Advertisement

151 ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ

09:37 AM May 08, 2022 | Team Udayavani |

ಹುಬ್ಬಳ್ಳಿ: ಯಾವುದರಲ್ಲಿ ನಿಮಗೆ ಆಸಕ್ತಿ ಇದೆಯೋ ಅದರಲ್ಲಿ ಮುಂದುವರಿಯಿರಿ. ಜೀವನದ ಮೂಲ ಉದ್ದೇಶವೇ ಖುಷಿ. ಪ್ರತಿಯೊಬ್ಬರಿಗೂ ತಮ್ಮದೇಯಾದ ಸಂತಸವಿರುತ್ತದೆ. ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ| ವಿಶಾಲ ಆರ್‌. ಹೇಳಿದರು.

Advertisement

ವಿದ್ಯಾನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್‌)ಯ 2016ನೇ ಬ್ಯಾಚ್‌ನ 59ನೇ ಪದವಿ ಪ್ರದಾನ ಸಮಾರಂಭ “ಸಂಭ್ರಮ’ದಲ್ಲಿ ಅವರು ಮಾತನಾಡಿದರು.

ನೀವು ಅಂದುಕೊಂಡ ಕಾರ್ಯ ಬೇರೆಯವರ ದೃಷ್ಟಿಕೋನದಲ್ಲಿ ಹುಚ್ಚುತನ ಅನಿಸಿದರೂ ಅದನ್ನು ಬಿಟ್ಟುಕೊಡಬೇಡಿ. ಆ ಹುಚ್ಚುತನ ಇಲ್ಲವಾದರೆ ಜೀವನದಲ್ಲಿ ಆಸಕ್ತಿ ಇರುವುದಿಲ್ಲ. ನಿಮ್ಮ ದೃಷ್ಟಿಕೋನ ಮುಖ್ಯ ಎಂದರು.

ಕಿದ್ವಾಯಿ ಮೆಮೋರಿಯಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಂಕೊಲಾಜಿ ಆ್ಯಂಡ್‌ ರಿಸರ್ಚ್‌ ಸೆಂಟರ್‌ನ ನಿರ್ದೇಶಕ ಡಾ| ಸಿ. ರಾಮಚಂದ್ರ ಮಾತನಾಡಿ, ಯುರೋಪ್‌ ದೇಶಗಳಲ್ಲಿ ಮನರಂಜನೆಗಾಗಿ ಕಾಲ ಕಳೆಯುತ್ತಿದ್ದಾರೆ. ಅದು ನಮ್ಮ ಸಂಸ್ಕೃತಿ ಅಲ್ಲ. ಭಾರತೀಯ ಯುವ ಜನಾಂಗ ಹೊಸ ಹೊಸ ಆವಿಷ್ಕಾರ, ಸಂಶೋಧನೆಗಳಿಗೆ ಹೆಚ್ಚೆಚ್ಚು ಒತ್ತುಕೊಡಬೇಕು. ಈ ಕಾರಣದಿಂದಲೇ 2030ರ ವೇಳೆಗೆ ಜಗತ್ತಿನ ಬಹುತೇಕ ದೇಶದವರು ಭಾರತಕ್ಕೆ ಆಗಮಿಸಲಿದ್ದಾರೆ ಎಂದರು.

ಮುಂದಿನ ದಿನಮಾನಗಳಲ್ಲಿ ಒಬಿಸಿಟಿ ಭಾರತಕ್ಕೆ ಆತಂಕಕಾರಿ ವಿಷಯವಾಗಿದ್ದು, ಶೇ.21 ಯುವ ಜನಾಂಗ ಇದಕ್ಕೆ ಒಳಗಾಗಿದ್ದಾರೆ. 4-5 ಜನರಲ್ಲಿ ಒಬ್ಬರು ಮಧುಮೇಹಿ, ರಕ್ತದೊತ್ತಡ ರೋಗಿಗಳಾಗಿದ್ದಾರೆ. ಆಹಾರ ಸೇವನೆ ಬಗ್ಗೆ ಜಾಗೃತಿ ವಹಿಸಿ ಯುವ ಭಾರತ ಆರೋಗ್ಯವಂತವಾಗಿರುವುದು ಮುಖ್ಯ. ಹಣದ ಬೆನ್ನು ಬೀಳದೆ ಒಂದು ಕ್ಷೇತ್ರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಆಗ ಜನ ನಿಮ್ಮನ್ನೇ ಹುಡುಕಿಕೊಂಡು ಬರುತ್ತಾರೆ. ಅಂತಹ ಅವಕಾಶ ಕಲ್ಪಿಸಿಕೊಳ್ಳಿ. ಬೇಡಿಕೆ ಸೃಷ್ಟಿಸಿ ಗೌರವ ಪಡೆದುಕೊಳ್ಳಿ. ರೋಗಿಗಳನ್ನು ಹಾಗೂ ಪಾಲಕರನ್ನು ದೇವರಾಗಿ ಕಾಣಿ ಎಂದು ಹೇಳಿದರು.

Advertisement

ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ| ಈಶ್ವರ ಹೊಸಮನಿ ಪದವಿ ಪ್ರದಾನ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಭೋದಿಸಿದರು. ಉಪ ವೈದ್ಯಕೀಯ ಅಧೀಕ್ಷಕ ಡಾ| ರಾಜಶೇಖರ ದ್ಯಾಬೇರಿ, ಡಾ| ಕೆ.ಎಫ್‌. ಕಮ್ಮಾರ, ಡಾ| ಈಶ್ವರ ಹಸಬಿ, ಡಾ| ಸೂರ್ಯಕಾಂತ ಕಲ್ಲೂರಾಯ, ಡಾ| ಕಸ್ತೂರಿ ದೋಣಿಮಠ, ಡಾ| ಮಹೇಶ ದೇಸಾಯಿ, ಡಾ| ಲಕ್ಷ್ಮೀಕಾಂತ ಲೋಕರೆ ಮೊದಲಾದವರಿದ್ದರು.

151 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಲಾಯಿತು. ವಿವಿಧ ವಿಷಯಗಳಲ್ಲಿ ಅತೀ ಹೆಚ್ಚು ಅಂಕ ಪಡೆದ 14 ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಪಾತ್ರರಾದರು. ವಿದ್ಯಾರ್ಥಿನಿ ನಿತ್ಯಾ ಪ್ರಾರ್ಥಿಸಿದರು. ಸಂಘಟನಾ ಅಧ್ಯಕ್ಷ ಡಾ| ರವೀಂದ್ರ ಗದಗ ಸ್ವಾಗತಿಸಿದರು. ಡಾ| ಮೇಘಾ ಮತ್ತು ಡಾ| ಆನಂದ ನಿರೂಪಿಸಿದರು. ಡಾ| ಅಶ್ವಿ‌ನಿ ಎಚ್‌.ಆರ್‌. ವಂದಿಸಿದರು.

ಮೊಮ್ಮಗನ ಸಂಭ್ರಮಕ್ಕೆ ಅಜ್ಜಿಯ ಆನಂದಭಾಷ್ಪ

ಚಿಕ್ಕವನಿದ್ದಾಗಲೇ ತಂದೆ ಕಳೆದುಕೊಂಡು ಚಿಕ್ಕಪ್ಪನ ಆಸರೆಯಲ್ಲಿ ಕಲಿಯುತ್ತಿರುವ ಬನಹಟ್ಟಿಯ ಡಾ| ವಿನೋದ ಶಂಕರ ಗಣೇಶನವರ ಎಂಬಿಬಿಎಸ್‌ ಮುಗಿಸಿ ವೈದ್ಯಕೀಯ ಪ್ರಮಾಣಪತ್ರ ಪಡೆಯುತ್ತಿರುವಾಗ ಆತನ ಅಜ್ಜಿ ಪ್ರಭಾವತಿ ವೇದಿಕೆ ಬಳಿಯೇ ತೆರಳಿ ಮೊಮ್ಮಗನ ಸಂಭ್ರಮ ಆನಂದಿಸಿದರು.

ಇದನ್ನು ಕಂಡ ಗಣ್ಯರು ಸಹ ಅಜ್ಜಿಯಿಂದಲೇ ಮೊಮ್ಮಗನಿಗೆ ಪ್ರಮಾಣಪತ್ರ ಕೊಡಿಸಿದಾಗ ಅವರ ಆನಂದಕ್ಕೆ ಪಾರವಿರಲಿಲ್ಲ. ಈ ಕ್ಷಣದಿಂದಾಗಿ ಅವರ ಕಣ್ಣಂಚಿನಲ್ಲಿ ನೀರು ಹರಿದುಬಂದವು. ನನ್ನ ಮೊಮ್ಮಗ ವೇದಿಕೆಯಲ್ಲಿ ಡಾಕ್ಟರ್‌ ಪ್ರಮಾಣಪತ್ರ ಪಡೆದಿದ್ದು ತುಂಬಾ ಹೆಮ್ಮೆ ಅನಿಸುತ್ತಿದೆ ಎಂದು ಪ್ರಭಾವತಿ ಹೇಳಿದರು.

ಇಳಿವಯಸ್ಸಿನ ಪ್ರಭಾವತಿಯವರನ್ನು ಕುಟುಂಬದವರು ಮನೆಯಲ್ಲಿಯೇ ಬಿಟ್ಟು ಬರಲು ಯೋಚಿಸಿದ್ದರು. ಆದರೆ ಅಜ್ಜಿಯು ನಾನು ನನ್ನ ಮೊಮ್ಮಗ ಎಂಬಿಬಿಎಸ್‌ ಮುಗಿಸಿದ ಪ್ರಮಾಣಪತ್ರ ಪಡೆಯುವ ಸಂಭ್ರಮ ನೋಡಲೇಬೇಕೆಂದು ಹಟ ಮಾಡಿ ಬಂದಿದ್ದಾರೆ ಎಂದು ಕುಟುಂಬ ವರ್ಗದವರು ಹೇಳಿದರು.

ನಮ್ಮದು ನೇಕಾರಿಕೆಯಾಗಿದ್ದು, ಆನಂದ ಮೂರು ವರ್ಷದವನಿದ್ದಾಗಲೇ ಅವರ ತಂದೆ ಅಪಘಾತದಲ್ಲಿ ತೀರಿಕೊಂಡರು. ಅಂದಿನಿಂದ ನಮ್ಮ ಬಳಿಯೇ ಇದ್ದು, ಓದಿನಲ್ಲಿ ತುಂಬಾ ಬುದ್ಧಿವಂತನಾಗಿದ್ದಾನೆ. ನವೋದಯದಿಂದ ಎಂಬಿಬಿಎಸ್‌ವರೆಗೂ ಉಚಿತವಾಗಿಯೇ ಶಿಕ್ಷಣ ಪಡೆದಿದ್ದಾನೆ. ಬಹುದಿನಗಳ ಕನಸು ನನಸಾಗಿದೆ. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ. ನಮ್ಮ ಊರಿನಲ್ಲೇ ಆಸ್ಪತ್ರೆ ಕಟ್ಟಬೇಕು ಎಂದು ಯೋಚಿಸಿದ್ದೇವೆ. ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡಲು ಸಿದ್ಧರಿದ್ದೇವೆ. ಇದರಿಂದ ನಮ್ಮ ಭಾಗದ ನೇಕಾರರು ಮತ್ತು ಬಡವರಿಗೆ ಸಹಾಯವಾಗುತ್ತದೆ ಎಂದು ಡಾ| ಆನಂದನ ಚಿಕ್ಕಪ್ಪ, ಬಟ್ಟೆ ವ್ಯಾಪಾರಿ ಬಾಳಚಂದ್ರ ಹೇಳಿದರು.

ವೈದ್ಯನಾಗಬೇಕೆಂಬ ಕನಸು ಕಟ್ಟಿಕೊಂಡು ಓದಿದೆ. ಇಂತಹ ಸೇವೆ ಸಲ್ಲಿಸುವ ಅವಕಾಶ ಎಲ್ಲರಿಗೂ ಸಿಗಲ್ಲ. ಹಣ ಮಾಡಬೇಕೆಂದು ಅಲ್ಲ. ರೋಗಿಗಳು ಗುಣಮುಖರಾಗಿ ಅವರು ಬೀರುವ ನಗೆಯೇ ನಮಗೆ ಕೊಡುವ ಗೌರವ. ಅದರಷ್ಟು ತೃಪ್ತಿ ಯಾವುದರಲ್ಲೂ ಸಿಗಲ್ಲ. ಅದಕ್ಕಾಗಿ ವೈದ್ಯಕೀಯ ವೃತ್ತಿಯನ್ನು ನೊಬೆಲ್‌ ಎನ್ನುತ್ತಾರೆ. ಉನ್ನತ ವ್ಯಾಸಂಗ ಮುಂದುವರಿಸುವೆ. –ಡಾ| ರೋಹಿತ ತೇಲಿ

ಮೂರು ಚಿನ್ನದ ಪದಕ ಪಡೆದ ವಿದ್ಯಾರ್ಥಿ ಎಂಬಿಬಿಎಸ್‌ ಮುಗಿಸಿದ್ದು ತುಂಬಾ ಸಂತಸ ತಂದಿದೆ. ಎಸ್ಸೆಸ್ಸೆಲ್ಸಿಯಿಂದ ಕನ್ನಡ ಮಾಧ್ಯಮದಲ್ಲಿಯೇ ಕಲಿತಿರುವೆ. ಮುಂದೆ ಏನು ಮಾಡಬೇಕೆಂದು ಇನ್ನೂ ಯೋಚಿಸಿಲ್ಲ. ತಂದೆ ಕಾಲೇಜಿನ ಪ್ರಾಂಶುಪಾಲರಾಗಿದ್ದು, ಅಜ್ಜ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದಾರೆ. ನಮ್ಮ ಮನೆಯಲ್ಲಿ ನಾನೊಬ್ಬಳೇ ವೈದ್ಯನಾಗಿರುವೆ. –ಡಾ| ಸ್ನೇಹಾ ಎಸ್‌. ಬಾಳ್ಳೋಜ,ಅಥಣಿ ಮೂರು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ

Advertisement

Udayavani is now on Telegram. Click here to join our channel and stay updated with the latest news.

Next