ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆಗೆ ಮಠಾಧೀಶರು ಸರತಿಯಲ್ಲಿ ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಬೇಲಿ ಮಠದ ಶಿವರುದ್ರ ಮಹಾಸ್ವಾಮಿ, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ನಿರ್ವಾಣೇಶ್ವರ ಸ್ವಾಮೀಜಿ, ಚೆನ್ನಪಟ್ಟಣದ ಬೇವೂರು ಮಠದ ಮೃತ್ಯುಂಜಯ ಸ್ವಾಮೀಜಿಯವರು ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವದಿಸಿದರು.
ಡಿಕೆಶಿ ಭೇಟಿ ನಂತರ ಮಾತನಾಡಿದ ಬೇಲಿ ಮಠದ ಶಿವರುದ್ರ ಮಹಾಸ್ವಾಮಿ, “ಶಿವಕುಮಾರ್ ತಮಗೆ ಎದುರಾಗಿರುವ ಕಷ್ಟಗಳನ್ನು, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸಂಕಷ್ಟದಿಂದ ಹೊರ ಬರುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಸಂಕಷ್ಠಗಳು, ಸವಾಲುಗಳು ಬರುವುದು ಸಹಜ. ಅವುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಶಿವಕುಮಾರ್‌ಗೆ ಇದೆ,’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್, ಸ್ವಾಮೀಜಿಗಳು ನನ್ನ ಶಕ್ತಿ. ಅನೇಕ ಮಠಾಧೀಶರು ಬಂದು ನನ್ನನ್ನು ಆಶೀರ್ವದಿಸಿದ್ದಾರೆ,’ ಎಂದು ಹೇಳಿದರು. ಇದೇ ವೇಳೆ, ಗುಜರಾತ್ ರಾಜ್ಯಸಭೆ ಚುನಾವಣೆ ಕುರಿತು ಅಹಮದ್ ಪಟೇಲ್ ಅವರೊಂದಿಗೆ ಸಚಿವ ಡಿ.ಕೆ.ಶಿವಕುಮಾರ್ ದೂರವಾಣಿ ಮೂಲಕ ಮಾತನಾಡಿದರು. ಇದಕ್ಕೂ ಮೊದಲು ಜ್ಯೋತಿಷಿ ದ್ವಾರಕಾನಾಥರ ಮನೆಗೆ ಭೇಟಿ ನೀಡಿ ಡಿಕೆಶಿ ಮಾತುಕತೆ ನಡೆಸಿದರು.
ಈ ವೇಳೆ ಮಾತನಾಡಿದ ಜ್ಯೋತಿಷಿ ದ್ವಾರಕಾನಾಥ, “ಶಿವಕುಮಾರ್ ನನ್ನ ಶಿಷ್ಯ. ಅವರು ತಾತ್ಕಾಲಿಕವಾಗಿ ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟದಿಂದ ಹೊರ ಬಂದು ರಾಜಕೀಯದಲ್ಲಿ ಮುಂದುವರಿಯುತ್ತಾರೆ. ರಾಜಕೀಯದಲ್ಲಿ ಸಂಕಷ್ಟ ಇರುತ್ತವೆ. ನಿನ್ನ ಕೆಲಸ ನೀನು ಮಾಡು, ಈ ಸಂಕಷ್ಟದಿಂದ ಹೊರ ಬರುತ್ತೀಯ,’ ಎಂದು ಹೇಳಿರುವುದಾಗಿ ತಿಳಿಸಿದರು. ಸಂಜೆ ಆದಿಚುಂಚನಗಿರಿ ಮಹಾ ಪೀಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ನೀಡಿ, ಡಿ.ಕೆ. ಶಿವಕುಮಾರ್‌ಗೆ ಧೈರ್ಯ ತುಂಬಿದರು.