ಇಡೀ ಪ್ರಪಂಚವೇ ಒಂದು ಬಜಾರ್ ಇದ್ದಂತೆ. ಈ ಬಜಾರ್‌ನಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇದೆ. ಇಲ್ಲಿ ಎಲ್ಲವೂ ಸಿಗುತ್ತೆ. ನೋವಿದೆ, ನಲಿವಿದೆ, ಮೋಸವಿದೆ, ದ್ವೇಷವಿದೆ, ಅಸೂಯೆಯೂ ಇದೆ. ಅಷ್ಟೇ ಯಾಕೆ ಕ್ರೌರ್ಯವೂ ತುಂಬಿದೆ. ಇವೆಲ್ಲಾ ಅಂಶಗಳನ್ನು ಒಳಗೊಂಡ ಚಿತ್ರವನ್ನು ಮಾಡಿರುವ ನಿರ್ದೇಶಕ ರಾಣಾ ಸುನೀಲ್‌ಕುಮಾರ್ ಸಿಂಗ್, ಇದೀಗ ತಮ್ಮ ಚಿತ್ರವನ್ನು ಬಿಡುಗಡೆ ಮಾಡೋಕೆ ಅಣಿಯಾಗಿದ್ದಾರೆ.
ಅಂದಹಾಗೆ, ಅವರ ನಿರ್ದೇಶನದ ಚಿತ್ರಕ್ಕೆ “ಡಬ್ಲ್ಯು ಡಬ್ಲ್ಯು ಡಬ್ಲ್ಯು.ಮೀನಾ ಬಜಾರ್.ಕಾಮ್’ ಎಂದು ನಾಮಕರಣ ಮಾಡಿದ್ದಾರೆ. ಇದು ಅವರ ಎರಡನೇ ನಿರ್ದೇಶನದ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಾಹಸದ ಜೊತೆಯಲ್ಲಿ ಅವರು ಚಿತ್ರದಲ್ಲಿ ನಿರ್ದೇಶಕನ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವುದರಿಂದ ಒಂದಷ್ಟು ಮಾಹಿತಿ ಹಂಚಿಕೊಂಡ ನಿರ್ದೇಶಕ ರಾಣಾ ಸುನೀಲ್‌ಕುಮಾರ್, ಹೇಳಿದ್ದಿಷ್ಟು.
“ಇದು ಈಗಿನ ವಾಸ್ತವ ಅಂಶಗಳನ್ನು ಹೊಂದಿದೆ. ಪ್ರಪಂಚ ಒಂದು ಬಜಾರ್ ಇದ್ದಂತೆ. ಇಲ್ಲಿ ಎಲ್ಲವೂ ಇದೆ. ಆ ವಿಷಯ ಇಟ್ಟುಕೊಂಡೇ ಒಂದಷ್ಟು ಪಾತ್ರಗಳ ಮೂಲಕ ಹೊಸ ವಿಷಯ ಹೇಳಹೊರಟಿದ್ದೇನೆ. ಇಲ್ಲಿ ಐದು ಪ್ರಮುಖ ಪಾತ್ರಗಳಿವೆ. ಪ್ರತಿಯೊಂದು ಪಾತ್ರಕ್ಕೂ ವಿಶೇಷತೆ ಇದೆ. ಚಿತ್ರ ನೋಡಿದವರಿಗೆ ಒಂದು ಸಂದೇಶವೂ ರವಾನೆಯಾಗುತ್ತೆ. ಅದೇನೆಂಬುದನ್ನು ಚಿತ್ರದಲ್ಲೇ ನೋಡಬೇಕು’ ಎಂಬುದು ನಿರ್ದೇಶಕರ ಮಾತು.
ಇನ್ನು, ಮುಂಬೈ ಮೂಲದ ಶ್ರೀಜಿತಾ ಘೋಷ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ನೇರವಾಗಿ ಮಾತನಾಡುವ, ತುಂಬಾನೇ ಬೋಲ್ಡ್ ಆಗಿರುವ ಪಾತ್ರ ಮಾಡಿದ್ದಾರಂತೆ. ಇನ್ನು, ಇದುವರೆಗೆ ಸುಮಾರು ನೂರಾರು ಚಿತ್ರಗಳಲ್ಲಿ ಐಟಂ ಡ್ಯಾನ್ಸರ್ ಆಗಿದ್ದ ಆಲಿಷಾ ಅವರು, ಇಲ್ಲಿ ಮೊದಲ ಸಲ ಖಳನಾಯಕಿ ಪಾತ್ರದಲ್ಲಿ ನಟಿಸಿದ್ದಾರಂತೆ. ಚಿತ್ರದಲ್ಲಿ ರಾಜೇಶ್ ನಟರಂಗ, ಅರವಿಂದ್, ಮಧುಸೂಧನ್, ಜೀವಾ, ಭಾಸ್ಕರ್, ಲಕ್ಷ್ಮೀ ಹೆಗಡೆ, ರೂಪೇಶ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.
ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ. ಮ್ಯಾಥುರಾಜನ್ ಛಾಯಾಗ್ರಹಣವಿದೆ. ಶ್ರೀಕಾಂತ್ ಸಂಕಲನ ಮಾಡಿದರೆ, ಸುಜಿ, ಅನೀ, ಕಲ್ಪನ್ ನೃತ್ಯ ಸಂಯೋಜಿಸಿದ್ದಾರೆ. ರಿಯಲ್ ಸತೀಶ್ ಸಾಹಸ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಪ್ರಮಾಣ ಪತ್ರ ನೀಡಿದ್ದು, ಕನ್ನಡದಲ್ಲಿ ಯು/ಎ ತೆಲುಗಿನಲ್ಲಿ “ಯು’ ಪ್ರಮಾಣ ಪತ್ರ ಪಡೆದುಕೊಂಡಿರುವ ಚಿತ್ರಕ್ಕೆ ನಾಗೇಂದ್ರಸಿಂಗ್ ಅವರು ಸಿಂಗ್ ಸಿನಿಮಾಸ್ ಮೂಲಕ ನಿರ್ಮಾಣ ಮಾಡಿದ್ದಾರೆ.