ನವದೆಹಲಿ: ಇತ್ತೀಚಿನ ಯುವಜನರು ಮೊಬೈಲ್ ಫೋನ್ ಬಿಟ್ಟು ಎಲ್ಲಿಗೂ ಹೋಗಲ್ಲ. ಎಲ್ಲಿ ಹೋದರೂ ಮೊಬೈಲ್ ಫೋನ್ ಬೇಕು ಅದರಲ್ಲಿ ಡೇಟಾ ಪ್ಯಾಕ್ ಇರಬೇಕು. ರೀಲ್ಸ್ ನೋಡಲು ಚಾರ್ಜ್ ಇರಬೇಕು. ಇವಿಷ್ಟಿದ್ದರೆ ಸಾಕು ದಿನದ ಸಮಯ ವ್ಯರ್ಥ ಆಗುವುದೇ ಗೊತ್ತಾಗುವುದಿಲ್ಲ.
ಸಣ್ಣ ಮಕ್ಕಳು ಕೂಡ ಪಬ್ ಜಿ, ಫ್ರೀ ಫೈಯರ್ ನಂತಹ ಗೇಮ್ ಗಳ ದಾಸನಾಗುತ್ತಿದ್ದಾರೆ. ಪೋಕೆಮಾನ್ ಯಾರಿಗೆ ಗೊತ್ತಿಲ್ಲ ಹೇಳಿ, ಟಿವಿಗಳಲ್ಲಿ ನಾವು ನೋಡಿದ್ದೇವೆ. ವಿಡಿಯೋ ಗೇಮ್ ಗಳಲ್ಲಿ ಗೇಮ್ ಆಡಿದ್ದೇವೆ. ಇತ್ತೀಚೆಗಿನ ದಿನಗಳಲ್ಲಿ ಈ ʼಪೋಕೆಮಾನ್ ಗೋʼ ಎನ್ನುವ ಗೇಮ್ ವೊಂದು ಬಹಳ ಜನಪ್ರಿಯವಾಗಿದೆ.
ಈ ಗೇಮ್ 8 ವರ್ಷದ ಮಕ್ಕಳಿಂದ ಹಿಡಿದು 80 ವರ್ಷ ದಾಟಿದ ವೃದ್ಧರಿಗೂ ಫೇವರಿಟ್. ತೈವಾನ್ ಮೂಲದ ಚೆನ್ ಸ್ಯಾನ್-ಯುವಾನ್ ಎಂಬ 74 ವರ್ಷದ ಅಜ್ಜನೊಬ್ಬ ಈ ಗೇಮ್ ನ ದಾಸನಾಗಿದ್ದಾನೆ. ಅದು ನಮ್ಮ ನಿಮ್ಮ ಹಾಗೆ ಒಂದರ್ಧ ಗಂಟೆ ಗೇಮ್ ಆಡಿ, ಅಥವಾ ರೀಲ್ಸ್ ನೋಡುವ ದಾಸನಾಗಿ ಅಲ್ಲ. ಪ್ರತಿನಿತ್ಯ, ಪ್ರತಿ ನಿಮಿಷವೂ ಗೇಮ್ ನಲ್ಲೇ ಕಾಲ ಕಳೆಯುವ ಚಟ ಇವರದು.!
2018 ರಲ್ಲಿ ಚೆನ್ ಸ್ಯಾನ್-ಯುವಾನ್ ಅವರ ಮೊಮ್ಮಗ ಪೋಕೆಮಾನ್ ಗೋ ಮೊಬೈಲ್ ಗೇಮ್ ನ್ನು ಅಜ್ಜನಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಅಂದಿನಿಂದ ಹಿಡಿದ ಚಟ ಇಂದಿಗೂ ಹೋಗಿಲ್ಲ. ಎಲ್ಲಿಯವರೆಗೆ ಅಂದರೆ ಗೇಮ್ ಆಡಲು ಇವರು ಒಂದು ಸೈಕಲ್ ನಲ್ಲಿ ದೊಡ್ಡ ಪರದೆಯನ್ನೇ ಹಾಕಿರುವಂತೆ ಸ್ಟ್ಯಾಂಡ್ ವೊಂದನ್ನು ಇಟ್ಟು ಅದರಲ್ಲಿ ಒಂದೊಂದೇ ಮೊಬೈಲ್ ಇಟ್ಟಿದ್ದಾರೆ. ಒಂದಲ್ಲ ಎರಡಲ್ಲ 64 ಮೊಬೈಲ್ ಫೋನ್ ಗಳಲ್ಲಿ ಇವರು ಗೇಮ್ ಆಡುತ್ತಾರೆ.
ಎಲ್ಲಾ ಮೊಬೈಲ್ ಗಳಲ್ಲಿ ಪೋಕೆಮಾನ್ ಗೋ ಆಡುತ್ತಾರೆ. ಇವರು ಎಲ್ಲಿ ಹೋದರೂ, ಯಾವ ಬೀದಿ ಸುತ್ತಿದ್ದರೂ, ಇವರನ್ನು ಎಲ್ಲರೂ ನೋಡುತ್ತಾರೆ. ಯಾಕೆಂದರೆ ಇವರು ಮೊಬೈಲ್ ಅಂಗಡಿಯನ್ನೇ ಹೊತ್ತುಕೊಂಡು ಹೋದವರಂತೆ, ಎಲ್ಲಾ ಮೊಬೈಲ್ ನಲ್ಲೂ ಪೋಕೆಮಾನ್ ಗೋ ಗೇಮ್ ಆನ್ ಮಾಡಿಕೊಂಡೇ ಹೋಗುತ್ತಾರೆ.
ಇವರನ್ನು ಸ್ಥಳೀಯರು ʼಪೋಕೆಮಾನ್ ಗೋ ಅಜ್ಜʼ ಎಂದೇ ಕರೆಯುತ್ತಾರೆ. ಆ ಹೆಸರಿನಿಂದಲೇ ಇವರು ಖ್ಯಾತಿಯನ್ನು ಗಳಿಸಿದ್ದಾರೆ.ಇವರ ಈ ಗೇಮ್ ಚಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.