ಲಂಡನ್: ಆಗರ್ಭ ಶ್ರೀಮಂತರಷ್ಟೇ ಕೊಳ್ಳಬಹುದಾದ ರೋಲ್ಸ್ ರಾಯ್ಸ್ ಕಾರುಗಳನ್ನು ಜನಸಾಮಾನ್ಯರು ದೂರದಿಂದ ನೋಡಿಯಷ್ಟೇ ಖುಷಿಪಡುತ್ತಾರೆ.
ಇಂತಹ ಹೊತ್ತಿನಲ್ಲಿ ಭಾರತೀಯ ಮೂಲದ ಇಂಗ್ಲೆಂಡ್ ಉದ್ಯಮಿ ರೂಬೆನ್ ಸಿಂಗ್ 15 ರೋಲ್ಸ್ ರಾಯ್ಸ್ ಕಾರುಗಳನ್ನು ತಮ್ಮ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದಾರೆ. ಅದೂ ತಮ್ಮಲ್ಲಿರುವ ವಿವಿಧ ಬಣ್ಣದ ಪೇಟಗಳಿಗೆ ಹೊಂದುವಂತಹ ಕಾರುಗಳು!
ಅವರಿಗೆ ಕಾರುಗಳೆಂದರೆ ಬಹಳ ಪ್ರೀತಿ, ಹಾಗಾಗಿ ಹಲವು ಕಂಪನಿಗಳ ದುಬಾರಿ ಕಾರುಗಳನ್ನು ಸಂಗ್ರಹಿಸಿದ್ದಾರೆ. ಅವರ ಬಳಿಯರುವ ಕಾರುಗಳ ಮೌಲ್ಯವೇ ಹಲವು ನೂರು ಕೋಟಿ ರೂ.ಗಳನ್ನು ದಾಟುತ್ತದೆ!
ಅವರು ರೋಲ್ಸ್ ರಾಯ್ಸ್ ಕಾರುಗಳ ಜೊತೆಗೆ ನಿಂತು ತೆಗೆಸಿಕೊಂಡಿರುವ ಚಿತ್ರಗಳು ವೈರಲ್ ಆದ ನಂತರ ರೂಬೆನ್ ಸಿಂಗ್ ಜನಪ್ರಿಯರಾದರು. ಕಳೆದ ದೀಪಾವಳಿಯಂದು ತಮಗೆ ತಾವೇ 5 ರೋಲ್ಸ್ ರಾಯ್ಸಗಳನ್ನು ಕಾಣಿಕೆಯಾಗಿ ನೀಡಿಕೊಂಡರು! ಆದರೆ ಕಾರುಗಳು ಮಾಡೆಲ್‌ಗಳು, ಬೆಲೆಯ ಬಗ್ಗೆ ಖಚಿತ ಮಾಹಿತಿಯಿಲ್ಲ. ಲ್ಯಾಂಬೊರ್ಗಿನಿ ಹುರಕಾನ್, ಬುಗಾಟಿ ವೇಯ್ರಾನ್, ಫೆರಾರಿ ಎಫ್ 12, ಪೋರ್ಶೆ 918 ಸ್ಪೈಡರ್, ಪಗಾನಿ ಹ್ವಾಯ್ರ ಕಂಪನಿ ಕಾರುಗಳೂ ಇವೆ.
ಅಂದಹಾಗೆ ರೂಬೆನ್ ಸಿಂಗ್ ಕುಟುಂಬ ಇಂಗ್ಲೆಂಡ್‌ಗೆ ವಲಸೆ ಬಂದಿದ್ದು 1970ರಲ್ಲಿ. ಅವರು ಇಶರ್ ಕ್ಯಾಪಿಟಲ್ ಮತ್ತು ಆಲ್‌ಡೇಪಿಎ ಎಂಬೆರಡು ಕಂಪನಿಗಳ ಮಾಲಿಕರು. ಬ್ರಿಟನ್ನಿನ ಬಿಲ್ ಗೇಟ್ಸ್ ಎಂದೇ ಇವರನ್ನು ಹೊಗಳಲಾಗುತ್ತದೆ. ಅವರು ತಮ್ಮನ್ನು ತಾವು ಹೆಮ್ಮೆಯ ಬ್ರಿಟಿಷ್ ಸಿಖ್ ಎಂದು ಬಣ್ಣಿಸಿಕೊಳ್ಳುತ್ತಾರೆ.