Advertisement

ನರೇಂದ್ರ ಮೋದಿ-ಕ್ಸಿ ಜಿನ್‌ಪಿಂಗ್‌ ಭೇಟಿ, ಸುಧಾರಿಸಲಿ ಸಂಬಂಧ

10:57 AM Apr 25, 2018 | Team Udayavani |

ಡೋಕ್ಲಾಂನಿಂದ ಉದ್ಭವವಾದ ಕಹಿಯನ್ನು ತಗ್ಗಿಸಲು ಚೀನಾ ಬಯಸುತ್ತದಾ? ಅದರ ಇತ್ತೀಚಿನ ಎರಡು ನಡೆಗಳು ಈ ಬಗ್ಗೆ ಸುಳಿವು ಬಿಟ್ಟು ಕೊಡುತ್ತಿವೆ. 

Advertisement

ಪ್ರಧಾನಿ ನರೇಂದ್ರ ಮೋದಿ ಈ ವಾರ ಚೀನಾ ಪ್ರವಾಸಕ್ಕೆ ತೆರಳಲಿದ್ದಾರೆ. ಅಲ್ಲಿ ಅವರು ಯಾವುದೋ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹೋಗುತ್ತಿಲ್ಲ, ಬದಲಾಗಿ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಬಗ್ಗೆ ಚೀನ ಅಧ್ಯಕ್ಷ ಜಿನ್‌ಪಿಂಗ್‌ರೊಂದಿಗೆ ಮಾತುಕತೆಯಾಡಲಿದ್ದಾರೆ. 

ಮೋದಿ ಏ. 27, 28ರಂದು ಚೀನದ  ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಭೇಟಿಯಾಗಲಿದ್ದಾರೆ ಎಂಬ ವಿದೇಶಾಂಗ ಇಲಾಖೆಯ ಘೋಷಣೆಯು ಭಾರತೀಯರ ಹುಬ್ಬು ತುಸು ಮೇಲೇರುವಂತೆ ಮಾಡಿದ್ದರೂ ಅಚ್ಚರಿಯೇನಿಲ್ಲ. ಏಕೆಂದರೆ ಡೋಕ್ಲಾಂ ವಿಚಾರದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧ ಬಿಗಡಾಯಿಸಿತ್ತು. 

ಈ ಭೇಟಿಯ ಮೂಲ ಉದ್ದೇಶ ಈ ಬಿಕ್ಕಟ್ಟನ್ನು ಶಮನಗೊಳಿಸುವುದು ಮತ್ತು ಪರಸ್ಪರ ಸಂಬಂಧವನ್ನು ಉತ್ತಮಗೊಳಿಸುವುದಾಗಿದೆ. ಮೋದಿಯವರ ಚೀನ ಭೇಟಿಯ ಕಾರ್ಯಕ್ರಮ ನಿಗದಿಯಾಗಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರುಗಳ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ ವೇಳೆಯಲ್ಲಿ. ಈ ರೀತಿಯ ಆಯೋಜನೆಗಳು ಹೊಸದೇನೂ ಅಲ್ಲ. 1988ರಲ್ಲಿ ಭಾರತದ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಮತ್ತು ಪೀಪಲ್‌ ರಿಪಬ್ಲಿಕ್‌ ಆಫ್ ಚೀನದ ಸರ್ವೋಚ್ಚ ನಾಯಕ ಡೆಂಗ್‌ ಶ್ಯಾವೋ ಪಿಂಗ್‌ ನಡುವೆಯೂ ಇದೇ ರೀತಿಯಲ್ಲಿ ಭೇಟಿ ನಡೆದಿತ್ತು. ಆಗ ಆ ಮಾತುಕತೆಯನ್ನು ಎರಡೂ ದೇಶಗಳ ನಡುವಿನ ನೂತನ ಅಧ್ಯಾಯದ ಆರಂಭ ಎಂದೇ ಕರೆಯಲಾಗಿತ್ತು. 

ಈಗಲೂ ಅಷ್ಟೇ, ಮೋದಿಯವರ ಸಂಭಾವ್ಯ ಭೇಟಿಯೂ ಎರಡೂ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಹೊಸ ಶಕ್ತಿ ತುಂಬಲಿದೆ ಎಂಬ ನಿರೀಕ್ಷೆ ಹುಟ್ಟುಹಾಕಿದೆ. ಸತ್ಯವೇನೆಂದರೆ ತಿಂಗಳುಗಳ ಹಿಂದೆಯೇ ಎರಡೂ ದೇಶಗಳ ನಡುವೆ ಸಂಬಂಧ ಸುಧಾರಣೆಯ ಪ್ರಯತ್ನಗಳು ಆರಂಭವಾಗಿವೆ. ಕಳೆದ ಡಿಸೆಂಬರ್‌ನಲ್ಲಿ ಚೀನದ ವಿದೇಶಾಂಗ ಸಚಿವ ವಾಂಗ್‌ ಯೀ ದೆಹಲಿಗೆ ಬಂದಿದ್ದರು. ಇದಾದ ನಂತರ, ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಚೀನದ ಸಮಸ್ಥಾನಿ ಯಾಂಗ್‌ ಜಿಯೆಚಿ ಅವರನ್ನು ಭೇಟಿಯಾಗಿದ್ದರು. ಈ ವರ್ಷಾರಂಭದಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಕೂಡ ಬೀಜಿಂಗ್‌ಗೆ ಹೋಗಿದ್ದರು. ಎರಡೂ ದೇಶಗಳ ವಿದೇಶಾಂಗ ಸಚಿವಾಲಯಗಳ ಹಿರಿಯ ಅಧಿಕಾರಿಗಳ ನಡುವೆ ಮಾತುಕತೆಯೂ ನಡೆದಿದೆ. ಇವೆಲ್ಲದರ ಮೂಲಕ ಡೋಕ್ಲಾಂ ವಿವಾದದಿಂದ ಉದ್ಭವವಾದ ಕಹಿಯನ್ನು ತಗ್ಗಿಸುವ ಪ್ರಯತ್ನ ನಡೆದಿದೆ ಎನ್ನಬಹುದು. ಹಾಗಿದ್ದರೆ ಚೀನ ಕೂಡ ಇದನ್ನೇ ಬಯಸುತ್ತದಾ? ಚೀನದ ಇತ್ತೀಚಿನ ಎರಡು ನಡೆಗಳು ಈ ಬಗ್ಗೆ ತುಸು ಸುಳಿವು ಬಿಟ್ಟು ಕೊಡುತ್ತಿವೆ. ಮೊದಲನೆಯದ್ದು, ಸಿಕ್ಕಿಂನಲ್ಲಿ ನಾಥೂಲಾ ಮಾರ್ಗವಾಗಿ ಕೈಲಾಸ ಮಾನಸರೋವರ ಯಾತ್ರೆಯನ್ನು ಮತ್ತೆ ಆರಂಭಿಸಲು ಎರಡೂ ರಾಷ್ಟ್ರಗಳೂ ಒಪ್ಪಿಕೊಂಡಿರುವುದು. ಡೋಕ್ಲಾಂ ಬಿಕ್ಕಟ್ಟು ಎದುರಾದಾಗ ಈ ಯಾತ್ರೆಯನ್ನು ನಿಲ್ಲಿಸಲಾಗಿತ್ತು. 

Advertisement

ಎರಡನೆಯ ಸಕಾರಾತ್ಮಕ ಸಂಕೇತವೆಂದರೆ, ಬ್ರಹ್ಮಪುತ್ರ ಮತ್ತು ಸಟ್ಲೆಜ್‌ ನದಿಯ ಜಲಪ್ರವಾಹ ಸಂಬಂಧಿ ಅಂಕಿಅಂಶಗಳನ್ನು ಭಾರತದೊಂದಿಗೆ ಮತ್ತೆ ಹಂಚಿಕೊಳ್ಳಲು ಚೀನ ಒಪ್ಪಿಕೊಂಡಿರುವುದು. ಇದಷ್ಟೇ ಅಲ್ಲದೆ, “ಮೋದಿ-ಕ್ಸಿ ಭೇಟಿಯಿಂದ ಭಾರತ-ಚೀನ ನಡುವಿನ ಸಂಬಂಧದ ಧನಾತ್ಮಕವಾದ ಹೊಸ ವಿಚಾರ ವಿಶ್ವಕ್ಕೆ ಗೊತ್ತಾಗಲಿದೆ’ ಎಂದು ಚೀನದ ವಿದೇಶಾಂಗ ಇಲಾಖೆ ಹೇಳಿಕೊಂಡಿದೆ. ಇವೆಲ್ಲ ಸಂಗತಿಗಳೂ ಬದಲಾವಣೆಯ ಮಾರ್ಗದತ್ತ ಬೆರಳು ತೋರಿಸುತ್ತಿವೆಯಾದರೂ ಇಷ್ಟಾದ ಮಾತ್ರಕ್ಕೆ ಚೀನ ಬದಲಾಗಿಬಿಟ್ಟಿದೆಯೆಂದು ಅದರತ್ತ ಬೆನ್ನು ತಿರುಗಿಸಿ ನಿಲ್ಲುವಂತಿಲ್ಲ. ಯಾವಾಗಲೂ ಆ ದೇಶದ ಮೇಲೆ ಭಾರತ ಒಂದು ಕಣ್ಣಿಟ್ಟಿರಲೇಬೇಕು. ಭಾರತದೊಂದಿಗೆ ಚೀನದ ಸಂಬಂಧ ಸುಧಾರಿಸಬೇಕೆಂದರೆ ಅದು ಪಾಕ್‌ಗೆ ಹಿಂಬಾಗಿಲಿನಿಂದ ಬೆಂಬಲ ಕೊಡುವುದನ್ನು ನಿಲ್ಲಿಸಬೇಕು. ಆ ಕೆಲಸಕ್ಕೆ ಅದು ಸಿದ್ಧವಿದೆಯೇ? ನಮ್ಮ ರಾಷ್ಟ್ರ ನಾಯಕರು, ಬೌದ್ಧ ಧರ್ಮಗುರುಗಳು, ಇತರೆ ಪ್ರತಿನಿಧಿಗಳು ಅರುಣಾಚಲಕ್ಕೆ ಭೇಟಿ ಕೊಡುವುದನ್ನು ವಿರೋಧಿಸುತ್ತಲೇ ಬಂದಿರುವ ಚೀನ ಇನ್ನು ಮುಂದಾದರೂ ತಗಾದೆ ತೆಗೆಯುವುದನ್ನು ನಿಲ್ಲಿಸುವುದೇ? ದಕ್ಷಿಣ ಚೀನ ಸಮುದ್ರದ ವಿವಾದದಲ್ಲಿ ಭಾರತಕ್ಕೆ ಎದುರಾಗಬಹುದಾದ ತೊಂದರೆಯನ್ನು ತಪ್ಪಿಸಲು ಅದು ಸಿದ್ಧವಿದೆಯೇ? ಪ್ರಧಾನಿ ಮೋದಿ ಮತ್ತು ಕ್ಸಿ ಭೇಟಿಯಲ್ಲಿ ಈ ಪ್ರಶ್ನೆಗಳಿಗೆ ಗುಣಾತ್ಮಕ ಉತ್ತರ ಸಿಗಬಹುದೇ? ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next