Advertisement

Medical seat Fraud: ನೆರೆ ರಾಜ್ಯದಲ್ಲಿ ಮೆಡಿಕಲ್‌ ಸೀಟು ಕೊಡಿಸುವುದಾಗಿ ವಂಚನೆ

02:22 PM Nov 01, 2023 | Team Udayavani |

ಬೆಂಗಳೂರು: ಕರ್ನಾಟಕದ ಮೆಡಿಕಲ್‌ ಸೀಟು ಆಕಾಂಕ್ಷಿಗಳಿಗೆ ಅತೀ ಕಡಿಮೆ ಮೊತ್ತದಲ್ಲಿ ನೆರೆ ರಾಜ್ಯದಲ್ಲಿ ಕೊಡಿಸುವುದಾಗಿ ವಂಚಿಸಿದ್ದ ಹೈದ್ರಾಬಾದ್‌ ಮೂಲದ ಆರೋಪಿ ಸಂಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಶರತ್‌ಗೌಡ್‌(45) ಬಂಧಿತ. ಆರೋಪಿಯಿಂದ 47.80 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.

ಆರೋಪಿ ಸಂಜಯನಗರದ ನ್ಯೂಬಿಇಎಲ್‌ ರಸ್ತೆಯಲ್ಲಿ ನೆಕ್ಸಸ್‌ ಎಡು ಎಂಬ ಸಂಸ್ಥೆ ತೆರೆದು ವಂಚಿಸುತ್ತಿದ್ದ.

ಆ್ಯಪ್‌ನಲ್ಲಿ ಅಭ್ಯರ್ಥಿಗಳ ಪಟ್ಟಿ: ಹೈದ್ರಾಬಾದ್‌ ಮೂಲದ ಶರತ್‌ಗೌಡ ಎಂಬಿಎ ಪದವೀಧರನಾಗಿದ್ದು, ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾನೆ. ನ್ಯೂಬಿಇಎಲ್‌ ರಸ್ತೆಯಲ್ಲಿ ನೆಕ್ಸಸ್‌ ಎಡು ಎಂಬ ಸಂಸ್ಥೆ ನಡೆಸುತ್ತಿದ್ದ. ಅದರಲ್ಲಿ ಕೆಲ ಯುವತಿಯರಿಗೆ ಉದ್ಯೋಗ ನೀಡಿದ್ದ. ಏಜೆನ್ಸಿಯೊಂದು ಸಿದ್ಧಪಡಿಸಿರುವ ಆ್ಯಪ್‌ನಲ್ಲಿ ರಾಜ್ಯ ಹಾಗೂ ನೆರೆರಾಜ್ಯದ ವೈದ್ಯಕೀಯ ಸೀಟು ಆಕಾಂಕ್ಷಿಗಳ ಪಟ್ಟಿ ದಾಖಲಾಗಿತ್ತು.

ಮಧ್ಯವರ್ತಿಗಳ ಮೂಲಕ ಆ ಪಟ್ಟಿಯನ್ನು ಪಡೆದ ಆರೋಪಿ, ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯರ ಮೂಲಕ ಆಕಾಂಕ್ಷಿಗಳು ಅಥವಾ ಅವರ ಪೋಷಕರಿಗೆ ಕರೆ ಮಾಡಿ ಅತೀ ಕಡಿಮೆ ಮೊತ್ತಕ್ಕೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿ ನೆರೆ ರಾಜ್ಯಗಳಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸುತ್ತಿದ್ದ. ಪ್ರತಿ ಸೀಟ್‌ಗೆ 20-25 ಲಕ್ಷ ರೂ. ಬೇಡಿಕೆ ಇಟ್ಟು, ಮುಂಗಡವಾಗಿ 12ರಿಂದ 15 ಲಕ್ಷರೂ. ಪಡೆದು ವಂಚಿಸಿದ್ದಾನೆ.

Advertisement

ಇತ್ತೀಚೆಗೆ ತಿಮ್ಮೇಗೌಡ ಎಂಬವರ ಪುತ್ರನಿಗೆ ಕೇರಳದ ಪಿ.ಕೆ.ದಾಸ್‌ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ಸೈನ್ಸ್‌ನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ 10 ಲಕ್ಷ ರೂ. ಪಡೆದುಕೊಂಡು ವಂಚಿಸಿದ್ದ. ಈ ಸಂಬಂಧ ತಿಮ್ಮೇಗೌಡ ನೀಡಿದ ದೂರಿನ ಮೇರೆಗೆ ವಂಚನೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ತೆಲಂಗಾಣದ ಹೈದರಾಬಾದ್‌ನ ಆತನ ಅಪಾರ್ಟ್‌ಮೆಂಟ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

18 ಮಂದಿಗೆ 62 ಲಕ್ಷ ರೂ. ವಂಚನೆ: ಆರೋಪಿ ವಿಚಾರಣೆ ವೇಳೆ ಇದುವರೆಗೂ 18 ಮಂದಿಗೆ 62 ಲಕ್ಷ ರೂ. ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ. ಈ ಪೈಕಿ 47.80 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಬಾಕಿ ಹಣವನ್ನು ಆರೋಪಿ ಬಳಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ಉತ್ತರವಿಭಾಗ ಡಿಸಿಪಿ ಸೈದುಲು ಅಡಾವತ್‌, ಜೆ.ಸಿ.ನಗರ ಉಪವಿಭಾಗದ ಎಸಿಪಿ ಮನೋಜ್‌ಕುಮಾರ್‌ ನೇತೃತ್ವದಲ್ಲಿ ಸಂಜಯನಗರ ಠಾಣೆ ಇನ್‌ಸ್ಪೆಕ್ಟರ್‌ ಭಾಗ್ಯವತಿ ಜೆ.ಬಂಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next