ಮೈಸೂರು: ವಾಯುವಿಹಾರಿಗಳ ನೆಚ್ಚಿನ ತಾಣವಾಗಿರುವ ನಗರದ ಕುಕ್ಕರಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳ ತಂಡದೊಂದಿಗೆ ಬೆಳ್ಳಂಬೆಳಗ್ಗೆ ಕುಕ್ಕರಹಳ್ಳಿ ಕೆರೆಗೆ ತೆರಳಿದ ಸಚಿವರು, ಕೆರೆಯ ಸುತ್ತಲೂ ವಾಯುವಿಹಾರ ನಡೆಸಿದರು. ನಂತರ ಸ್ಥಳದಲ್ಲಿ ವಾಯುವಿಹಾರ ನಡೆಸುತ್ತಿದ್ದ ಭೇಟಿಯಾದ ಸಚಿವರು, ಕುಕ್ಕರಹಳ್ಳಿ ಕೆರೆಯ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ 1.5 ಕೋಟಿ ರೂ. ಬಿಡುಗಡೆಯಾಗಿದ್ದು, ಪರಿಸರ ಹಾಗೂ ವಾಯುವಿಹಾರಿಗಳ ಸ್ನೇಹಿಯಾಗಿ ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆ ಚರ್ಚಿಸಿದರು.
ಈ ವೇಳೆ ಸಚಿವರೊಂದಿಗೆ ಮಾತನಾಡಿದ ಸಾರ್ವಜನಿಕರು, ಕುಕ್ಕರಹಳ್ಳಿ ಕೆರೆಯಲ್ಲಿ ವಿಶೇಷವಾಗಿ ಪಕ್ಷಿಗಳಿಗೆ ಐಲ್ಯಾಂಡ್ ನಿರ್ಮಾಣ, ನ್ಯೂಸ್ ಪೇಯರ್ ಗ್ಯಾಲರಿ, ಜಿಮ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಒತ್ತಾಯಿಸದರು.
ಅಲ್ಲದೇ ನಿಂತುಹೋಗಿರುವ ಬೋಟಿಂಗ್ ವ್ಯವಸ್ಥೆಯನ್ನು ಪುನರಾರಂಭಿಸುವ ಜತೆಗೆ ಪಡುವಾರಹಳ್ಳಿ ಬಡಾವಣೆಯಿಂದ ಕೆರೆಗೆ ಹರಿದುಬರುವ ಕೊಳಚೆ ನೀರು ಕೆರೆಗೆ ಸೇರ್ಪಡೆ ಆಗದಂತೆ ತಡೆಯಲು ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದರು.
ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಕುಕ್ಕರಹಳ್ಳಿ ಕೆರೆಯು ಮಿನಿ ಪಕ್ಷಿಧಾಮದಂತಿದ್ದು, ಇಲ್ಲಿ ವಾಸಿಸುವ ಹಾಗೂ ಕಾಲ ಕಾಲಕ್ಕೆ ವಲಸೆ ಬರುವ ಪಕ್ಷಿ ಸಂಕುಲಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವ ಅಗತ್ಯವಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಎಲ್. ನಾಗೇಂದ್ರ ಇತರರಿದ್ದರು.