ಅಮೆಜಾನ್ ಅಲೆಕ್ಸಾ, Apple Siri ಮತ್ತು ಗೂಗಲ್ ಅಸಿಸ್ಟೆಂಟ್ ನಂತಹ ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಧ್ವನಿಯಾಧಾರಿತ AI ಚಾಟ್ ಬಾಟ್ ಗಳು ಈಗ ಬಹುತೇಕ ಎಲ್ಲಾ ಡಿವೈಸ್ (ಮೊಬೈಲ್)ಗಳಲ್ಲಿ ಕಾಣಬಹುದಾಗಿದೆ. ಆದರೆ ಭಾರತೀಯ ಮೂಲದ ವಿಜ್ಞಾನಿ ದಬ್ಬಾಲಾ ರಾಜಗೋಪಾಲ್ “ರಾಜ್ ರೆಡ್ಡಿ” ನಿರ್ಣಾಯಕ ಕೃತಕ ಬುದ್ದಿಮತ್ತೆ (AI) ತಂತ್ರಜ್ಞಾನ ಸಂಶೋಧನೆಯಲ್ಲಿನ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು ಎಂಬುದಾಗಿ ಪರಿಗಣಿಸಲಾಗುತ್ತಿದೆ.
ರಾಜ್ ರೆಡ್ಡಿ ಜೂನ್ 13ರಂದು 86ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಪ್ರಸ್ತುತ ರೆಡ್ಡಿಯವರು ಕಾರ್ನೇಗೀ ಮೆಲ್ಲನ್ ಯೂನಿರ್ವಸಿಟಿಯ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಮನುಷ್ಯ ಮತ್ತು ಕಂಪ್ಯೂಟರ್ ಸಂವಹನ, ಕೃತಕ ಬುದ್ಧಿಮತ್ತೆ ಅಧ್ಯಯನ, ಸ್ಪೋಕನ್ ಲಾಂಗ್ವೇಜ್ ಸಿಸ್ಟಮ್, ಗಿಗಾಬೈಟ್ ನೆಟ್ ವರ್ಕ್ಸ್, ಸಾರ್ವತ್ರಿಕ ಡಿಜಿಟಲ್ ಲೈಬ್ರೆರಿ ಮತ್ತು ದೂರಶಿಕ್ಷಣ ಕುರಿತ ಸಂಶೋಧನೆಯಲ್ಲಿ ರಾಜ್ ರೆಡ್ಡಿ ಮುಂಚೂಣಿಯಲ್ಲಿದ್ದರು.
1937ರ ಜೂನ್ 13ರಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಗ್ರಾಮ ಕಾಟೂರ್ ನಲ್ಲಿ ಜನಿಸಿದ್ದರು. ಆ ಸಂದರ್ಭದಲ್ಲಿ ಕಾಟೂರ್ ನಲ್ಲಿ ವಿದ್ಯುತ್ ಸಂಪರ್ಕವಾಗಲಿ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳೇ ಇರಲಿಲ್ಲವಾಗಿತ್ತು. ಪೆನ್ಸಿಲ್, ಪೇಪರ್ ಇಲ್ಲದೆ ಮರಳಿನಲ್ಲಿ ಬರೆದು ವಿದ್ಯಾಭ್ಯಾಸ ಕಲಿತಿದ್ದರು ರೆಡ್ಡಿ. ತಂದೆ ಶ್ರೀನಿವಾಸಲು ರೈತರಾಗಿದ್ದು, ತಾಯಿ ಪಿಚಮ್ಮ ಗೃಹಿಣಿಯಾಗಿದ್ದರು. ಶ್ರೀನಿವಾಸಲು ಕುಟುಂಬದಲ್ಲಿ ಕಾಲೇಜು ಮೆಟ್ಟಿಲೇರಿದ ಮೊದಲ ಸದಸ್ಯ ರಾಜ್ ರೆಡ್ಡಿ.
ನಂತರ ಮದ್ರಾಸ್ (ಈಗ ಚೆನ್ನೈ) ನ ಗಿಂಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದು, ತದನಂತರ ಸಿಡ್ನಿಯ ನ್ಯೂ ಸೌತ್ ವೇಲ್ಸ್ ಯೂನಿರ್ವಸಿಟಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದರು. ಸ್ಟ್ಯಾನ್ ಫೋರ್ಡ್ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಡಾಕ್ಟರೇಟ್ ಪಡೆದಿದ್ದು, ನಂತರ ಮೂರು ವರ್ಷಗಳ ಕಾಲ ಸ್ಟ್ಯಾನ್ ಫೋರ್ಡ್ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.
ಸ್ಟ್ಯಾನ್ ಫೋರ್ಡ್ ವಿವಿಯಿಂದ ಕಾರ್ನೇಗೀ ಮೆಲ್ಲನ್ ಯೂನಿರ್ವಸಿಟಿಗೆ ಸೇರಿದ ಬಳಿಕ ಇಲ್ಲಿ ರೋಬೋಟಿಕ್ಸ್ ಸಂಸ್ಥೆಯನ್ನು ಹುಟ್ಟುಹಾಕಿ, ಈವರೆಗೂ ರೋಬೋಟಿಕ್ಸ್ ಕುರಿತು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ. AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಗ್ಗೆ ಹೆಚ್ಚು ಚರ್ಚೆ ನಡೆಯದಿದ್ದ ಕಾಲದಲ್ಲಿ ರಾಜ್ ರೆಡ್ಡಿಯವರ ಆಸಕ್ತಿ ಹೊರಳಿದ್ದು, ಎಐ ತಂತ್ರಜ್ಞಾನದ ಬಗ್ಗೆ. ವಿಜ್ಞಾನದ ಹೊಸ ಆಯಾಮತ್ತ ಸಂಶೋಧನೆಯಲ್ಲಿ ತೊಡಗಿದ ರಾಜ್ ರೆಡ್ಡಿಯವರು ಈ ನಿಟ್ಟಿನಲ್ಲಿ ಮಹತ್ವದ ಸಾಧನೆಗೈದಿದ್ದರು. ಇಂದು ಎಲ್ಲೆಡೆ ಚರ್ಚೆಯಾಗುತ್ತಿರುವ ಚಾಟ್ ಬಾಟ್ ನಂತಹ AI ತಂತ್ರಜ್ಞಾನದ ಹಿಂದಿನ ಮಾಸ್ಟರ್ ಮೈಂಡ್ ಗಳಲ್ಲಿ ರಾಜ್ ರೆಡ್ಡಿ ಕೂಡಾ ಒಬ್ಬರು ಎಂಬುದು ಹೆಮ್ಮೆಯ ಸಂಗತಿಯಾಗಿದೆ.
2001ರಲ್ಲಿ ಭಾರತ ಸರ್ಕಾರವು ರೆಡ್ಡಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. 2004ರಲ್ಲಿ ಕೃತಕ ಬುದ್ದಿಮತ್ತೆಯ ಕೊಡುಗೆಗಾಗಿ ಒಕಾವಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, 2005ರಲ್ಲಿ ರೋಬೊಟಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಅಲ್ಲಿ ಅವರ ಕೊಡುಗೆಗಾಗಿ ಹೋಂಡಾ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.