Advertisement
ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಬಳಿಕ ಪ್ರತಿಕ್ರಿಯಿಸಿದ ಜಾಧವ್, “ನಾನು ಮೊದಲಿನಿಂದಲೂ ಮೈತ್ರಿ ಸರ್ಕಾರವನ್ನು ವಿರೋಧಿಸುತ್ತಲೇ ಇದ್ದೆ. ನನ್ನ ಕ್ಷೇತ್ರಕ್ಕೆ ಬರಬೇಕಿದ್ದ ಅನುದಾನವನ್ನು ಸಂಪೂರ್ಣ ನಿಲ್ಲಿಸಲಾಗಿತ್ತು. ಹಾಗಾಗಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸಂಸದನಾಗಿದ್ದೇನೆ’ ಎಂದರು.
Related Articles
Advertisement
ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್, ಇಡೀ ದೇಶಕ್ಕೆ ಬಹಳ ಆನಂದ ತಂದಿರುವ ದಿನಗಳಿವು. ಕರ್ನಾಟಕದಲ್ಲೂ ಪಕ್ಷಕ್ಕೆ ಅಭೂತಪೂರ್ವ ಗೆಲುವು ದೊರಕಿದೆ. ಅನಂತ ಕುಮಾರ್ ಅವರ ಸಹೋದ್ಯೋಗಿಗಳು ಅವರನ್ನು ನೆನಪಿಸಿಕೊಂಡಿದ್ದಾರೆ. ಕೇಂದ್ರ ಸಚಿವ ಸ್ಥಾನಕ್ಕೆ ರಾಜ್ಯದಲ್ಲಿ ಹಲವು ಮಂದಿ ಸಮರ್ಥ ಸಂಸದರಿದ್ದಾರೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮೋದಿಯವರು ನಿರ್ಧರಿಸುತ್ತಾರೆ. ದೇಶಕ್ಕೆ ಯಾವುದು ಸೂಕ್ತವೋ ಅಂತಹ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಮಣ್ಣಿನ ಮಗ ಹಾಸನಕ್ಕೆ ಹೊರತು ತುಮಕೂರಿಗಲ್ಲ: ತುಮಕೂರು ಕ್ಷೇತ್ರದ ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ದೇವೇಗೌಡರು ಹಾಸನಕ್ಕೆ ಮಣ್ಣಿನ ಮಗನೇ ಹೊರತು ತುಮಕೂರಿಗಲ್ಲ. ತುಮಕೂರಿನ ಮಣ್ಣಿನ ಮಗ ಗೆದ್ದಾಯ್ತು. ದೇವೇಗೌಡರು ಬಹಳ ಜನರ ಸೋಲಿಗೆ ಕಾರಣರಾಗಿದ್ದಾರೆ. ಎರಡು ಬಾರಿ ನನ್ನ ಸೋಲಿಗೂ ಕಾರಣರಾಗಿದ್ದಾರೆ. ಈ ಬಾರಿ ಆಕಸ್ಮಿಕವಾಗಿ ನನ್ನ ಕೈಗೆ ಸಿಕ್ಕಿ ಹಾಕಿಕೊಂಡರು. ಜನ ತಕ್ಕ ಪಾಠ ಕಲಿಸಿದ್ದಾರೆ.
ಅವರು ವಯೋವೃದ್ಧರು. ಇನ್ನಾದರೂ ನೆಮ್ಮದಿಯಿಂದ ರಾಜಕಾರಣ ಮಾಡಿಕೊಂಡಿರಲಿ. ಮಹಾಘಟಬಂಧನವೆಲ್ಲಾ ಬೇಡ ಎಂದು ಹೇಳಿದರು. ಅವರ ದ್ವೇಷದ ರಾಜಕಾರಣವೇ ಸೋಲಿಗೆ ಕಾರಣವಾಯಿತು. ತುಮಕೂರಿಗೆ ಹೇಮಾವತಿ ನೀರು ಹರಿಯದಂತೆ ಅವರು ಹಾಗೂ ಅವರ ಪುತ್ರ ಎಚ್.ಡಿ.ರೇವಣ್ಣ ಮೋಸ ಮಾಡಿದರು. ಕಾಂಗ್ರೆಸ್‌ನವರೂ ನಮ್ಮ ಸ್ನೇಹಿತರೇ. ತುಮಕೂರಿನಲ್ಲಿ ದೇವೇಗೌಡರು ಹಾಗೂ ನನಗೆ ಸ್ಪರ್ಧೆಯಿತ್ತು. ಕಾಂಗ್ರೆಸ್ ನಾಯಕರು ನನಗೆ ಸಹಕಾರ ನೀಡಿರಬಹುದೇನೋ. ಅವರಿಗೂ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.
ಚಿಂಚೋಳಿಯಲ್ಲಿ ಗೆದ್ದ ಪಕ್ಷ ಅಧಿಕಾರಕ್ಕೆ: ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ಚಿಂಚೋಳಿ ಕ್ಷೇತ್ರದಲ್ಲಿ ಗೆದ್ದ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯುತ್ತದೆಯಂತೆ. ಅದು ಈಗ ಕಾಕತಾಳೀಯವೋ ಏನೋ ಅದೇ ರೀತಿ ಆಗುತ್ತಿರುವಂತಿದೆ. ಚಿಂಚೋಲಿಯಲ್ಲಿ ಬಿಜೆಪಿ ಗೆದ್ದಿದೆ. ತುಮಕೂರು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಕಾಂಗ್ರೆಸ್ಸಿಗರ ಕೊಡುಗೆಯೂ ಇದೆ ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದರೆ ಅದು ಅವರ ವೈಯಕ್ತಿಕ ನಿರ್ಧಾರ. ಅದಕ್ಕೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಕೆ.ಎಚ್.ಮುನಿಯಪ್ಪ ಅವರನ್ನು ಪರಾಭವಗೊ ಳಿಸಿದ ಬಿಜೆಪಿಯ ಮುನಿಸ್ವಾಮಿಯವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಿದರು.
ಬಳಿಕ ಪ್ರತಿಕ್ರಿಯಿಸಿದ ಅವರು, “ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಶಾಸಕರನ್ನು ಕರೆ ತರುವುದಾಗಿ ನಾನು ಹೇಳಿಲ್ಲ. ಕಳ್ಳರು, ಸುಳ್ಳರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ. ಮಾಜಿ ಶಾಸಕರಾದ ಸುಧಾಕರ್, ಕೊತ್ತೂರು ಮಂಜುನಾಥ್, ಮಂಜುನಾಥಗೌಡ ಅವರಂಥವರೆಲ್ಲಾ ಬಿಜೆಪಿ ಸೇರಲಿದ್ದಾರೆ ಎಂದಷ್ಟೇ ಹೇಳಿದ್ದೇನೆ. ನಾನು ಕೋಲಾರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕರೂ ಕಾರಣ ಎಂದಷ್ಟೇ ಹೇಳಬಲ್ಲೆ. ಹಾಗೆಂದು ಅವರನ್ನೆಲ್ಲಾ ಬಿಜೆಪಿಗೆ ಕರೆ ತರುವುದಾಗಿ ರಾಜ್ಯಾಧ್ಯಕ್ಷರಿಗೆ ಭರವಸೆ ನೀಡಿಲ್ಲ’ ಎಂದು ಸ್ಪಷ್ಟನೆ ನೀಡಿದರು.
ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಕಾಂಗ್ರೆಸ್ ವಿಭಜನೆಯ ಹಾದಿಯಲ್ಲಿದ್ದು, ಅದರ ಪರಿಣಾಮ ರಾಜ್ಯದ ಮೇಲೂ ಉಂಟಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸಂಬಂಧ ಹಳಸಿದೆ. ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಜ್ಯದಲ್ಲೂ ರಾಜಕೀಯ ಧ್ರುವೀಕರಣ ಶುರುವಾಗಲಿದೆ. ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಶಾಸಕರ ಬಲ ಬಿಜೆಪಿಗೆ ಸಿಗಲಿದೆ. ಅದು ಹೇಗೆ ಎಂಬುದನ್ನು ಮುಂದೆ ನೋಡುತ್ತೀರಿ.-ಬಸವರಾಜ ಬೊಮ್ಮಾಯಿ, ಮಾಜಿ ಸಚಿವ.