ಬೀದರ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ 2ನೇ ಸುತ್ತಿನ ಕಾಲು ಮತ್ತು ಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಇಲಾಖೆಯ ಸಚಿವ ಪ್ರಭು ಚವ್ಹಾಣ್ ಅವರು ಶನಿವಾರ ಔರಾದ ತಾಲೂಕಿನ ವಡಗಾಂವ ಗ್ರಾಮದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಈ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಲಸಿಕೆಯನ್ನು ವರ್ಷದಲ್ಲಿ ಎರಡು ಬಾರಿ ನೀಡಲಾಗುತ್ತದೆ. ಇದೀಗ ಅ. 23ರಿಂದ ಆರಂಭಿಸಿ ನ. 20ರವರೆಗೆ ಲಸಿಕೆ ನೀಡಲಾಗುತ್ತದೆ. ಕಾಲು ಮತ್ತು ಬಾಯಿ ರೋಗ ಬಂದಾಗ ಚಿಕಿತ್ಸೆಗೆ ಬದಲಾಗಿ ಲಸಿಕೆಯೇ ಮುಖ್ಯವಾಗಿದೆ ಎಂಬುದನ್ನು ರೈತರು ಅರಿಯಬೇಕು. ಪಶು ವೈದ್ಯರು ಮನೆಮನೆಗೆ ಲಸಿಕಾಕರಣಕ್ಕೆ ಬಂದಾಗ ರೈತರು ತಮ್ಮ ಜಾನುವಾರುಗಳಿಗೆ ಮರೆಯದೇ ಲಸಿಕೆ ಕೊಡಿಸಬೇಕು ಎಂದು ಮನವಿ ಮಾಡಿದರು.
ಮೊದಲ ಹಂತದಲ್ಲಿ ರಾಜ್ಯದ ಗಡಿ ಭಾಗದ ಜಿಲ್ಲೆಗಳಾದ ಬೀದರ, ಕಲಬುರಗಿ, ರಾಯಚೂರು, ಯಾದಗಿರಿ, ಚಿತ್ರದುರ್ಗ, ಬಳ್ಳಾರಿ ಮತ್ತು ತುಮಕೂರ ಜಿಲ್ಲೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ರೈತರಿಗೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಕಾಲುಬಾಯಿ ರೋಗವನ್ನು ನಿಯಂತ್ರಿಸಿ ನಿರ್ಮೂಲನೆ ಮಾಡಲು 6 ತಿಂಗಳಿಗೊಮ್ಮೆ ರೋಗದ ವಿರುದ್ಧ ಲಸಿಕೆ ಹಾಕಿಸುವುದೊಂದೇ ಪರಿಹಾರ ಮಾರ್ಗವಾಗಿದೆ. ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ರಾಜ್ಯದ ಗಡಿಭಾಗದ ಜಿಲ್ಲೆಗಳಿಗೆ ಮೊದಲ ಹಂತದಲ್ಲಿ 25.56 ಲಕ್ಷ ಕಾಲುಬಾಯಿ ರೋಗ ಲಸಿಕೆಯು ಕೇಂದ್ರ ಸರ್ಕಾರದಿಂದ ಸರಬರಾಜಾಗಿದೆ. ಕಾಲುಬಾಯಿ ರೋಗದ ವಿರುದ್ಧ ಎಲ್ಲ ದನ ಎಮ್ಮೆ ಕರುಗಳಿಗೆ ಉಚಿತವಾಗಿ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ
ಪ್ರತಿ ಜಾನುವಾರುವಿಗೆ ಪ್ರತ್ಯೇಕ ಸಿರಿಂಜ್ ಮತ್ತು ನೀಡಲ್‌ಗಳನ್ನು ಬಳಸಲಾಗುತ್ತದೆ. ಲಸಿಕಾಕರಣಕ್ಕೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಲಸಿಕಾದಾರರು ನಿಮ್ಮ ಗ್ರಾಮಕ್ಕೆ, ಮನೆಗೆ ಬಂದು ಲಸಿಕೆ ಹಾಕುವರು. ಕಾಲುಬಾಯಿ ರೋಗ ಲಸಿಕಾ ಅಭಿಯಾನದ ತಂಡವಾರು ವೇಳಾಪಟ್ಟಿ ಮಾಹಿತಿಯು ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಲಸಿಕಾ ಅಭಿಯಾನದ ವೇಳೆ ನೆರವಿಗಾಗಿ ಪಶುಪಾಲನಾ ಸಹಾಯವಾಣಿ 8277100200 ಸಂಪರ್ಕಿಸಬುದು. ಲಸಿಕಾ ಅಭಿಯಾನದ ಉಸ್ತುವಾರಿಗಾಗಿ ಜಿಲ್ಲಾ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ರೈತರು ತಪ್ಪದೇ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸಿ ರೋಗ ಬಾರದಂತೆ ಜಾನುವಾರುಗಳನ್ನು ರಕ್ಷಿಸಬೇಕು. ರಾಜ್ಯವನ್ನು ಕಾಲು ಬಾಯಿ ರೋಗ ಮುಕ್ತವಲಯವನ್ನಾಗಿಸಬೇಕು ಎಂದು ಮನವಿ ಮಾಡಿದರು.
ಗ್ರಾ.ಪಂ ಅಧ್ಯಕ್ಷೆ ತ್ರಿಶೂಲಬಾಯಿ ರೋಹಿದಾಸ, ಸಚಿವರ ಆಪ್ತ ಕಾರ್ಯದರ್ಶಿ ಡಾ. ಭಾಸ್ಕರ್ ನಾಯಕ, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ಬಂಡೆಪ್ಪ ಕಂಟೆ, ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕ ಡಾ| ಎ.ಕೆ. ಚಂದ್ರಶೇಖರ, ಮುಖ್ಯ ಪಶು ವೈದ್ಯಾಧಿಕಾರಿ ಡಾ| ಗೌತಮ ಅರಳಿ, ಪಶು ಅಧಿಕಾರಿಗಳಾದ ಡಾ| ಸುನೀಲ ಕಾಂಬಳೆ, ಡಾ| ರಾಜಕುಮಾರ, ಜಗನ್ನಾಥ, ರವಿ ಟೋಪಾರೆ, ಹಾವಗಿರಾವ್ ಬೋರಾಳೆ ಇನ್ನಿತರರಿದ್ದರು. ಡಾ| ನರಸಪ್ಪ ನಿರೂಪಿಸಿದರು.