ಸಿನ್ಸಿನಾಟಿ: ಡೆನ್ನಿಸ್ ಶಪೊವಲೋವ್ ಅವರನ್ನು ಮಣಿಸಿದ ವಿಶ್ವದ ನಂ.1 ಆಟಗಾರ ಡ್ಯಾನಿಲ್ ಮೆಡ್ವೆಡೇವ್ “ಸಿನ್ಸಿನಾಟಿ ಓಪನ್’ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಜಿದ್ದಾಜಿದ್ದಿ ಹೋರಾಟದಲ್ಲಿ ಅವರು 7-5, 7-5 ಅಂತರದ ಗೆಲುವು ಸಾಧಿಸಿದರು.
ಸ್ಟೆಫನಸ್ ಸಿಸಿಪಸ್, ಫೆಲಿಕ್ಸ್ ಔಗರ್ ಅಲಿಯಾಸಿಮ್, ಬೋರ್ನ ಕೊರಿಕ್ ಅವರೆಲ್ಲ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಇತರರು. ಆದರೆ ರಷ್ಯಾದ ಮತ್ತೋರ್ವ ಆಟಗಾರ ಆ್ಯಂಡ್ರೆ ರುಬ್ಲೇವ್ ಅಮೆರಿಕದ ಟೇಲರ್ ಫ್ರಿಟ್ಜ್ ಕೈಯಲ್ಲಿ ಸೋಲನುಭವಿಸಿ ಹೊರಬಿದ್ದರು.
ಗ್ರೀಸ್‌ನ ಸ್ಟೆಫನಸ್ ಸಿಸಿಪಸ್ ಆರ್ಜೆಂಟೀನಾದ ಡೀಗೊ ಶಾರ್ಟ್ಸ್ ಮನ್ ವಿರುದ್ಧ 6-3, 6-3 ಅಂತರದ ಜಯ ಸಾಧಿಸಿದರು. ಇವರ ಎದುರಾಳಿ ಅಮೆರಿಕದ ಜಾನ್ ಇಸ್ನರ್. ಇನ್ನೊಂದು ಪಂದ್ಯದಲ್ಲಿ ಇಸ್ನರ್ ತಮ್ಮದೇ ದೇಶದ ಸೆಬಾಸ್ಟಿಯನ್ ಕೋರ್ಡ ವಿರುದ್ಧ ಭಾರೀ ಕಷ್ಟದಿಂದ 7-6 (3), 1-6, 7-6 (4) ಅಂತರದ ಗೆಲುವು ಒಲಿಸಿಕೊಂಡರು.
ತೃತೀಯ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಝ್ ಮಾಜಿ ಯುಎಸ್ ಚಾಂಪಿಯನ್ ಮರಿನ್ ಸಿಲಿಕ್‌ಗೆ 7-6 (4), 6-1 ಅಂತರದ ಸೋಲುಣಿಸಿದರು. ಅಲ್ಕರಾಝ್ ಎದುರಾಳಿ ಬ್ರಿಟನ್‌ನ ನಂ. 1 ಆಟಗಾರ ಕ್ಯಾಮರಾನ್ ನೂರಿ. ಅವರು ಅಮೆರಿಕದ ಬೆನ್ ಶೆಲ್ಟನ್‌ಗೆ 6-0, 6-2 ಅಂತರದ ಸೋಲುಣಿಸಿದರು.
ಸ್ವಿಯಾಟೆಕ್‌ಗೆ ಸೋಲು
ವನಿತಾ ವಿಭಾಗದಲ್ಲಿ ಅಚ್ಚರಿಯ ಫಲಿತಾಂಶ ದಾಖಲಾಗಿದೆ. ವಿಶ್ವದ ನಂ.1 ಆಟಗಾರ್ತಿ ಐಗಾ ಸ್ವಿಯಾಟೆಕ್, ಅಮೆರಿಕನ್ ಓಪನ್ ಚಾಂಪಿಯನ್ ಎಮ್ಮಾ ರಾಡುಕಾನು, ದ್ವಿತೀಯ ಶ್ರೇಯಾಂಕದ ಅನೆಟ್ ಕೊಂಟಾವೀಟ್ ಅವರೆಲ್ಲ ಸೋಲಿನ ಆಘಾತಕ್ಕೆ ಸಿಲುಕಿ ಕ್ವಾರ್ಟರ್ ಫೈನಲ್ ಅವಕಾಶವನ್ನು ಕಳೆದುಕೊಂಡರು.