ಕನಕದಾಸರ ಕೃತಿಗಳ ಪೈಕಿ “ರಾಮಧಾನ್ಯ’ ನಾಟಕ ಯಶಸ್ವಿಯಾಗಿರುವುದು ಗೊತ್ತೇ ಇದೆ. ಆ ನಾಟಕ ಚಿತ್ರವಾಗಿರುವುದೂ ಗೊತ್ತು. ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿದೆ ಚಿತ್ರತಂಡ. ನಿರ್ದೇಶಕ ಟಿ.ಎನ್. ನಾಗೇಶ್ ನಿರ್ದೇಶನದ ಈ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಒಂದು ನಾಟಕವನ್ನು ಚಿತ್ರರೂಪವಾಗಿಸುವುದು ಸುಲಭದ ಕೆಲಸವಲ್ಲ. ನಿರ್ದೇಶಕರು ಸಾಕಷ್ಟು ಯೋಚಿಸಿ, ತಯಾರಿ ನಡೆಸಿ ಚಿತ್ರ ನಿರ್ದೇಶಿಸಿದ್ದಾರೆ.
ಕನಕದಾಸರ ಚರಿತ್ರೆಯಲ್ಲಿ ಬರುವ “ರಾಮಧಾನ್ಯ’ ನಾಟಕ ಕುರಿತ ಸಿನಿಮಾ ಅಂದರೆ, ಕನಕದಾಸರ ಕಾಗಿನೆಲೆ ಸೇರಿದಂತೆ ಇತರೆಡೆ ಚಿತ್ರೀಕರಣ ಮಾಡದಿರಲು ಸಾಧ್ಯವೆ? ಅಲ್ಲೆಲ್ಲಾ ಇಡೀ ಚಿತ್ರತಂಡ ಬೀಡುಬಿಟ್ಟು, ಕಥೆಗೆ ಪೂರಕವಾಗಿ ಚಿತ್ರೀಕರಿಸಿಕೊಂಡು ಬಂದಿದೆ. ಹಾಡುಗಳ ಬಿಡುಗಡೆಗೆ ಸಾಕ್ಷಿಯಾಗಿದ್ದ ಸಾಹಿತಿ ಕಾ.ತಾ ಚಿಕ್ಕಣ್ಣ, “ಕನಕದಾಸರ “ರಾಮಧಾನ್ಯ’ ನಾಟಕ ಚಿತ್ರರೂಪದಲ್ಲಿ ಮೂಡಿಬರುತ್ತಿರುವುದು ಖುಷಿಕೊಟ್ಟಿದೆ.
ಕನಕದಾಸರು ದಾರ್ಶನಿಕ ಕವಿಗಳ ಸಾಲಿನಲ್ಲಿ ಅಪರೂಪ ಎನಿಸುತ್ತಾರೆ. ಕುಲ ಒಂದೇ ಎಂದು ಸಂದೇಶ ಸಾರಿದ ಅವರು ಮೇಲು, ಕೀಳು ಭಾವನೆಗಳನ್ನು ಕಳಚಿಡಿ ಎಂದು ಹೇಳಿದವರು. ಅಂತಹ ಮಹಾನ್ ಪುರುಷರ ಚರಿತ್ರೆಯಲ್ಲಿ ಕಾಣಸಿಗುವ “ರಾಮಧಾನ್ಯ’ ನಾಟಕ ಈಗಾಗಲೇ ಯಶಸ್ವಿ ಪ್ರದರ್ಶನ ಕಂಡಿದೆ. ಸಿನಿಮಾ ಕೂಡ ಅದೇ ಸಾಲಿಗೆ ಸೇರಲಿ ಎಂಬುದು ಅವರ ಮಾತು.
ನಿರ್ದೇಶಕ ನಾಗೇಶ್ ಅವರ ಪುತ್ರ ನಾಟಕ ನೋಡಿ, ಸಿನಿಮಾ ಮಾಡಿ ಅಂದಾಗಲೇ, ಅವರಿಗೆ “ರಾಮಧಾನ್ಯ’ ಸಿನಿಮಾ ಮಾಡಿ ಮುಗಿಸಲು ಸಾಧ್ಯವಾಗಿದೆ. ಚಿತ್ರಕ್ಕೆ ನಾಗೇಶ್ ಸೇರಿದಂತೆ ನಾಲ್ವರು ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಆ ನಂತರ, ಚಿತ್ರದ ತುಣುಕುಗಳನ್ನು ವೀಕ್ಷಿಸಿದ ಕೆಲವರು ನಾವೂ ನಿರ್ಮಾಣದಲ್ಲಿ ಕೈ ಜೋಡಿಸುತ್ತೇವೆ ಅಂತ ಬಂದಿದ್ದಾರೆ. ಅಲ್ಲಿಗೆ ನಿರ್ಮಾಣಕ್ಕೆ ಸಾಥ್ ಕೊಟ್ಟವರ ಸಂಖ್ಯೆ 10 ಕ್ಕೆ ಏರಿದೆ.
ಹಾಗಾಗಿಯೇ ನಿರ್ದೇಶಕರು “ದಶಮುಖ ವೆಂಚರ್’ ಮೂಲಕ ಚಿತ್ರ ಮಾಡಿದ್ದಾರೆ. ನಿರ್ದೇಶಕ ನಾಗೇಶ್ ಅವರಿಗೆ ಒಂದು ನಾಟಕ ನೋಡಿ ಚಿತ್ರ ಮಾಡುವುದು ಎಷ್ಟು ಕಷ್ಟದ ಕೆಲಸ ಅನ್ನೋದು ಸಿನಿಮಾ ಮಾಡಿದ ನಂತರ ಗೊತ್ತಾಗಿದೆಯಂತೆ. ಇನ್ನು, ಯಶಸ್ ಸೂರ್ಯ ಅವರಿಲ್ಲಿ ಕನಕದಾಸರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಇದೊಂದು ಅಪರೂಪದ ಅವಕಾಶವಂತೆ.
ನಾಯಕಿ ನಿಮಿತಾ ರತ್ನಾಕರ್ ಅವರಿಗೆ ಇಲ್ಲಿ ಮೂರು ಶೇಡ್ ಇರುವಂತಹ ಪಾತ್ರ ಸಿಕ್ಕಿದೆಯಂತೆ. ಚಿತ್ರಕ್ಕೆ ದೇಸಿ ಮೋಹನ್ ಸಂಗೀತ ನೀಡಿದ್ದಾರೆ. ನಾಲ್ಕು ಹಾಡುಗಳಲ್ಲಿ ಎರಡು ಗೀತೆಗಳಿಗೆ ಕನಕದಾಸರ ಪದಗಳು, ಒಂದಕ್ಕೆ ಪುರಂದರದಾಸರ ಪದ ಮತ್ತು ಶೃಂಗಾರ ಹಾಡಿಗೆ ನಾಗೇಂದ್ರಪ್ರಸಾದ್ ಸಾಹಿತ್ಯ ಒದಗಿಸಿದ್ದಾರೆ.