Advertisement

ಮರದಿಂದ ಬಿದ್ದು ಹಾಸಿಗೆ ಹಿಡಿದ ವ್ಯಕ್ತಿ: ನೆರವಿಗೆ ಮನವಿ

09:30 PM May 25, 2017 | Team Udayavani |

ಉಡುಪಿ: ತೆಂಗಿನಕಾಯಿ ಕೊಯ್ಯುವ ವೃತ್ತಿ ಮಾಡುತ್ತಿದ್ದ ಉದ್ಯಾವರ ಕಲೈಬೈಲು ದಿ| ದೇಜು ಪೂಜಾರಿಯವರ ಮಗ ವಿಠ್ಠಲ ಜತ್ತನ್‌ (48) ಅವರು ತೆಂಗಿನ ಮರದಿಂದ ಬಿದ್ದು ಗಂಭೀರವಾಗಿ ಪೆಟ್ಟಾಗಿ ಹಾಸಿಗೆ ಹಿಡಿದಿದ್ದಾರೆ. ಇದರಿಂದಾಗಿ ಜೀವನ ಮುನ್ನಡೆಸಲು ಮನೆಮಂದಿ ಕಂಗಾಲಾಗಿದ್ದು, ಸಾರ್ವಜನಿಕ ಸಹಾಯ ಯಾಚಿಸಿದ್ದಾರೆ. ಅವರ ಪತ್ನಿ ಲಲಿತಾ ಮತ್ತು 4ನೇ ತರಗತಿ ಓದುತ್ತಿರುವ ಮಗಳೊಂದಿಗೆ ಜೀವನ ಸಾಗುತ್ತಿದೆ. ಯಾವುದೇ ದುಶ್ಚಟಗಳಿಲ್ಲದ ವಿಠಲ್‌ ಅವರು ಇದ್ದುದರಲ್ಲಿ ಸುಖೀ ಸಂಸಾರ ನಡೆಸುತ್ತಿದ್ದರು. ಇದ್ದ ತೀರಾ ಹಳೆಯ ಮನೆಯನ್ನು ಕೆಡವಿ ಪುಟ್ಟ ಹೊಸದೊಂದು ಮನೆಯನ್ನು ಕಟ್ಟುವ ಕನಸು ಕಾಣುತ್ತಿದ್ದರು. ಈ ನಡುವೆ ಕಳೆದ ಜನವರಿಯಲ್ಲಿ ಕಟಪಾಡಿಯ ತೆಂಗಿನ ತೋಟವೊಂದರಲ್ಲಿ ಮರ ಹತ್ತಿ ಕಾಯಿ ಕೀಳುವಾಗ ಆಕಸ್ಮಿಕವಾಗಿ ಜಾರಿ ಬಿದ್ದಿದ್ದರು. 

Advertisement

ಮಣಿಪಾಲದ ಆಸ್ಪತ್ರೆಯಲ್ಲಿ 20 ದಿನಗಳು ಜೀವನ್ಮರಣ ಸ್ಥಿತಿಯಲ್ಲಿದ್ದು, ಬದುಕಿದರಾದರೂ ಬೆನ್ನೆಲುಬು, ಸೊಂಟದ ಕೀಲು, ಕಾಲು ಒಟ್ಟು 5 ಕಡೆ ಮೂಳೆ ಮುರಿತದಿಂದ ಗಂಭೀರ ಹಾನಿಯಾಗಿದೆ. ಎದ್ದು ಕುಳಿತುಕೊಳ್ಳಲು ಕೂಡ ಆಗದ‌ ಸ್ಥಿತಿ ಇದೆ. ಎಲ್ಲದಕ್ಕೂ ಇತರರನ್ನು ಅವಲಂಬಿಸಬೇಕಾಗಿದೆ. ಇದ್ದ ಒಬ್ಬನೇ ದುಡಿಮೆಗಾರನ ದುಡಿಮೆ ನಂಬಿ ಜೀವನ ನಡೆಸುತ್ತಿದ್ದ ಕುಟುಂಬ ಇತ್ತ ಜೀವನಾಧಾರದ ದುಡಿಮೆಯೂ ಇಲ್ಲದೆ ಅತ್ತ ನಾಲ್ಕು ತಿಂಗಳಲ್ಲಿ ಚಿಕಿತ್ಸೆಗೆ ಎಲ್ಲೆಡೆ ಸಾಲ ಮಾಡಿ ಆಸ್ಪತ್ರೆಗೆ ಸುಮಾರು 3 ಲಕ್ಷದಷ್ಟು ಹಣ ಖರ್ಚು ಮಾಡಿ ಕಂಗಾಲಾಗಿ ಬಿಟ್ಟಿದೆ. ಇನ್ನೂ ಹಲವು ತಿಂಗಳುಗಳ ಚಿಕಿತ್ಸೆಯ ಅಗತ್ಯವಿದೆ. ಇದನ್ನು ನಿಭಾಯಿಸುವುದು ಹೇಗೆಂದು ಪತ್ನಿ ಲಲಿತಾ ಚಿಂತಾಕ್ರಾಂತರಾಗಿ ಬಿಟ್ಟಿದ್ದಾರೆ.

ಸಂಕಷ್ಟ ಪರಿಸ್ಥಿತಿಯಲ್ಲಿರುವ ಬಡ ಕುಟುಂಬಕ್ಕೆ
ಆರ್ಥಿಕ ಸಹಾಯ ಮಾಡಬಯಸುವ ಸಹೃದಯೀ ದಾನಿಗಳು ಸಿಂಡಿಕೇಟ್‌ ಬ್ಯಾಂಕ್‌ ಪಿತ್ರೋಡಿ ಶಾಖೆಯಲ್ಲಿರುವ ಅವರ ಉಳಿತಾಯ ಖಾತೆ ಸಂಖ್ಯೆ 02162200004381 (ಐಎಫ್ಎಸ್‌ಸಿ ಕೋಡ್‌-ಎಸ್‌ವೈಎನ್‌ಬಿ0000216) ಇದಕ್ಕೆ ಜಮೆ ಮಾಡಬಹುದು. ನೇರವಾಗಿ ಸಂಪರ್ಕಿಸ ಬಯಸುವವರು 9945382767 ಈ ನಂಬರಿಗೆ ಕರೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next