ಅದೊಂದು ಅಪರೂಪದ ವೇದಿಕೆ ಎಂದರೆ ತಪ್ಪಲ್ಲ. ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದ ಯಶಸ್ವಿ ಚಿತ್ರಗಳನ್ನು ಕೊಡುತ್ತಾ, ತಮ್ಮ ಹೆಸರಿನ ಮೂಲಕ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವ ಸಾಮರ್ಥ್ಯದೊಂದಿಗೆ ಸ್ಟಾರ್ ಡೈರೆಕ್ಟರ್ ಎಂದು ಕರೆಸಿಕೊಳ್ಳುವ ನಿರ್ದೇಶಕರೆಲ್ಲಾ ಒಂದೇ ವೇದಿಕೆಯಲ್ಲಿ ಸೇರಿದ್ದರು. ಎಲ್ಲರೂ ಒಟ್ಟಾಗಿ ಸನ್ಮಾನ ಸ್ವೀಕರಿಸಿದರು ಕೂಡಾ.
ಯೋಗರಾಜ್ ಭಟ್, ಸೂರಿ, ಶಶಾಂಕ್ ಹಾಗೂ ಆರ್.ಚಂದ್ರು ಆ ವೇದಿಕೆಯಲ್ಲಿದ್ದ ನಿರ್ದೇಶಕರು. ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ಕೊಡುತ್ತಾ ಬಂದಿರುವ ಈ ನಿರ್ದೇಶಕರುಗಳ ಸಮಾಗಮಕ್ಕೆ ಸಾಕ್ಷಿಯಾಗಿದ್ದು “ಕನಕ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ.
ನಿರ್ದೇಶಕ ಆರ್. ಚಂದ್ರು ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದ ಇರುವ ಮೂವರು ನಿರ್ದೇಶಕರುಗಳ ಕೈಯಿಂದ ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಿಸುವ ಯೋಚನೆ ಮಾಡಿದರು. ಅದರಂತೆ ಆ ಮೂವರು ನಿರ್ದೇಶಕರು ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಬಂದಿದ್ದರು. ಅದರಂತೆ ಯೋಗರಾಜ್ ಭಟ್, ಸೂರಿ ಹಾಗೂ ಶಶಾಂಕ್ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು.
ಈ ವೇಳೆ ಅವರಿಗೆ ಸನ್ಮಾನ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು. ಹಾಗಾಗಿ, “ಕನಕ’ ತಂಡ ಮೂವರು ಅತಿಥಿಗಳ ಜೊತೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಮಾಡಿಕೊಂಡು ಬರುತ್ತಿರುವ ಆರ್.ಚಂದ್ರು ಅವರಿಗೂ ಸನ್ಮಾನ ಮಾಡಿತು. ಹಾಗಾಗಿ, ನಾಲ್ಕು ಮಂದಿ ನಿರ್ದೇಶಕರು ಒಂದೇ ವೇದಿಕೆಯಲ್ಲಿ ಸೇರಿದಂತಾಯಿತು.
ಆ ವೇದಿಕೆಯ ಮತ್ತೂಂದು ವಿಶೇಷವೆಂದರೆ ಸನ್ಮಾನ ಸ್ವೀಕರಿಸಿದ ನಾಲ್ಕು ಮಂದಿ ನಿರ್ದೇಶಕರು ಕೂಡಾ ದುನಿಯಾ ವಿಜಯ್‌ಗೆ ಸಿನಿಮಾ ಮಾಡಿದ್ದಾರೆ. ನಿರ್ದೇಶಕ ಸೂರಿ, ವಿಜಿಗೆ “ದುನಿಯಾ’ ಮಾಡಿದರೆ, ಯೋಗರಾಜ್ ಭಟ್ “ದನ ಕಾಯೋನು’ ಚಿತ್ರ ಮಾಡಿದ್ದಾರೆ. ಶಶಾಂಕ್ ಅವರು “ಜರಾಸಂಧ’ ಚಿತ್ರದ ಮೂಲಕ ಆ್ಯಕ್ಷನ್ ಪ್ರಯತ್ನಿಸಿದ್ದರು.
ಈಗ ಆರ್.ಚಂದ್ರು ವಿಜಿಗೆ “ಕನಕ’ ಚಿತ್ರ ನಿರ್ದೇಶಿಸಿದ್ದಾರೆ. “ಯೋಗರಾಜ್ ಭಟ್, ಸೂರಿ ಸೇರಿದಂತೆ ಅನೇಕ ನಿರ್ದೇಶಕರು ನನಗೆ ಪ್ರೇರಣೆ. ದಶಕಗಳಿಂದ ಚಿತ್ರರಂಗದಲ್ಲಿರುವ ಅವರನ್ನು ಸನ್ಮಾನಿಸುವ ಅವಕಾಶ ನನಗೆ ಸಿಕ್ಕಿದ್ದು ಖುಷಿಯ ವಿಚಾರ’ ಎನ್ನುವುದು ಆರ್.ಚಂದ್ರು ಮಾತು.