Advertisement

81ರ ನೂರ್‌ ಬಕ್ಷ್: 18ರ ತರುಣರನ್ನೂ ಮೀರಿಸುವ ಬಾಂಗ್ಲಾದ ಕ್ರಿಕೆಟ್‌ ಪ್ರೇಮಿ

09:48 AM Nov 16, 2019 | Sriram |

ಇಂದೋರ್‌: ಸಂಗೀತವಾದ್ಯ ಹಿಡಿದು ಕ್ರಿಕೆಟ್‌ ಪಂದ್ಯಗಳ ವೇಳೆ ಜಾನಪದ ಗೀತೆಗಳನ್ನು ಹಾಡುತ್ತ ತಮ್ಮ ದೇಶದ ತಂಡವನ್ನು ಹುರಿದುಂಬಿಸುವ ಈತನ ಹೆಸರು ನೂರ್‌ ಬಕ್ಷ್ ಬಾಯಿ ತೆರೆದರೆ ಬ್ರಹ್ಮಾಂಡ! ವಯಸ್ಸು 81 ವರ್ಷ. 18ರ ತರುಣರನ್ನೂ ಮೀರಿಸುವ ಕ್ರಿಕೆಟ್‌ ಪ್ರೀತಿ!

Advertisement

ಇಂದೋರ್‌ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಪ್ರಮುಖ ಆಕರ್ಷಣೆಯಾಗಿದ್ದ ನೂರ್‌ ಬಕ್ಷ್, ಬಾಂಗ್ಲಾದೇಶದ ಕಟ್ಟಾ ಕ್ರಿಕೆಟ್‌ ಅಭಿಮಾನಿ. ಕಳೆದ 15 ವರ್ಷಗಳಿಂದ ಬಾಂಗ್ಲಾ ತಂಡ ಹೋದಲ್ಲೆಲ್ಲ ಪಯಣ. ವಿಶ್ವ ಸಂಚಾರಿ. ಸದ್ಯ ಭಾರತದಲ್ಲಿ ಕ್ಯಾಂಪ್‌.

ನಿವೃತ್ತ ಸೈನಿಕ…
ನೂರ್‌ ಬಕ್ಷ್ ದೇಶಪ್ರೇಮಕ್ಕೆ ಮೂಲ ಕಾರಣ ಸೇನಾ ವೃತ್ತಿ. 1971ರ ಬಾಂಗ್ಲಾ ವಿಮೋಚನೆ ಯುದ್ಧದ ವೇಳೆ ಬಕ್ಷ್ ಸೇನೆಯಲ್ಲಿದ್ದರು. ಇಳಿ ವಯಸ್ಸಿನಲ್ಲೀಗ ಕ್ರಿಕೆಟ್‌ ವೀಕ್ಷಣೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ತನಗೆ ಬರುತ್ತಿರುವ ಪಿಂಚಣಿ ಹಣವನ್ನು ದಿನನಿತ್ಯದ ವೆಚ್ಚಕ್ಕೆ ಬಳಸುತ್ತಾರೆ. ಕ್ರಿಕೆಟ್‌ ಪಂದ್ಯಗಳ ಟಿಕೆಟ್‌ ವ್ಯವಸ್ಥೆಯನ್ನೆಲ್ಲ ಬಾಂಗ್ಲಾ ಆಟಗಾರ ಮುಶ್ಫಿಕರ್‌ ರಹೀಂ ಮಾಡಿಕೊಡುತ್ತಾರೆ.

“ಢಾಕಾದಿಂದ ರೈಲು ಹತ್ತಿ ಇದೀಗ ಇಂದೋರ್‌ಗೆ ಬಂದಿದ್ದೇನೆ. ಸೇನೆಯಲ್ಲಿದ್ದ ಕಾರಣ ಪ್ರಯಾಣದ ಟಿಕೆಟ್‌ ಮೊತ್ತದಲ್ಲಿ ರಿಯಾಯಿತಿ ಇದೆ. ರಹೀಂ ಎಲ್ಲ ಪಂದ್ಯಗಳ ಟಿಕೆಟ್‌ ಕೊಡಿಸುತ್ತಾರೆ. ಟಿಕೆಟ್‌ ಪಡೆಯಲು ತಂಡದ ಹೊಟೇಲ್‌ಗೆ ತೆರಳುತ್ತೇನೆ. ಬಾಂಗ್ಲಾವನ್ನು ಹುರಿದುಂಬಿಸುತ್ತೇನೆ’ ಎನ್ನುತ್ತಾರೆ ನೂರ್‌ ಬಕ್ಷ್.

“32 ವರ್ಷಗಳಿಂದ ಪಿಂಚಣಿ ಹಣದಲ್ಲಿ ಬದುಕುತ್ತಿದ್ದೇನೆ. ಕ್ರಿಕೆಟ್‌ ಇಲ್ಲದ ವೇಳೆ ತಿನ್ನುವುದು, ನಿದ್ದೆ ಮಾಡುವುದು, ಸುತ್ತಾಡುವುದು ನನ್ನ ದಿನಚರಿ. ಅಭಿಮಾನಿಗಳು ನನ್ನನ್ನು ಚಾಚಾ ಎನ್ನುತ್ತಾರೆ’ ಎಂದು ಬಕ್ಷ್ ಹೇಳಿಕೊಳ್ಳುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next