ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ 1ರಿಂದ ಎಲ್ಲ ವೈದ್ಯಕಿಯ ಕಾಲೇಜುಗಳು ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ತರಗತಿಗಳು ಪುನರಾರಂಭಗೊಳ್ಳಲಿವೆ.
ಕೇಂದ್ರ ಸರಕಾರ, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ), ಯುಜಿಸಿ ಮತ್ತು ರಾಜ್ಯ ಸರಕಾರದ ಆದೇಶ ಮತ್ತು ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಅನು ಸರಿಸಿ ವೈದ್ಯಕಿಯ ಪದವಿ ಕಾಲೇಜುಗಳನ್ನು ಆರಂಭಿಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ. ಸುತ್ತೋಲೆ ಹೊರಡಿಸಿದೆ.
ಎಲ್ಲ ಸಂಯೋಜಿತ ವೈದ್ಯಕಿಯ ಕಾಲೇಜು ಗಳನ್ನು ಡಿ. 1ರಿಂದ ಪುನರಾರಂಭಗೊಳಿಸಿ ತತ್‌ಕ್ಷಣವೇ ಪ್ರಾಯೋಗಿಕ ತರಗತಿಗಳನ್ನು ನಡೆಸುವ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯನ್ನು ಆನ್‌ಲೈನ್ ಮತ್ತು ಭೌತಿಕ ಹಾಜರಾತಿ ಎರಡೂ ರೀತಿಯಲ್ಲೂ ನಡೆಸಬಹುದು. ತರಗತಿ ಹಾಜರಾತಿ ಕಡ್ಡಾಯಗೊಳಿಸುವಂತಿಲ್ಲ. ಕಾಲೇಜಿಗೆ ಖುದ್ದು ಹಾಜರಾಗುವ ಅಥವಾ ಆನ್‌ಲೈನ್ ಶಿಕ್ಷಣ ಪಡೆಯುವ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡಬೇಕು ಎಂದು ವಿ.ವಿ. ಸೂಚನೆ ನೀಡಿದೆ.
ಕೋವಿಡ್ ಪರೀಕ್ಷೆ ಕಡ್ಡಾಯ
ಪದವಿ ಕಾಲೇಜುಗಳ ಮಾದರಿ ಯಲ್ಲೇ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಿಬಂದಿ ಕಾಲೇಜಿಗೆ ಬರುವ ಮುನ್ನ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ಯೊಂದಿಗೆ ಹಾಜರಾಗಬೇಕು. ವಿದ್ಯಾರ್ಥಿ ಗಳು ಪೋಷಕರ ಲಿಖೀತ ಅನುಮತಿ ಪತ್ರ ತರಬೇಕು ಎಂದು ಸೂಚಿಸಲಾಗಿದೆ.