ಮುಂಬಯಿ: ಅತ್ಯಂತ ಬಲಶಾಲಿಯಾದ ಬಲಿಚಕ್ರವರ್ತಿ ಅಸುರನಾದರೂ ಮಹಾದಾನಿ ಯಾಗಿದ್ದ. ನನ್ನಷ್ಟು ದೊಡ್ಡದಾನಿ ಯಾರೂ ಇಲ್ಲ. ಸಕಲ ವನ್ನು ಗೆಲ್ಲುವ ಸಾಮರ್ಥ್ಯ ನನ್ನಲ್ಲಿದೆ ಎಂಬ ಭಾವನೆ ಆತನಲ್ಲಿತ್ತು. ಅದರ ಸತ್ವ ಪರೀಕ್ಷೆಗಾಗಿ ಭಗವಾನ್ ಶ್ರೀ ವಿಷ್ಣು ವಾಮನ ರೂಪ ತಾಳಿ ಬಲಿಚಕ್ರವರ್ತಿಯಲ್ಲಿ ಮೂರು ಹೆಜ್ಜೆ ಜಾಗ ದಾನ ಮಾಡು ಎಂದು ಹೇಳಿ ತ್ರಿವಿಕ್ರಮನಾದ. ಒಂದು ಹೆಜ್ಜೆ ಭೂಲೋಕಕ್ಕೂ, ಎರಡನೇ ಹೆಜ್ಜೆ ಆಕಾಶಕ್ಕೆ ಇಟ್ಟು ಮೂರನೇ ಹೆಜ್ಜೆ ಆತನ ತಲೆಯ ಮೇಲಿಟ್ಟು ಪಾತಾಳಕ್ಕೆ ತಳ್ಳಿದರೂ, ಭಗವಾನ್ ಶ್ರೀ ವಿಷ್ಣು ಬಲಿಚಕ್ರವರ್ತಿಯ ಅಹಂನ್ನು ತಳ್ಳಿದರೇ ವಿನಾ ಬಲಿಚಕ್ರವರ್ತಿಯನ್ನು ತಳ್ಳಲಿಲ್ಲ ಎಂಬ ನಂಬಿಕೆ ನಮ್ಮಲ್ಲಿರಬೇಕು. ಬಲಿಯ ಉತ್ತಮ ಶ್ರದ್ಧಾಭಕ್ತಿಗಾಗಿ ವರನೀಡಿ ಆಶ್ವಯುಜ ಮಾಸದಲ್ಲಿ ಮೂರು ದಿನಗಳ ಕಾಲ ಭೂಲೋಕಕ್ಕೆ ಬರುವಂತೆ ಅನುಗ್ರಹಿಸಿದರು. ಇದೇ ಸಂದರ್ಭ ಲೋಕದ ಜನತೆ ದೀಪ ಹಚ್ಚಿ, ಬಲೀಂದ್ರನನ್ನು ಸ್ವಾಗತಿಸಿ ಪೂಜಿಸುತ್ತಾರೆ. ಬಯಕೆ, ದ್ವೇಷ, ಕ್ರೋಧ ತೊರೆದು ಸಹನೆ, ಕರುಣೆ ಪರೋಪಕಾರಗಳಿಂದ ಸಾರ್ಥಕತೆ ಪಡೆಯುವುದು ದೀಪಾವಳಿ ಹಬ್ಬದ ವೈಶಿಷ್ಟéವಾಗಿದೆ ಎಂದು ದ್ವಿತೀಯ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಮಠಾ ಧೀಶ ಪರಮಪೂಜ್ಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನುಡಿದರು.
ಅ.19ರಂದು ಮೀರಾರೋಡ್ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ನಡೆದ ದೀಪಾರಾಧನೆ, ಧನಲಕ್ಷ್ಮೀ ಪೂಜೆ, ಬಲೀಂದ್ರ ಪೂಜೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಶ್ರೀಗಳು, ಅಜ್ಞಾನದಿಂದ ಜ್ಞಾನದ ಬೆಳಕು ಸ್ಥಿರವಾಗುವುದು ಸಂಪತ್ತಿನ ಅಧಿಪತಿಯಾದ ಲಕ್ಷ್ಮೀ ದೇವಿಯ ಪೂಜೆಯಿಂದ ಧನಕನಕಾದಿಗಳು ವೃದ್ಧಿಯಾಗುತ್ತವೆೆ. ಬಲೀಂದ್ರ ಪೂಜೆ ಯಂದು ದಾನ ಮಾಡಿದರೆ ಶ್ರೀ ವಿಷ್ಣುವಿಗೆ ಪ್ರೀತಿಯ ಅಕ್ಷಯ ವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಲಿಮಾರು ಶ್ರೀಗಳು ಪೂಜಿಸಲ್ಪಟ್ಟ ನಾಟ್ಯ, ಪುಷ್ಪ, ಮಂತ್ರಾಕ್ಷತೆಯನ್ನು ಭಕ್ತಾದಿಗಳಿಗೆ ನೀಡಿ ಆಶೀರ್ವದಿಸಿದರು. ಪ್ರಬಂಧಕ ಮತ್ತು ಟ್ರಸ್ಟಿ ವಿದ್ವಾನ್ ರಾಧಾಕೃಷ್ಣ ಭಟ್ ಅವರು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಬಲೀಂದ್ರ ಪೂಜೆ ನೆರವೇರಿಸಿದರು.
ಟ್ರಸ್ಟಿ ಸಚ್ಚಿದಾನಂದ ರಾವ್ ಅವರು ಮಾತನಾಡಿ, ಮುಂದಿನ ವರ್ಷ ಜನವರಿ 18ರಂದು ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಉಡುಪಿಯ ಶ್ರೀ ಕೃಷ್ಣ ದೇವಾಲಯದ ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ. ಪರ್ಯಾಯ ಪೂರ್ವಬಾವಿ ಸಂಚಾರದಲ್ಲಿರುವ ಶ್ರೀಗಳು ಅ. 21 ರಂದು ಮೀರಾರೋಡ್ ಪಲಿಮಾರು ಮಠದಿಂದ ನಿರ್ಗಮಿಸಲಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಶ್ರೀಕೃಷ್ಣನ ಪೂಜಾ ವಿಧಿ-ವಿಧಾನಗಳಲ್ಲಿ ನಿರತರಾಗಿ ರುವುದರಿಂದ ಅವರ ಭೇಟಿ ಉಡುಪಿ ಶ್ರೀಕ್ಷೇತ್ರದಲ್ಲಿ ಮಾತ್ರ ಸಾಧ್ಯವಾಗಲಿದೆ. ಭಕ್ತಾದಿಗಳು ಎಲ್ಲ ರೀತಿಯ ಸಹಕಾರ, ಸಹಾಯ ಶ್ರೀಗಳೊಂದಿಗೆ ಇರಲಿ ಎಂದರು.
ಸಂಚಾಲಕ ಶ್ರೀಶ ಭಟ್, ಪುಂಡಾರೀಕ್ಷ ಉಡುಪ, ಜಯ ರಾಮ ಭಟ್, ವಿಠಲ್ ಭಟ್ ಮೊದಲಾದವರು ಸಹಕರಿಸಿದರು. ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಸಂಘಟನೆಗಳ ಪ್ರತಿನಿಧಿಗಳು, ಸಮಾಜ ಸೇವಕರು, ಉದ್ಯಮಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ : ರಮೇಶ್ ಅಮೀನ್