Advertisement

ಬಸ್‌ಸ್ಟಾಪಿನಲ್ಲಿ ಹೊಂಬೆಳಕಿನ ಧ್ಯಾನ: ಪುರ್ರನೆ ಹಾರಿಹೋಯ್ತು ಪಾರಿವಾಳ

02:20 PM Aug 01, 2017 | |

ರೆಪ್ಪೆಗಳ ಮಿಟುಕಿಸದೆ, ಅವಳನ್ನೇ ನೋಡುತ್ತಾ ಗಡಿಬಿಡಿಯಿಂದ ಕೊಟ್ಟುಬಿಟ್ಟೆ. ಬ್ಯಾಗಲ್ಲಿದ್ದ ಚಿಕ್ಕ ಡೈರಿಯೊಂದನ್ನು ತೆರೆದು ತನ್ನದೇ ಹಸ್ತಾಕ್ಷರಗ‌ಳಿಂದ ಅದೇನೋ ಗೀಚಿದಳು. ಈ ನನ್ನ ಕಳ್ಳ ಕಂಗಳು ಅದನ್ನು ಇಣುಕಿ ನೋಡುವುದರೊಳಗೆ ಡೈರಿಯನ್ನು ಮುಚ್ಚಿ ಬ್ಯಾಗಲ್ಲಿ ಬಚ್ಚಿಟ್ಟಳು… 

Advertisement

ಕಾಲೇಜಿಗೆ ಹೋಗಲು ಬಸ್‌ಸ್ಟಾಪ್‌ನಲ್ಲಿ ಕುಳಿತಿದ್ದೆ. ಅತ್ತ ಕಡೆಯಿಂದ ಯಾವುದೋ ಒಂದು ಬಸ್‌ನಿಂದ ಧರೆಗಿಳಿದು ಬಂದ ಹೊಸ ಪಾರಿವಾಳವೊಂದು ಕಣ್‌ಕುಕ್ಕುವಂತಿತ್ತು. ಆ ಬೆಡಗಿ ಕಾಮನಬಿಲ್ಲಿನ ವರ್ಣಗಳಲ್ಲಿ ಮಿಂದೆದ್ದು ಹೊಂಬೆಳಕೆನ್ನೇ ಮೈಗೆ ಬಳಿದು ಕೊಂಡು ಜನ್ಮ ತಳೆದ ಅಪ್ಸರೆಯಂತಿದ್ದಳು. ನಿಜಕ್ಕೂ ಈಕೆಯನ್ನು ವರ್ಣಿಸಲು ಕವಿಯಾಗಬೇಕೆಂದೆನಿಸಿದ್ದು ನಿಜ. ಇದೇ ವೇಳೆಗೆ ನೀಲಿಯ ಆಗಸದಿಂದ ಕಪ್ಪನೆಯ ಭುವಿಗೆ ತುಂತುರು ಹನಿಗಳ ಸಿಂಚನ ಆಗತೊಡಗಿತು.

ಮಳೆ ಹನಿಗಳಿಂದ ತಪ್ಪಿಸಿಕೊಳ್ಳಲು ಮುದುಡಿದ್ದ ಕಲರ್‌ಫ‌ುಲ್‌ ಕೊಡೆಯ ಬಟನ್‌ ಒತ್ತಿ ಕೊಡೆಯ ಆಶ್ರಯ ಪಡೆದಳು. ನಂತರ ದೌಡಾಯಿಸಿ ಬಂದವಳೇ ನನ್ನಿಂದ ಕೊಂಚ ದೂರದಲ್ಲಿ ನಿಂತಳು. ಉಸಿರು ಬಿಗಿ ಹಿಡಿದು ನಿಂತವಳನ್ನೇ ನೋಡುವ ಕಾಯಕದಲ್ಲಿ ನಿರತನಾಗಿ ಮೈಮರೆತು ಹೋದೆ. ಬೇರೊಂದು ಬಸ್‌ಗೆ ಕಾದು, ನಿಂತು ನಿಂತು ಸಾಕಾಯಿತು ಅವಳಿಗೆ ನಿಂತ ಜಾಗದಿಂದ ಬಂದು ನನ್ನ ಪಕ್ಕ ಖಾಲಿಯಿದ್ದ ಆಸನದಲ್ಲಿ ಕುಳಿತು ನಿಟ್ಟುಸಿರುಬಿಟ್ಟಳು.

ಕುಳಿತಿದ್ದೇ ತಡ, ಮೊಬೈಲ್‌ ಕಾಲ್‌ ಬಂತು. ಮಾತನಾಡಿದ ಮೇಲೆ ವ್ಯಾನಿಟಿ ಬ್ಯಾಗ್‌ನಲ್ಲಿ ಮೊಬೈಲನ್ನು ಇಳಿಬಿಟ್ಟಳು. ನನ್ನತ್ತ ನೋಡಿದವಳೆ, “ಪ್ಲೀಸ್‌… ಸ್ವಲ್ಪ ಪೆನ್‌ ಕೊಡಿ’ ಎಂದಳು. ದಿಕ್ಕು ತೋಚದೆ, ರೆಪ್ಪೆಗಳ ಮಿಟುಕಿಸದೆ, ಅವಳೆನ್ನೇ ನೋಡುತ್ತಾ ಗಡಿಬಿಡಿಯಿಂದ ಕೊಟ್ಟುಬಿಟ್ಟೆ. ಬ್ಯಾಗಲ್ಲಿದ್ದ ಚಿಕ್ಕ ಡೈರಿಯೊಂದನ್ನು ತೆರೆದು ತನ್ನದೇ ಹಸ್ತಾಕ್ಷರಗಳಿಂದ ಅದೇನೋ ಗೀಚಿದಳು. ಈ ನನ್ನ ಕಳ್ಳ ಕಂಗಳು ಅದನ್ನು ಇಣುಕಿ ನೋಡುವುದರೊಳಗೆ ಡೈರಿಯನ್ನು ಮುಚ್ಚಿ ಬ್ಯಾಗಲ್ಲಿ ಬಚ್ಚಿಟ್ಟಳು. ತುಂಬಾ ದಿನಗಳಿಂದ ಪರಿಚಿತಳಂತೆ “ನೀವೇನ್‌ ಓದಿ¤ರೋದು?’ ಎಂದಳು. ತಡಬಡಿಸುತ್ತ “ಬಿ.ಎಡ್‌’ ಎಂದೆ. ಅವಳು “ವಾವ್‌… ಗುಡ್‌ ಜಾಬ್‌…! ಮುಂದೆ ಟೀಚರ್‌ ಆಗೋರು. ಅದು ಸಮಸ್ತ ನಾಗರಿಕರು ಗೌರವಿಸುವ ಗೌರವಯುತ ಹುದ್ದೆ. ಟೀಚರ್‌ ಲೈಫ್ ಈಜ್‌ ಬೆಸ್ಟ್‌ ಲೈಫ್’ ಎಂದಳು. ಕೊನೆಗೆ “ಆಲ್‌ ದಿ ಬೆಸ್ಟ್‌’ ಎನ್ನುತ್ತಾ ಮಂದಹಾಸದ ಮುಗುಳ್ನಗೆ ಬೀರಿದಳು. ಅಷ್ಟೊತ್ತಿಗೆ ಅವಳು ಹೋಗಬೇಕಿದ್ದ ಹಾಳಾದ ಬಸ್ಸು ಬಂದೇ ಬಿಟ್ಟಿತು. ಚಿಕ್ಕ ಮಕ್ಕಳಂತೆ ಬಲಗೈ ಚಾಚಿ ಬೈ… ಬೈ… ಹೇಳಿ ಅವಸರದಿಂದ ಹೊರಟಳು. ಇವಳು ಹೊರಟು ನಿಂತ ಹೊತ್ತಿಗೆ ಹನಿಗಳ ಮಳೆಯಾಟವೂ ನಿಂತು ಹೋಗಿತ್ತು. ಬಸ್‌ ತುಂಬಾ ಜನ ತುಂಬಿ ಹೋಗಿತ್ತು. ಅದೇ ನೂಕು ನುಗ್ಗಲಿನೊಳಗೆ ಹತ್ತಿ ಬಸ್ಸಿನೊಳಗೆ ಮರೆಯಾಗಿ ಹೋದಳು. ಥೇಟ್‌ ಇಳಿಸಂಜೆಯಲ್ಲಿ ಸೂರ್ಯ ಧರೆಯನ್ನು ಬಿಟ್ಟು ಮರೆಯಾಗಿ ಹೋದಂತೆ.

ಅಂದವಳ ಅಂದಚೆಂದ, ನಡೆ- ನುಡಿ, ಡೀಸೆಂಟಾಗಿದ್ದ ಡ್ರೆಸ್‌ನೆಸ್‌, ಸರಳ ವ್ಯಕ್ತಿತ್ವ ಇವೆಲ್ಲವೂ ಈ ಕ್ಷಣಕ್ಕೂ ನನ್ನನ್ನು ಬೆಂಬಿಡದೆ ಕಾಡುತ್ತಿವೆ. ಅವಳನ್ನು ನೋಡುವ ತುಡಿತದ ಮಿಡಿತ ದಿನದಿಂದ ದಿನಕ್ಕೆ ಹೆಚ್ಚಾಗಿ ಹುಚ್ಚು ಹಿಡಿಯುತ್ತಿದೆ. ಹೋಗುವಾಗ ಒಬ್ಬಳೇ ಹೋಗದೇ ಈ ನನ್ನ ಮನ ಗೆದ್ದು ಹೃದಯ ಕದ್ದು ನಿದ್ದೆಗೆಡಿಸಿ ಹೋಗಿದ್ದಾಳೆ. ಇನ್ನೊಮ್ಮೆ ಅವಳೊಂದಿಗೆ ಮನಸ್‌ ಬಿಚ್ಚಿ ಮಾತನಾಡುವ ಬಯಕೆಗಳು ಮರದ ಕೊಂಬೆಯಂತೆ ಚಿಗುರೊಡೆಯತ್ತಿವೆ. ಅವಳು ಬಂದು ಹೋಗುವ ದಾರಿಯ ಅರಿಯದೆ, ದಿಕ್ಕು ದೆಸೆಯ ತಿಳಿಯದೆ, ಪರಿಚಯವಿರದ ಹೊಸ ಪಾರಿವಾಳವೊಂದನ್ನು ಪರಿಚಯಿಸಿಕೊಳ್ಳಲು ಅವಳಿಗೋಸ್ಕರ ಚಾತಕ ಪಕ್ಷಿಯಂತೆ ಕಾಯುವುದೇ ನನ್ನ ಖಯಾಲಿ ಆಗಿದೆ.

Advertisement

ರಂಗನಾಥ ಎಸ್‌ ಗುಡಿಮನಿ

Advertisement

Udayavani is now on Telegram. Click here to join our channel and stay updated with the latest news.

Next