ವಿಜಯಪುರ: ಗುರುವಾರ ಪ್ರಕಟಗೊಂಡ ಹೆಲ್ತ್ ಬುಲಿಟಿನ್ ನಲ್ಲಿ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿನಿ ಸೇರಿ ಮತ್ತೆ ಇಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 37 ಕ್ಕೆ ಏರಿದೆ.
ಜಿಲ್ಲೆಯ ಮೊದಲ ಸೋಂಕಿತೆ P-221 ಸಂಪರ್ಕದಿಂದ ಆಕೆಯ ಹತ್ತಿರದ ಬಂಧು 32 ವರ್ಷದ P-428 ವ್ಯಕ್ತಿಗೆ ಸೋಂಕು ಹರಡಿದ್ದು ದೃಢಪಟ್ಟಿದೆ.
ಆದರೆ ಟ್ರಾವೆಲ್ ಹಿಸ್ಟರಿಯೇ ಇಲ್ಲದ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಮೆಡಿಕಲ್ ಕಾಲೇಜಿನ 25 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ P-429 ಗೆ ಸೋಂಕು ದೃಢಪಟ್ಟಿದೆ.
ಏ.17 ರಂದು ಸ್ವಯಂ ಪ್ರೇರಿತರಾಗಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದ ವಿದ್ಯಾರ್ಥಿನಿ, ಅಂದಿನಿಂದಲೇ ಸ್ವಯಂ ವೈದ್ಯಕೀಯ ಕ್ವಾರಂಟೈನ್ ನಿಗಾದಲ್ಲಿ ಇದ್ದಾಳೆ.
ಜಿಲ್ಲೆಯಲ್ಲಿ ನಿರ್ದಿಷ್ಟ ಛಪ್ಪರಬಂದ್ ಪ್ರದೇಶ ಹಾಗೂ ಒಂದು ಹಳ್ಳಿಯ ಒಂದು ಪ್ರಕರಣದ ಹೊರತಾಗಿ ಎಲ್ಲೂ ಸೋಂಕಿತರು ಪತ್ತೆಯಾಗಿರಲಿಲ್ಲ. ಆದರೆ ಆಂಧ್ರಪ್ರದೇಶ ಮೂಲದ ಬಿ.ಎಲ್.ಡಿ.ಇ. ಸಂಸ್ಥೆಯ ವೈದ್ಯಕೀಯ ವಿದ್ಯಾರ್ಥಿನಿಗೂ ಸೋಂಕು ಹರಡಿದ್ದು, ಈಕೆಯ ಸಂಪರ್ಕದ ಕುರಿತು ತನಿಖೆ ನಡೆದಿದೆ. ಜೊತೆಗೆ ಸೋಂಕಿತ ವಿದ್ಯಾರ್ಥಿನಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಜನರನ್ನು ಜಿಲ್ಲಾಡಳಿತದ ಕ್ವಾರಂಟೈನ್ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇದ್ದ 40 ಜನರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.
ವಿದ್ಯಾರ್ಥಿನಿಗೆ ಸೋಂಕು ಹರಡಿದ ಮೂಲ ತಿಳಿಯಲು ವಿಶ್ವ ಆರೋಗ್ಯ ಸಂಸ್ಥೆ ತಜ್ಞ ವೈದ್ಯ ಡಾ.ಗಲಗಲಿ ಅವರನ್ನು ನಿಯೋಜಿಸಿದೆ. ಮತ್ತೊಂದೆಡೆ ಪೊಲೀಸರೂ ವಿದ್ಯಾರ್ಥಿನಿಗೆ ಸೋಂಕು ತಗುಲಿದ ಕುರಿತು ಕುರಿತು ತನಿಖೆ ನಡೆಸಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.