ರಾಜ್ಯದ ಮಾದಕ ವ್ಯಸನದ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಔಷಧ ನಿಯಂತ್ರಕ ಇಲಾಖೆಯು ಮಾದಕ ಅಂಶಗಳನ್ನು ಒಂದಿಷ್ಟು ಅಧಿಕ ಪ್ರಮಾಣದಲ್ಲಿ ಹೊಂದಿರುವ ನೋವು ನಿವಾರಕ ಔಷಧಗಳ ಸಗಟು ಪೂರೈಕೆ ಮತ್ತು ಮಾರಾಟದ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಿದೆ.
ಇದಕ್ಕಾಗಿ ತಂತ್ರಜ್ಞಾನಾಧರಿತ ಆನ್‌ಲೈನ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಬಳಸಿಕೊಂಡಿರುವ ಇಲಾಖೆಯು ನೋವು ನಿವಾರಕ ಔಷಧಗಳ ಪೂರೈಕೆ, ದಾಸ್ತಾನು, ಔಷಧದ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಈ ಔಷಧಗಳ ಪ್ರಮಾಣ ಸಹಿತ ಪ್ರತಿಯೊಂದೂ ಹಂತದಲ್ಲಿನ ಅಂಕಿಅಂಶವನ್ನು ಕ್ರೋಡೀಕರಿಸುವ ಕಾರ್ಯದಲ್ಲಿ ನಿರತವಾಗಿದೆ. ಜತೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮತ್ತು ನಿಯಮಾವಳಿಗಳನ್ನು ಉಲ್ಲಂ ಸಿ ನೋವು ನಿವಾರಕ ಔಷಧಗಳ ಮಾರಾಟದಲ್ಲಿ ನಿರತವಾಗಿರುವ ಔಷಧದಂಗಡಿಗಳ ಪರವಾನಿಗೆಯನ್ನೇ ರದ್ದುಗೊಳಿಸುವ ಕಠಿನ ನಿಲುವನ್ನು ಅನುಸರಿಸಲಾರಂಭಿಸಿದೆ.
ಕಳೆದ ಕೆಲವು ವರ್ಷಗಳಿಂದೀಚೆಗೆ ರಾಜ್ಯದಲ್ಲಿ ಮಾದಕ ಪದಾರ್ಥಗಳ ಸೇವನೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಮಾದಕ ವ್ಯಸನಿಗಳ ಪೂರ್ವಾಪರ ಮಾಹಿತಿಗಳನ್ನು ಕಲೆ ಹಾಕಿದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ನೈಜ ಮಾದಕ ಪದಾರ್ಥಗಳ ಬದಲಾಗಿ ನೋವು ನಿವಾರಕ ಔಷಧಗಳ ಸೇವನೆಯನ್ನು ಚಾಳಿಯನ್ನಾಗಿರಿಸಿಕೊಂಡಿರುವುದು ಪತ್ತೆಯಾಗಿತ್ತು.
ಇದೇ ವೇಳೆ ಮಾದಕ ಅಂಶ ಹೆಚ್ಚಿರುವ ನೋವು ನಿವಾರಕಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ 15 ದಿನಗಳಿಂದ ಈ ನೋವು ನಿವಾರಕ ಔಷಧಗಳ ಮಾರಾಟದ ಬಗೆಗಿನ ಪ್ರತಿಯೊಂದೂ ದತ್ತಾಂಶವನ್ನು ಆನ್‌ಲೈನ್ ಟ್ರ್ಯಾಕಿಂಗ್ ಮೂಲಕ ಕಲೆ ಹಾಕಲಾರಂಭಿಸಿದ ಬಳಿಕ ನೈಜ ಚಿತ್ರಣ ಲಭಿಸಿತು. ಸದ್ಯ ಇಲಾಖೆ ಇಂತಹ ನೋವು ನಿವಾರಕ ಔಷಧಗಳ ಮಾರಾಟದ ಕುರಿತಂತೆ ನಿರ್ದಿಷ್ಟ ಮಾರ್ಗಸೂಚಿಯನ್ನು ಪಾಲಿಸುವಂತೆ ಎಲ್ಲ ಔಷಧದಂಗಡಿಗಳಿಗೆ ನಿರ್ದೇಶನ ನೀಡಿದೆ. ವೈದ್ಯರ ಸಲಹೆ ಚೀಟಿ ಇಲ್ಲದೆ ಅಥವಾ ವೈದ್ಯರು ಸೂಚಿಸಿದ್ದ ಅವಧಿ ಮುಗಿದಿದ್ದರೆ ಯಾವುದೇ ಕಾರಣಕ್ಕೂ ನೋವು ನಿವಾರಕ ಔಷಧಗಳನ್ನು ಗ್ರಾಹಕರಿಗೆ ಮಾರಾಟ ಮಾಡದಂತೆ ಸೂಚನೆ ನೀಡಿದೆ.
ಬಹುತೇಕ ಮಾದಕ ಪದಾರ್ಥಗಳು ದುಬಾರಿಯಾಗಿರುವುದರಿಂದ ಮತ್ತು ನಿಷೇಧಿಸಲ್ಪಟ್ಟಿರುವುದರಿಂದ ವ್ಯಸನಿಗಳಿಗೆ ಸುಲಭವಾಗಿ ಲಭಿಸುತ್ತಿಲ್ಲ. ಹೀಗಾಗಿ ಮಾದಕ ವ್ಯಸನಿಗಳು ಇಂತಹ ನೋವು ನಿವಾರಕ ಔಷಧಗಳ ಮೊರೆ ಹೋಗುವುದು ಹೊಸ ಬೆಳವಣಿಗೆಯೇನಲ್ಲ. ಆದರೆ ಜನೆರಿಕ್ ಔಷಧಗಳು ಮಾರುಕಟ್ಟೆಗೆ ಬಂದ ಬಳಿಕ ಈ ಔಷಧಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿರುವುದರಿಂದ ಮಾದಕ ವ್ಯಸನಿಗಳು ಭಾರೀ ಸಂಖ್ಯೆಯಲ್ಲಿ ಈ ಔಷಧಗಳ ಮೊರೆ ಹೋಗುತ್ತಿದ್ದಾರೆ.
ಇದೇ ಕಾರಣಕ್ಕಾಗಿ ಮೊದಲ ಹಂತದಲ್ಲಿ ಇಂತಹ ಔಷಧಗಳ ಪೂರೈಕೆ, ದಾಸ್ತಾನು, ಮಾರಾಟದ ಮೇಲೆ ಆನ್‌ಲೈನ್ ಟ್ರ್ಯಾಕಿಂಗ್‌ನಡಿ ಹದ್ದುಗಣ್ಣಿರಿಸಿ, ಕಾನೂನುಬಾಹಿರ ವಾಗಿ ಕಾರ್ಯಾಚರಿಸುತ್ತಿರುವ ಔಷಧದಂಗಡಿಗಳ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾರಂಭಿಸಿದೆ.
ಔಷಧ ನಿಯಂತ್ರಕ ಇಲಾಖೆಯ ಈ ಹೊಸ ವ್ಯವಸ್ಥೆ ಪರಿಣಾಮಕಾರಿಯಾಗಿದ್ದು, ನೋವು ನಿವಾರಕ ಔಷಧಗಳ ದುರ್ಬಳಕೆಗೆ ಕಡಿವಾಣ ಹಾಕುವಲ್ಲಿ ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಇದೇ ವೇಳೆ ಈ ಕಠಿನ ಕ್ರಮದಿಂದಾಗಿ ಈ ಔಷಧಗಳ ಅಗತ್ಯವುಳ್ಳ ರೋಗಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಇನ್ನು ಇದರ ಪರಿಣಾಮವಾಗಿ ಕಾಳಸಂತೆಯಲ್ಲಿ ಇಂತಹ ನೋವುನಿವಾರಕ ಔಷಧಗಳು ಅಥವಾ ನಕಲಿ ಔಷಧಗಳು ಮಾದಕವ್ಯಸನಿಗಳಿಗೆ ಲಭಿಸದಂತೆ ಎಚ್ಚರ ವಹಿಸಬೇಕು. ಜತೆಯಲ್ಲಿ ಈಗಾಗಲೇ ಈ ಔಷಧಗಳ ನಶೆಗೆ ಒಗ್ಗಿಕೊಂಡಿರುವ ವ್ಯಸನಿಗಳು ಇದಕ್ಕಾಗಿ ಅಡ್ಡಹಾದಿ ಹಿಡಿಯದಂತೆ ನೋಡಿಕೊಳ್ಳುವ ಗುರುತರ ಹೊಣೆಗಾರಿಕೆ ಇಲಾಖೆ ಮತ್ತು ನಾಗರಿಕ ಸಮಾಜದ್ದಾಗಿದೆ.