ಕೋಲಾರ: ಹೊಸಕೋಟೆಯ ಎಂವಿಜೆ (ಎಂ.ವಿ. ಜಯರಾಮನ್) ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಭಾನುವಾರ ಕೋಲಾರ ತಾಲೂಕಿನ ಕೆಂದಟ್ಟಿ ಬಳಿಯ ಕ್ವಾರಿಯಲ್ಲಿರುವ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದರ್ಶಿನಿ (24) ಮೃತ ಯುವತಿ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿಯವರ ಕಿರುಕುಳದ ಆರೋಪ ಕೇಳಿ ಬರುತ್ತಿದೆ. ಮಕ್ಕಳ ತಜ್ಞ ವೈದ್ಯೆಯಾಗುವ ಕನಸು ಹೊತ್ತು ದೂರದ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದಳು. ತಂದೆಯನ್ನು ಕಳೆದುಕೊಂಡಿದ್ದ ಆಕೆ ಕೆಲಸದ ಒತ್ತಡ, ಹಿರಿಯ ವೈದ್ಯರ ಕಿರುಕುಳದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. ಅಲ್ಲದೆ ತನ್ನ ಸ್ನೇಹಿತನ ಬಳಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಹೇಳಿ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕ್ವಾರಿಯಲ್ಲಿ ಹಾರಿ ಆತ್ಮಹತ್ಯೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿಯವರ ಕಿರುಕುಳ ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಿಸಿ ದ್ದಾರೆ. ಕೊಪ್ಪಳದಲ್ಲಿ ಎಂಬಿಬಿಎಸ್ ಮುಗಿಸಿ, ಕಳೆದ 7 ತಿಂಗಳ ಹಿಂದೆ ಹೊಸಕೋಟೆ ಬಳಿ ಇರುವ ಎಂವಿಜೆ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ವಿದ್ಯಾಭ್ಯಾಸಕ್ಕೆ ಆಗಮಿಸಿದ್ದಳು. ಕಳೆದ 2 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ವಿದ್ಯಾರ್ಥಿನಿ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದು, ವೈದ್ಯಳಾಗಬೇಕೆಂಬ ಕನಸು ಹೊತ್ತಿದ್ದಳು. ಆದರೆ ಭಾನುವಾರ ಕೋಲಾರದ ಬಳಿ ಇರುವ ಕ್ವಾರಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಕ್ಕಳ ತಜ್ಞೆಯಾಗಿ ಉಚಿತ ಪ್ರವೇಶವನ್ನು ಪಡೆದಿದ್ದ ದರ್ಶಿನಿಗೆ ಕಾಲೇಜು ಆಡಳಿತ ಮಂಡಳಿಯವರು ಕಿರುಕುಳ ಕೊಡುತ್ತಿದ್ದರು ಎನ್ನಲಾಗಿದೆ.
ದಿನದ 24 ಗಂಟೆಗಳ ಕಾಲ ವಿಶ್ರಾಂತಿ ಇಲ್ಲದೆ ಕೆಲಸ ಮಾಡಬೇಕಾಗಿದ್ದು ಊಟಕ್ಕೂ ಸಹ ಬಿಡುತ್ತಿರಲಿಲ್ಲ ಎನ್ನಲಾಗಿದೆ.
ಹಿರಿಯ ವೈದ್ಯ ಮಹೇಶ್ ಎಂಬಾತನ ಕಿರುಕುಳ ಹೆಚ್ಚಾಗಿದ್ದು, ಕಾಫಿ ಹೆಸರಿನಲ್ಲಿ ದರ್ಶಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಆಡಳಿತ ಮಂಡಳಿಯವರ ಕಿರುಕುಳವನ್ನು ಪ್ರಶ್ನೆ ಮಾಡಿದರೆ ಇಂಟರ್ನಲ್ ಮಾರ್ಕ್ ಕೊಡುವುದಿಲ್ಲ ಎಂಬ ಭಯದಿಂದ, ಮನೆಯವರಿಗೆ ಕಿರುಕುಳದ ಕುರಿತು ತಿಳಿಸದೆ, ಸ್ನೇಹಿತ ಮಣಿ ಎಂಬುವರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಳು.
ವೈದ್ಯನ ವಿರುದ್ದ ಪೋಷಕರು ದೂರು: ಆತ್ಮಹತ್ಯೆಗೂ ಮುನ್ನ ಸ್ನೇಹಿತ ಮಣಿಗೆ ಕರೆ ಮಾಡಿ ಘಟನೆಯನ್ನು ತಿಳಿಸಿ ಫೋನ್ ಕಟ್ ಮಾಡಿದ್ದಾಳೆ. ನಂತರ ಮಣಿಯ ಕರೆಗೂ ಸ್ಪಂದಿಸದೇ ಕ್ವಾರಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದರ್ಶಿನಿ ಕಾಲೇಜಿನಿಂದ ಇಷ್ಟು ದೂರು ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿನಿಯ ತಮ್ಮ ಅನುಮಾನ ವ್ಯಕ್ತಪಡಿಸಿದ್ದಾನೆ.
ಘಟನೆ ಸಂಬಂಧ ಆಡಳಿತ ಮಂಡಳಿ ಹಾಗೂ ಹಿರಿಯ ವೈದ್ಯನ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸರು ಐಪಿಸಿ ಸೆಕ್ಷನ್ 306 ಹಾಗೂ 345 ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.