ನೂರಾರು ಭಾವನೆಗಳಿಗೆ ರೆಕ್ಕೆ ಕೊಡುವಾಸೆ. ಆದರೂ ಮನದಲ್ಲಿನ ದುಗುಡ ಅಡ್ಡಗಾಲಿಡುತ್ತಿದೆ. ನನ್ನ ಮಂದಹಾಸದಲಿ ನಿನ್ನೊಲವ ಧಾರೆ ದುಮ್ಮಿಕ್ಕುತ್ತಿದೆ. ಸಂಭಾಷಣೆಯಲ್ಲಿ ಜೊತೆಯಾಗುವ ಕನಸು ಕಾಣುತ್ತಿದೆ. ಕಣ್ಣಂಚಲಿ ಕುಕ್ಕುವ ಚಿತ್ರಕ್ಕೆ ಜೀವ ನೀಡುವ ಬಯಕೆಯಾದರೂ ಬರಡು ಭೂಮಿಯಲ್ಲಿ ನಿಂತ ಭಾವ ಮೂಡಿದೆ. ನನ್ನ ಕನಸಿನ ಹುಡುಗ, ಅದೊಂದು ದಿನ ಕಣ್ಣೆದುರು ಪ್ರತ್ಯಕ್ಷವಾಗಿದ್ದ. ಕಾಲೇಜಿನ ಕಾರ್ಯಕ್ರಮದ ನಿಮಿತ್ತ ಆತ ಬಂದಿದ್ದ. ಆತ, ಬೆಳಗ್ಗೆಯಿಂದಲೇ ಕಾಲೇಜಿನ ತುಂಬೆಲ್ಲಾ ಪಾದರಸದಂತೆ ಓಡಾಡುತ್ತಿರುವುದನ್ನು ಕಂಡು ಮನಸು ಪ್ರಶ್ನಿಸುತ್ತಿತ್ತು ಯಾರವನು? ಎಂದು. ಅವನ ನಗು ಮೊಗ ಮನದ ಮೂಲೆಯಲ್ಲಿ ಹುಟ್ಟಿದ್ದ ಭಾವನೆಗಳಿಗೆ ಪುಷ್ಟಿ ನೀಡಿತ್ತು. ಕಾರ್ಯಕ್ರಮವನ್ನು ನಾವೇ ಆಯೋಜಿಸಿದ್ದ ಕಾರಣ, ಕೆಲಸಗಳ ಹೊರೆ ಬೆನ್ನುಬಿದ್ದಿತ್ತು. ಆದರೂ, ಕಣ್ಣು ಮತ್ತೆ ಮತ್ತೆ ಅವನೆಡೆಗೆ ಎಳೆಯುತ್ತಿತ್ತು.
ಎಲ್ಲ ಕಾರ್ಯಕ್ರಮಗಳು ಮುಗಿದ ತಕ್ಷಣ ನಿದ್ದೆಯಿಂದ ಎದ್ದ ಅನುಭವವಾಗಿ ಕಣ್ಣು ಅವನ ಹಾಜರಿಗೆ ತವಕಿಸುತ್ತಿತ್ತು. ಎಷ್ಟು ದೂರ ಕಣ್ಣು ಹಾಯಿಸಿದರೂ ಆತ ಕಾಣಿಸಲೇ ಇಲ್ಲ. ದೇವರೇ ಒಮ್ಮೆ ಆತ ಕಣ್ಣಿಗೆ ಬೀಳುವಂತೆ ಮಾಡು ಎಂದು ಪ್ರಾರ್ಥಿಸುವಾ ಅನ್ನಿಸಿ, ಹಾಗೇ ಮಾಡಿದೆ! ಅದೇನು ಮಾಯವೋ ತಿಳಿಯೆನು. ಮತ್ತೂಮ್ಮೆ ತಿರುಗಿ ನೋಡುವಷ್ಟರಲ್ಲಿ ನನ್ನ ಹಿಂದೆಯೇ ಅದೇ ನಗುಮೊಗ ಗುಂಪಿನಲ್ಲಿ ಮಾತನಾಡುತ್ತ ನಿಂತಿದೆ. ಅಷ್ಟೇ; ಅವನನ್ನು ಕಂಡಾಕ್ಷಣ, ಬಿಗಿಹಿಡಿದ ಉಸಿರು ನಿರಾಳಗೊಂಡಿತ್ತು. ಮತ್ತದೇ ನಗುವನ್ನು ಕಂಡು ಮನಸ್ಸು ಪ್ರಫುಲ್ಲಗೊಂಡಿತ್ತು.
ಅದೇನೋ ಗೊತ್ತಿಲ್ಲ, ಅವನೊಂದಿಗೆ ಒಂದು ಫೋಟೊ ತೆಗೆಸಿಕೊಳ್ಳುವ ಆಸೆಯಾಯಿತು. ಅದನ್ನು ಹೇಗೆ ಕೇಳುವುದು? ಎಂಬ ಮುಜುಗರ. ಅಂದು ತಪ್ಪಿದರೆ ಮುಂದೆಂದೂ ಆತ ಸಿಗದಿದ್ದರೆ, ಎಂಬ ಭಯ ಬೇರೆ. ಮತ್ತೆ ನಮ್ಮಿಬ್ಬರ ಭೇಟಿಯಾಗಬಹುದೆಂಬ ಅದಾವ ನಂಬಿಕೆಯೂ ನನಗಿರಲಿಲ್ಲ. ಕೊನೆಗೂ ಕೇಳಿಯೇ ಬಿಟ್ಟೆ . ಆತನಿಂದ ಅದೇ ಮುಗುಳುನಗೆಯೊಂದಿಗೆ “ಆಗಬಹುದು’ ಎಂಬ ಉತ್ತರ ಬಂದಾಗ ಮನಸ್ಸು ಚಿಟ್ಟೆಯಂತೆ ಹಾರತೊಡಗಿತು. ವಾಪಸಾಗುವ ಹೊತ್ತಿಗೆ, ಮತ್ತೆ ಭೇಟಿಯಾಗೋಣ ಎಂದು ಹೇಳಿ, ಕೆನ್ನೆ ಕೆಂಪೇರಿಸುವಷ್ಟು ಸಿಹಿಯಾದ ನಗೆ ಬೀರಿ ಹೊರಟು ನಿಂತಿದ್ದ.
ಈ ವಿಶಾಲವಾದ ಪ್ರಪಂಚದಲ್ಲಿ ಒಂದಾದರೊಂದು ದಿನ ಮತ್ತೆ ನಮ್ಮಿಬ್ಬರ ಭೇಟಿ ಆಗಬಹುದೆಂಬ ಹಂಬಲ ನನ್ನದು.
ಪವಿತ್ರಾ ಭಟ್, ಜಿಗಳೇಮನೆ