Advertisement
ಶುಭಂ ಗುಪ್ತಾ ಎದೆಗುಂದದ ಛಲಗಾರ. ಅಂದುಕೊಂಡಿದ್ದ ಕೆಲಸ ಮುಗಿಯೋವರೆಗೆ ವಿಶ್ರಮಿಸದ ಶ್ರಮಗಾರ. ರಾಜಸ್ಥಾನದ ಜೈಪುರಿನಲ್ಲಿ ಜನಿಸಿದ ಶುಭಂ ಅವರದು ಆರ್ಥಿಕವಾಗಿ ಸದೃಢವಾದಂತಹ ಕುಟುಂಬವಲ್ಲ. ಹೊಟ್ಟೆ-ಬಟ್ಟೆಗೆ ಕೊರತೆ ಇಲ್ಲದಿದ್ದರೂ ಆರ್ಥಿಕವಾಗಿ ಸಮಸ್ಯೆ ಇದ್ದೆ ಇತ್ತು. ಭದ್ರವಾದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಇವರ ತಂದೆ ಮಹಾರಾಷ್ಟ್ರದ ಪುಟ್ಟ ಹಳ್ಳಿಯೊಂದಕ್ಕೆ ವಲಸೆ ಹೋಗುತ್ತಾರೆ.
ಶುಭಂ 8 ರಿಂದ 12ನೇ ತರಗತಿ ವರೆಗೆ ವಿಪಾ ಶಾಲೆಯಲ್ಲಿ ಓದುತ್ತಾನೆ. ಇದೇ ವೇಳೆ ಆತನ ತಂದೆ ಹೊಸ ಬ್ಯುಸಿನೆಸ್ ಶುರು ಮಾಡುತ್ತಾರೆ. ಮಹಾರಾಷ್ಟ್ರದ ಧನು ರಸ್ತೆಯಲ್ಲಿ ಪುಟ್ಟ ‘ಶೂ’ ಅಂಗಡಿಯೊಂದನ್ನು ತೆರೆಯುತ್ತಾರೆ. 12 ನೇ ತರಗತಿ ನಂತರ ಶೂ ಅಂಗಡಿಯಲ್ಲಿ ಕೆಲಸ ಮಾಡುತ್ತ ಅಪ್ಪನಿಗೆ ನೆರವಾಗುತ್ತಾನೆ. ಗ್ರಾಹಕರ ಕಾಲುಗಳಿಗೆ ಶೂ ತೊಡಿಸುತ್ತ ಐಎಎಸ್ ಅಧಿಕಾರಿಯಾಗುವ ಕನಸು ಕಾಣುತ್ತಿದ್ದ. ಪಿಯುಸಿ ನಂತರ ಮಹಾರಾಷ್ಟ್ರದಿಂದ ದೆಹಲಿಗೆ ಆಗಮಿಸಿದ ಶುಭಂ, ಅಲ್ಲಿಯೇ ಬಿ.ಕಾಂ ಹಾಗೂ ಎಮ್ ಕಾಂ ಪದವಿ ಪಡೆಯುತ್ತಾನೆ. ಇದಾದ ನಂತರ 2015 ರಲ್ಲಿ ಯುಪಿಎಸ್ಸಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಾನೆ.
Related Articles
ಮೊದಲ ಪ್ರಯತ್ನಕ್ಕೆ ಎಲ್ಲವೂ ಸಿಗುವುದಿಲ್ಲ ಎನ್ನುವುದು ಶುಭಂ ಜೀವನದಲ್ಲೂ ಸತ್ಯವಾಯಿತು. ಮೊದಲ ಪ್ರಯತ್ನದಲ್ಲಿ ವಿಫಲಗೊಳ್ಳುವ ಇವರು 2016 ರಲ್ಲಿ ಎರಡನೇ ಭಾರಿ ಯುಪಿಎಸ್ಸಿ ಪರೀಕ್ಷೆ ಬರೆದು 366 Rank ಪಡೆದು ಪಾಸ್ ಆಗುತ್ತಾರೆ. ಇದರ ಫಲವಾಗಿ ಭಾರತೀಯ ಅಡಿಟ್ ಹಾಗೂ ಅಕೌಂಟ್ ಇಲಾಖೆಯಲ್ಲಿ ನೇಮಕಗೊಳ್ಳುತ್ತಾರೆ. ಆದರೆ, ಶುಭಂ ಅವರ ಕನಸು ಜಿಲ್ಲಾಧಿಕಾರಿಯಾಗುವುದಾಗಿತ್ತು. ಅದಕ್ಕಾಗಿ ಮತ್ತೆ ಪರೀಕ್ಷೆಗೆ ಸಜ್ಜಾಗುತ್ತಾರೆ. ಆದರೆ, ಮೂರನೇ ಪ್ರಯತ್ನದಲ್ಲಿ ಪ್ರಿಲಿಮ್ಸ್ ಕೂಡ ಪಾಸಾಗುವುದಿಲ್ಲ. ಇದರಿಂದ ಎದೆಗುಂದದ ಅವರು 2018 ರಲ್ಲಿ ನಾಲ್ಕನೇ ಬಾರಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರ ಕನಸು ನನಸಾಗುವ ಕಾಲ ಕೂಡಿ ಬಂದಿರುತ್ತದೆ. 6 ನೇ Rank ಪಡೆದು ಪಾಸಾದ ಶುಭಂ ತರಬೇತಿ ಮುಗಿಸಿಕೊಂಡು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
Advertisement
ನಿಜವಾದ ಸಾಧನೆ ಅಂದ್ರೆ ಇದೆ ಅಲ್ವಾ ? ಶುಭಂ ರಿಯಲ್ ಸ್ಟೋರಿ ಹಲವು ಯುವಕರಿಗೆ ಸ್ಫೂರ್ತಿಯಾಗುವಂತಿದೆ. ಯುಪಿಎಸ್ಸಿ ನಮ್ಮಂದಿ ಸಾಧ್ಯವಾಗದು ಎಂದು ಯೋಚಿಸುವ ವಿದ್ಯಾರ್ಥಿಗಳು ಶುಭಂ ಅವರಿಂದ ಸ್ಫೂರ್ತಿ ಪಡೆಯಬಹುದಾಗಿದೆ.
*ಗಣೇಶ್ ಹಿರೇಮಠ