Advertisement

ಜ್ವರ ಪೀಡಿತರ ಕೇಂದ್ರೀಕರಿಸಿ; ಆರೋಗ್ಯ ಕಾರ್ಯಕರ್ತರಿಗೆ ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಸೂಚನೆ

06:47 PM Jan 26, 2022 | Team Udayavani |

ಸಾಗರ: ಅರಳಗೋಡು ಗ್ರಾಮ ಪಂಚಾಯ್ತಿಯ ಶರಾವತಿ ಸಿಂಗಳೀಕ ಅಭಯಾರಣ್ಯ ವ್ಯಾಪ್ತಿಯೊಳಗಿನ ಗ್ರಾಮಗಳಲ್ಲಿ ಜ್ವರ ಪೀಡಿತರನ್ನು ಸ್ವಲ್ಪವೂ ನಿರ್ಲಕ್ಷಿಸದೆ ಅವರ ಕೆಎಫ್‌ಡಿ ವೈರಸ್ ಸೋಂಕಿನ ಕುರಿತು ತಪಾಸಣೆಯನ್ನು ಮಾಡಲು ಆರೋಗ್ಯ ಕಾರ್ಯಕರ್ತರಿಗೆ ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಸೂಚಿಸಿದ್ದಾರೆ. ತಾಲೂಕಿನ ಕಾರ್ಗಲ್ ಸಮೀಪದ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಆರೋಗ್ಯ ಕಾರ್ಯಕರ್ತರ ತುರ್ತು ಸಭೆಯಲ್ಲಿ ಅವರು ಮಾತನಾಡಿ, ಆರೋಗ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಜ್ವರ ಸಮೀಕ್ಷೆ ಮಾಡಬೇಕು. ಪ್ರತಿ ಸದಸ್ಯರಿಗೆ ತಿಂಗಳಿಗೆ ಎರಡು ಬಾಟಲಿಯಂತೆ ಡಿಎಂಪಿ ತೈಲವನ್ನು ಮನೆ ಮನೆಗೆ ತೆರಳಿ ನೀಡಬೇಕು. ಪ್ರತಿ ಹಂತದಲ್ಲೂ ಕೆಎಫ್‌ಡಿ ಲಸಿಕೆ ಹಾಕಲಾಗಿದೆಯೇ ಎಂಬುದರ ವರದಿ ಪಡೆದು, ಲಸಿಕೆ ಪಡೆದವರಿಗೆ ಬೂಸ್ಟರ್ ಲಸಿಕೆ ಕೊಡಿಸಲು ಮನ ಒಲಿಸಬೇಕು ಎಂದು ಹೇಳಿದರು.

Advertisement

ಅಭಯಾರಣ್ಯ ವ್ಯಾಪ್ತಿಯನ್ನು ಭೌಗೋಳಿಕವಾಗಿ ವಿಂಗಡಣೆ ಮಾಡಿ, ಆಯಾ ವಿಭಜಿತ ಭಾಗದ ಉಣುಗುಗಳನ್ನು ಸಂಗ್ರಹಿಸಿ ಜಿಲ್ಲಾ ಸಂಶೋಧನಾಲಯಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು. ಗ್ರಾಮ ಪಂಚಾಯ್ತಿಯ ಆಡಳಿತ ವ್ಯವಸ್ಥೆಯ ಸಹಕಾರದೊಂದಿಗೆ ಗ್ರಾಮದ ಪ್ರತಿ ಮನೆಯ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಜಾಗೃತಿ ಮೂಡಿಸಬೇಕು. ಬಸ್ ನಿಲ್ದಾಣ, ರೈತ ಸಂಪರ್ಕ ಕೇಂದ್ರ, ಗ್ರಂಥಾಲಯ, ಶಾಲೆ, ದೇವಸ್ಥಾನಗಳ ಆವರಣವನ್ನು ಸ್ವಚ್ಛವಾಗಿಸುವ ಕೆಲಸವನ್ನು ಸ್ಥಳೀಯ ಆಡಳಿತದೊಂದಿಗೆ ಆರೋಗ್ಯ ಕಾರ್ಯಕರ್ತರು ಮಾಡಬೇಕು ಎಂದು ಸಲಹೆ ನೀಡಿದರು.

ಭಾರಂಗಿ ಹೋಬಳಿಯ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಹಿರಿಯ ಆರೋಗ್ಯ ನಿರೀಕ್ಷಕರು, ಶುಶ್ರೂಷಕಿಯರು, ಇತರೆ ಸಿಬ್ಬಂದಿ ತುರ್ತು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next