ಪಡೀಲ್: ಮುಂಡಿತ್ತಾಯ ಶ್ರೀ ವೈದ್ಯನಾಥ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಆರೋಗ್ಯಯುತ ಗಾಳಿ, ಸ್ವಚ್ಛ ಹಾಗೂ ಹಸುರಿನಿಂದ ಕೂಡಿದ ಪರಿಸರದೊಂದಿಗೆ ಶಾಂತಿ ನೆಮ್ಮದಿ ಲಭಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಪರಿಸರವನ್ನು ಹಸುರಾಗಿಸಲು ಔಷಧೀಯ ಗಿಡಗಳೂ ಸಹಿತ ನೂರಕ್ಕೂ ಅಧಿಕ ಗಿಡಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ನೇತೃತ್ವ, “ಉದಯವಾಣಿ’ ಸಹಭಾಗಿತ್ವದಲ್ಲಿ ನಗರ ವ್ಯಾಪ್ತಿಯಲ್ಲಿ 10 ಸಾವಿರ ಗಿಡಗಳನ್ನು
ನೆಡುವ ಮಹತ್ವಾಕಾಂಕ್ಷೆಯ “ಹಸಿರೇ ಉಸಿರು’ ಅಭಿಯಾನದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮಕ್ಕೆ ಪಡೀಲ್ ಕಣ್ಣೂರಿನ ಮುಂಡಿತ್ತಾಯ ಶ್ರೀ ವೈದ್ಯನಾಥ ಕ್ಷೇತ್ರದ ವಠಾರದಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರದ ವೈದ್ಯನಾಥ ಸಕಲ ರೋಗ ರುಜಿನ, ಸಮಸ್ಯೆ ನಿವಾರಿಸಬಲ್ಲ ವೈದ್ಯರಾಗಿದ್ದು, ಭಕ್ತರು ಸಾಗರೋಪಾದಿಯಲ್ಲಿ ಅವರ ಬಳಿಗೆ ಬರುತ್ತಾರೆ. ಕ್ಷೇತ್ರಕ್ಕೆ ಆಗಮಿಸುವವರಿಗೆ ಶ್ರೀ ವೈದ್ಯನಾಥನ ದರ್ಶನದೊಂದಿಗೆ ಹಸುರಿನ ವಾತಾವರಣದಲ್ಲಿ ನೆಮ್ಮದಿ ಲಭಿಸಲಿ. ಪಾಲಿಕೆ ಸದಸ್ಯೆ ಚಂದ್ರಾವತಿಯವರು ಮುತುವರ್ಜಿ ವಹಿಸಿ ವಾರ್ಡ್‌ನ ಜನರನ್ನು, ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಗಿಡ ನೆಟ್ಟು ಹಸುರೀಕರಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಉದಯವಾಣಿಯ ಮೂಲಕ ಪರಿಸರ ಜಾಗೃತಿ ನಿರಂತರವಾಗಿ ಮುಂದುವರೆಯಲಿ ಎಂದರು.
ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರ ಸತೀಶ್ ರೈ ಬಡಿಲಗುತ್ತು ಮಾತನಾಡಿ, ಕ್ಷೇತ್ರವನ್ನು ಹಸಿರಾಗಿಸುವ
ಪಣತೊಟ್ಟಿದ್ದೇವೆ. ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಸಂಕ್ರಮಣದಂದು ಹಸುರೇ ಉಸಿರು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈಗಾಗಲೇ 100 ಗಿಡ ನೆಡಲಾಗಿದ್ದು ಮತ್ತಷ್ಟು ಗಿಡ ನೆಡಬೇಕೆಂಬ ಇಂಗಿತ ಇದೆ ಎಂದರು.
ಪಾಲಿಕೆ ಸದಸ್ಯೆ ಚಂದ್ರಾವತಿ ವಿಶ್ವನಾಥ್ ಸ್ವಾಗತಿಸಿ ವಂದಿಸಿದರು. ಕಮಿಟಿ ಸದಸ್ಯರಾದ ರಾಮಚಂದ್ರ ಕುಲಾಲ್ ಹಾಗೂ ವಿವೇಕ್ ಸುವರ್ಣ, ವಿಶ್ವನಾಥ್, ದೇವದಾಸ್ ಶೆಟ್ಟಿ, ವಿಕ್ಕಿ ಶೆಟ್ಟಿ, ಜಯರಾಮ್, ವೇಣು, ಉಪಸ್ಥಿತರಿದ್ದರು.