೆ. ಕಿಟಿಕಿ, ಬಾಗಿಲುಗಳು ಹಾನಿಗೀಡಾಗಿವೆ. ಕಪಾಟಿನಲ್ಲಿದ್ದ ಬಟ್ಟೆಬರೆ, ದಾಖಲೆಗಳು ಕೆಸರಿನಿಂದ ಮುದ್ದೆಯಾಗಿವೆ. ಫ್ರಿಜ್, ಟಿವಿ ಇನ್ನಿತರ ಎಲೆಕ್ಟ್ರಾನಿಕ್ ಸಾಮಗ್ರಿಗಳು ಉಪಯೋಗಕ್ಕಿಲ್ಲವಾಗಿವೆ. ನಾಯಿಗಳ ಶವ ಪತ್ತೆ ನೀರುಪಾಲಾಗಿದ್ದ ಎರಡು ನಾಯಿ ಗಳ ಮೃತ ದೇಹಗಳು ಗದ್ದೆಯ ಕೆಸರಿನಲ್ಲಿ ಪತ್ತೆಯಾಗಿವೆ. ಶನಿವಾರ ಅವುಗಳ ಅಂತ್ಯಕ್ರಿಯೆ ಮಾಡಲಾಯಿತು. ನೀರಿನೊಂದಿಗೆ ತೇಲಿಹೋದ ಸ್ಕೂಟರ್ ಮನೆಯ ಹಿಂದುಗಡೆ ಕೆಸರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ, ಬೆೈಕ್ ಗದ್ದೆಯಲ್ಲಿ ಹಿಡಿ ಇಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶನಿವಾರ ಬೆಳಗ್ಗೆ ದೇವಸ್ಥಾನ ಹಾಗೂ ದೈವಸ್ಥಾನದ ಆವರಣದಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯ ನಡೆಯಿತು.