Advertisement
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ವ್ಯವಸ್ಥೆ ಬೆಳೆದಂತೆ ಮಾನವ ಕೂಡ ಅದಕ್ಕೆ ಒಗ್ಗಿಕೊಂಡಿದ್ದಾನೆ. ಇದೇ ಕಾರಣದಿಂದ ಮಾನವನ ದೈಹಿಕ ಶ್ರಮ ವ್ಯಯವಾಗುವುದಿಲ್ಲ. ಹಿಂದೆಲ್ಲ ಶ್ರಮವಹಿಸಿ ದುಡಿಯುತ್ತಿದ್ದ ಕಾಲದಲ್ಲಿ ಮನುಷ್ಯ ಆರೋಗ್ಯದಿಂದ ಕೂಡಿದ ಜೀವನ ನಡೆಸುತ್ತಿದ್ದ. ಆದರೆ ಇತ್ತೀಚಿನ ಕಾಲಘಟ್ಟದಲ್ಲಿ ದಿನದಿಂದ ದಿನಕ್ಕೆ ಜೀವನಕ್ರಮವೂ ಬದಲಾಗುತ್ತಿದೆ. ಜಡಗಟ್ಟಿದ ಮಾನವನ ಜೀವನಶೈಲಿಯಿಂದ ಹೆಸರೇ ಕೇಳದ ರೋಗಗಳು ಬಾಧಿಸಲಾರಂಭಿಸಿದೆ.
ಮೆಡಿಟೇಶನ್(ಧ್ಯಾನ)ನಿಂದ ಮನಸ್ಸನ್ನು ಒಂದೇ ಕಡೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಐಟಿ- ಬಿಟಿ ಸಹಿತ ಇನ್ನಿತರ ಉದ್ಯೋಗದಲ್ಲಿರುವ ಮಂದಿ ಒತ್ತಡದ ಜೀವನ ನಡೆಸುತ್ತಿದ್ದಾರೆ. ಒಂದೆಡೆ ಕಚೇರಿಯ ಕೆಲಸವಾದರೆ ಮತ್ತೊಂದೆಡೆ ಮನೆ, ಸ್ನೇಹಿತರಿಗೆ ಸಮಯ ಮೀಸಲಿಡಬೇಕಾಗುತ್ತದೆ. ಇದರ ನಡುವೆ ಮನಸ್ಸು ವಿಚಲಿತಗೊಳ್ಳುತ್ತದೆ. ಈ ಸಮಯದಲ್ಲಿ ದಿನಂಪ್ರತಿ ಒಂದು ಗಂಟೆಯಾದರೂ ಧ್ಯಾನ ಕ್ಕೆ ಸಮಯ ನಿಗದಿ ಮಾಡಿದರೆ ಉತ್ತಮ.
Related Articles
Advertisement
ನಿದ್ರಾಹೀನತೆ ನಿವಾರಣೆಇತ್ತೀಚಿನ ದಿನಗಳಲ್ಲಿ ಯುವಜನರಿಗೆ ಕಾಡುವ ಮುಖ್ಯರೋಗವೆಂದರೆ ನಿದ್ರಾಹೀನತೆ. ಒತ್ತಡದ ಕೆಲಸ, ಹವಾಮಾನ ಸಹಿತ ಇನ್ನಿತರ ಕಾರಣದಿಂದಾಗಿ ನಿದ್ರಾಹೀನತೆ ಉಂಟಾಗುತ್ತಿದೆ. ಇದಕ್ಕೆಂದು ಕೆಲವು ಮಂದಿ ನಿದ್ರೆ ಬರುವಂತಹ ಮಾತ್ರೆಗಳನ್ನು ಸೇವನೆ ಮಾಡುತ್ತಾರೆ. ಮಾತ್ರೆ ಸೇವನೆಯಿಂದ ಸೈಡ್ ಎಫೆಕ್ಟ್ಗಳು ಜಾಸ್ತಿ. ಅದರ ಬದಲು ಒತ್ತಡ ನಿವಾರಣೆಗೆ ಕೆಲವೊಂದು ಯೋಗಾಸನಗಳ ಮೊರೆ ಹೋಗಬಹುದು. ಅದರಲ್ಲೂ ಮುಖ್ಯವಾಗಿ ಗರುಡಾಸನ, ನಟರಾಜಾಸನ, ಸೇತುಬಂಧಾಸನ, ವೀರಭಧ್ರಾಸನ, ವೃಕ್ಷಾಸನ ಸಹಿತ ಇನ್ನಿತರ ಆಸನಗಳ ಬಗ್ಗೆ ಮಾಹಿತಿಯನ್ನು ನುರಿತರಿಂದ ಪಡೆದರೆ ಅನೇಕ ರೋಗಗಳನ್ನು ಗುಣಪಡಿಸಲು ಸಾಧ್ಯ. ಬೆಳಗ್ಗಿನ ಜಾವ ಉತ್ತಮ
ಸಾಮಾನ್ಯವಾಗಿ ಬೆಳಗ್ಗಿನ ಜಾವದಲ್ಲಿ ಧ್ಯಾನಮಾಡಲು ಪ್ರಾರಂಭ ಮಾಡಿದರೆ ಉತ್ತಮ. ಏಕೆಂದರೆ, ಈ ಸಮಯದಲ್ಲಿ ಮನಸ್ಸು ಹಗುರವಾಗಿರುತ್ತದೆ. ಧ್ಯಾನ ಕ್ಕೆ ಅಸ್ವಸ್ಥತೆಯನ್ನು ನಿವಾರಣೆ ಮಾಡುವ ಶಕ್ತಿ ಇದೆ. ಧ್ಯಾನ ಮಾಡುವುದರಿಂದ ದೇಹದಲ್ಲಿ ನಕಾರಾತ್ಮಕ ಭಾವನೆಗಳನ್ನು ಹೋಗಲಾಡಿಸಲು ಸಾಧ್ಯ. ಕೋಪ, ದುಗುಡ ನಿವಾರಣೆಯಾಗುತ್ತದೆ. ನಿರುತ್ಸಾಹ, ಆತಂಕ, ಖನ್ನತೆ ಮಾಯವಾಗಿ, ಮನಸ್ಸು ನಿರ್ಮಲತೆಯಿಂದ ಕೂಡಿರುತ್ತದೆ. ಮ್ಯೂಸಿಕ್ ಮೆಡಿಟೇಶನ್
ಇತ್ತೀಚಿನ ದಿನಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಕೆಲವು ಮಂದಿ ಮ್ಯೂಸಿಕ್ ಧ್ಯಾನದ ಮೊರೆ ಹೋಗುತ್ತಿದ್ದಾರೆ. ವಜ್ರಾಸನ, ಪದ್ಮಾಸನದಲ್ಲಿ ಕೂತು ಯಾವುದೇ ಪ್ರಕಾರದ ಇಷ್ಟವಾದ ಸಂಗೀತವನ್ನು ಹಾಕಿ ಶ್ರದ್ಧೆಯಿಂದ ಆಲಿಸಿದರೆ ಅದರಿಂದ ನೆಮ್ಮದಿ ಸಿಗುತ್ತದೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನ ಬೆಳವಣಿಗೆಯಾದ ಬಳಿಕ ಹೆಚ್ಚಿನ ಮಂದಿ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳ ಮೂಲಕ ಧ್ಯಾನ ವಿಧಾನಗಳನ್ನು ಕಲಿಯುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಝೆನ್ ಮೆಡಿಟೇಶನ್ ಮ್ಯೂಸಿಕ್ ಹೆಚ್ಚಾಗಿ ಬಳಕೆಯಲ್ಲಿದೆ. ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಮುಖ್ಯವಾಗಿ 6 ಧ್ಯಾನದ ಕ್ರಮಗಳಿವೆ
1 ಉಸಿರಾಟ ಮತ್ತು ವಿರಾಮ
2 ಧ್ಯಾನ
3 ಭಾವನೆ ಮತ್ತು ಆಲೋಚನೆಗಳ ಮನದೊಳಗೆ ಜಾಗೃತಿ
4 ನಿಂತು ಅಥವಾ ಕುಳಿತು ಪಾದಗಳನ್ನೇ ಗಮನಿಸುವುದು
5 ಅಸಾಮಾನ್ಯ ಕೆಲಸಗಳನ್ನು ಮಾಡುವುದು
6 ಮಲಗಿ ದೇಹದ ಪ್ರತಿ ಭಾಗಗಳಿಗೂ ವಿಶ್ರಾಂತಿ ಸಿಗುವಂತೆ ಮಾಡುವುದು. ಕಲಿಕೆಗೆ ಮದ್ದು
ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಮನಸ್ಸಿನ ಸಮತೋಲನಕ್ಕೆ ಧ್ಯಾನ ಮಾಡುವ ಅಭ್ಯಾಸವನ್ನು ಹೊಂದಿರಬೇಕು. ಇದರಿಂದಾಗಿ ಮನಸ್ಸು ನಿರ್ಮಲವಾಗಿ ಓದಿದ್ದು ಬಹುಬೇಗನೆ ಅರ್ಥವಾಗುತ್ತದೆ. ಹಲವು ಕಾಯಿಲೆಗಳಿಗೆ ಔಷಧ
ಧ್ಯಾನ- ಯೋಗವನ್ನು ಇಂದಿನ ಕಾಲಘಟ್ಟದಲ್ಲಿ ಹೆಚ್ಚಿನವರು ಅನುಸರಿಸುತ್ತಿದ್ದಾರೆ. ಧ್ಯಾನ ಅಂದರೆ ಕಣ್ಣುಮುಚ್ಚಿ ಕೆಲವು ಕಾಲ ಕುಳಿತುಕೊಳ್ಳುವುದು ಎಂಬ ತಪ್ಪು ಮನೋಭಾವನೆ ಅನೇಕರಲ್ಲಿದೆ. ಅಂದಹಾಗೆ ಧ್ಯಾನ ಎಂದರೆ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುವಂತೆ ಮಾಡುವುದು. ನಿರಂತರ ಧ್ಯಾನ ಮಾಡುವುದರಿಂದ ಮೈಗ್ರೇನ್, ಹೊಟ್ಟೆಯಲ್ಲಿ ಹುಣ್ಣು, ಸಿಹಿಮೂತ್ರ ಕಾಯಿಲೆ, ರಕ್ತದೊತ್ತಡ ಏರಿಕೆ, ಹೃದಯಕ್ಕೆ ಸಂಬಂಧಿತ ರೋಗಗಳು ಕೂಡ ಹತೋಟಿಗೆ ಬರುತ್ತದೆ. ದೇಹ, ಮನಸ್ಸಿನ ಸುಸ್ಥಿತಿಗೆ ಸರಳ ಮಾರ್ಗ
ಮನಸ್ಸು ಸಮತೋಲನದಲ್ಲಿರಿಸಲು, ಏಕಾಗ್ರತೆಯನ್ನು ಕಾಯ್ದುಕೊಳ್ಳಲು ಧ್ಯಾನ ಸಹಕಾರಿ. ಧ್ಯಾನವನ್ನು ಯಾರೂ ಬೇಕಾದರೂ ಮಾಡಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಲು, ಮನಸ್ಸನ್ನು ಸುಸ್ಥಿತಿಯಲ್ಲಿಡಲು ಇದೊಂದು ಸರಳ ಮಾರ್ಗ.
– ಗೋಪಾಲಕೃಷ್ಣ ದೇಲಂಪಾಡಿ,
ಯೋಗಗುರು ನವೀನ್ ಭಟ್ ಇಳಂತಿಲ