ಬೆಂಗಳೂರು: ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಬಂಡಾಯ ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಎಚ್.ಡಿ.
ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದು ಕುತೂಹಲ ಮೂಡಿಸಿದೆ.
ಗುರುವಾರ ಬೆಳಗ್ಗೆ ಜೆಪಿ ನಗರ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜತೆ ಆಗಮಿಸಿದ ಡಿ.ಕೆ.ಶಿವಕುಮಾರ್ ಸುಮಾರು ಎರಡು ಗಂಟೆ ಕಾಲ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಅವರ ಜತೆ ಗುರುತಿಸಿಕೊಂಡಿದ್ದಾರೆ ಎನ್ನಲಾದ ಶಾಸಕ ಮಹೇಶ್ ಕುಮಟಳ್ಳಿ ಉಪಸ್ಥಿತರಿದ್ದದ್ದು ವಿಶೇಷ. ಚರ್ಚೆ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನ, ಲೋಕಸಭೆ ಚುನಾವಣೆ ಫಲಿತಾಂಶ ಕುರಿತು ಪ್ರಸ್ತಾಪವಾಯಿತು. 28 ಕ್ಷೇತ್ರಗಳಲ್ಲಿ ಮತದಾನ ನಂತರದ
ಮಾಹಿತಿ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, “ನನಗೆ ಸರಿ ಸಮನಾದ ವ್ಯಕ್ತಿ ಡಿ.ಕೆ.ಶಿವಕುಮಾರ್ ಅಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಹೌದು, ನಾನು ಅವರಿಗೆ ಸಮನಾದ ನಾಯಕನಲ್ಲ. ಅವರು ನನಗೆ ಎರಡು ಏಟು ಹೊಡೆದು ಬಿಡಲಿ ನನಗೇನೂ ಬೇಜಾರಿಲ್ಲ.ನಾವೆಲ್ಲರೂ ಒಂದೇ ಕುಟುಂಬದವರು. ಕುಟುಂಬದಲ್ಲಿ ಅಣ್ಣ- ತಮ್ಮಂದಿರು ತಪ್ಪು ಮಾಡೋದು ಸಹಜ, ರಮೇಶ್ ಜಾರಕಿಹೊಳಿ ಜತೆ 80 ಶಾಸಕರು ಇದ್ದೇವೆ’ ಎಂದು ಹೇಳಿದರು.
ಸರ್ಕಾರ ಬೀಳುತ್ತೆ ಎಂದು ಯಾವ ಶಾಸಕರು ಹೇಳಿಲ್ಲ. ರಮೇಶ್ ಜಾರಕಿಹೊಳಿ-ಸತೀಶ್ ಜಾರಕಿಹೊಳಿ ಅವರು ಅಣ್ಣ ತಮ್ಮಂದಿರು. ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯ ಮಂತ್ರಿ ಮಾಡಬೇಕೆಂದು ಹೇಳಿದ್ದವರು ರಮೇಶ್, ಅವರು ಪಕ್ಷ ಬಿಟ್ಟು ಹೋಗ್ತಾರಾ ಎಂದು ಪ್ರಶ್ನಿಸಿದರು.
ಡಾ.ಜಿ.ಪರಮೇಶ್ವರ್ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ತೊಂದರೆ ಇಲ್ಲ. ಆತಂಕವೂ ಇಲ್ಲ. ಬಿಜೆಪಿಯವರು ಸುಮ್ಮನೆ ಮಾತನಾಡಿದ್ದಾರೆ ಅಷ್ಟೇ. ಮೇ 23 ರ ನಂತರವೂ ಏನೂ ಆಗುವುದಿಲ್ಲ ಎಂದು ಹೇಳಿದರು.