ಮೈಸೂರು: ಎಲೆಕ್ಟ್ರಾನಿಕ್ಸ್ ಹಾಗೂ ವೈದ್ಯಕೀಯ ತ್ಯಾಜ್ಯಗಳ ವಿಲೇವಾರಿ ಬಹುದೊಡ್ಡ ಸವಾಲಾಗಿದ್ದು, ಇಂತಹ ತ್ಯಾಜ್ಯಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಘಟನೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಹಯೋಗದಲ್ಲಿ ನಗರದ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಭಾರತದಲ್ಲಿ ವೈದ್ಯಕೀಯ ತ್ಯಾಜ್ಯದ ಪರಿಸರ ಸ್ನೇಹಿ ನಿರ್ವಹಣೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ತ್ಯಾಜ್ಯದ ಸಮರ್ಪಕ ನಿರ್ವಹಣೆಗಾಗಿ ಪೈಲಟ್ ಪ್ರಾಜೆಕ್ಟ್ಗಾಗಿ ಗುಜರಾತ್, ಮಹಾರಾಷ್ಟ್ರ, ಪಂಜಾಬ್, ಒಡಿಶಾ ಹಾಗೂ ಕರ್ನಾಟಕವನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಿಂದ ಮೈಸೂರನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮೈಸೂರು ನಗರ ಪ್ರತಿಯೊಂದು ಪ್ರಾಯೋಗಿಕ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ಸ್ಥಳವಾಗಿದೆ. ಈ ಪ್ರಾಯೋಗಿಕ ಯೋಜನೆಗಾಗಿ ನಗರದ ಪ್ರತಿಷ್ಠಿತ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಆಯ್ಕೆಯಾಗಿದೆ.
ಹೀಗಾಗಿ ಈ ಪ್ರಾಜೆಕ್ಟ್ ಮೂಲಕ ಮೈಸೂರು ಜಿಲ್ಲೆ ದೇಶದ ಎಲ್ಲಾ ನಗರಗಳಿಗೂ ಮಾದರಿಯಾಗಬೇಕಾದ ಕಾರಣ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು. ಸಂಯುಕ್ತ ರಾಷ್ಟ್ರಗಳ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ(ಯುಎನ್‌ಐಡಿಒ) ಪ್ರಾದೇಶಿಕ ಸಹ ನಿರ್ವಾಹಕ ಡಾ.ಎಸ್.ಪಿ.ದುಹಾ ಮಾತನಾಡಿ, ಆಸ್ಪತ್ರೆಗಳಿಂದ ಉತ್ಪ$ತ್ತಿಯಾಗುವ ತ್ಯಾಜ್ಯದಲ್ಲಿ ಮನುಷ್ಯನ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವಿಷಕಾರಿ ಅಂಶ ಹೊಂದಿದ್ದು, ಇದರ ನಿರ್ವಹಣೆಯಲ್ಲಿ ದೋಷವಾದರೆ ವಾತಾವರಣ ಕಲುಷಿತವಾಗಲಿದೆ ಎಂದರು.
ಈ ಹಿನ್ನೆಲೆ ಸರ್ಕಾರ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ಯೋಜನೆ ಅನುಷ್ಠಾನಕ್ಕೆ ತರಲು ಮುಂದಾಗಿದ್ದು, ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಶ್ರಮ ಹಾಗೂ ವೆಚ್ಚದಾಯಕವಾಗಿದೆ. ಆಸ್ಪತ್ರೆಗಳ ಜೈವಿಕ ತ್ಯಾಜ್ಯಗಳನ್ನು ನಿಗದಿತ ಪ್ರಮಾಣದ ಉಷ್ಣಾಂಶದಲ್ಲಿ ಸುಟ್ಟು ಬೂದಿಮಾಡಬೇಕು. ಇದಕ್ಕಿಂತಲೂ ಕಡಿಮೆ ಉಷ್ಣಾಂಶದಲ್ಲಿ ಸುಟ್ಟರೆ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಾಶ ವಾಗುವುದಿಲ್ಲ.
ಆಸ್ಪತ್ರೆಯ ಸಿಬ್ಬಂದಿ ಯಾವ್ಯಾವ ತ್ಯಾಜ್ಯಗಳನ್ನು ಯಾವ ರೀತಿಯಲ್ಲಿ ಪ್ರತ್ಯೇಕಿಸಿ ನಿರ್ವಹಿಸಬೇಕು. ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಶೇಖರಿಸುವುದು ಹಾಗೂ ಅದರ ವಿಲೇವಾರಿಯವರೆಗೆ ಬರುವ ನಾಲ್ಕು ಹಂತಗಳು, ಈ ಯೋಜನೆಯಲ್ಲಿ ಬರುವ ವಿವಿಧ ಚಟುವಟಿಕೆ, ತರಬೇತಿ ಹಾಗೂ ಆರೋಗ್ಯ ಸಂಸ್ಥೆಯ ಸಾಮರ್ಥ್ಯ ವೃದ್ಧಿಗಾಗಿ ಅಗತ್ಯವಿರುವ ಅಂಶಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಮೈಸೂರು ಮಹಾ ನಗರಪಾಲಿಕೆ ಆಯುಕ್ತ ಜಿ.ಜಗದೀಶ್, ಕೆ.ಆರ್.ಆಸ್ಪತ್ರೆ ಡೀನ್ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು, ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಪೃಥ್ವೀಶ್, ಪೊ›.ಡಾ.ಕೆ.ಲಲಿತಾ, ಯೋಜನೆಯ ಸಹ ನಿರ್ವಾಹಕ ಡಾ.ರಾಜು, ಡಾ. ಪ್ರಕಾಶ್‌ಕುಮಾರ್, ಪ್ರಾದೇಶಿಕ ಅಧಿಕಾರಿ ಡಾ.ಎಸ್.ಗೋಪಿನಾಥ್, ಹೇಮಂತ್ ಹಾಜರಿದ್ದರು.