ಚೆನ್ನೈ: ನೆರೆ ರಾಜ್ಯ ತಮಿಳುನಾಡಲ್ಲಿ ನೀಟ್ ಪರೀಕ್ಷೆ ವಿರುದ್ಧದ ಹೋರಾಟಕ್ಕೆ ನಾಂದಿ ಹಾಡಿದ್ದ 17ರ ಹರೆಯದ ದಲಿತ ವಿದ್ಯಾರ್ಥಿನಿ ಅನಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಝುಮೂರ್ ಗ್ರಾಮದ ತಮ್ಮ ಮನೆಯಲ್ಲಿ ಅನಿತಾ ಶುಕ್ರವಾರ ನೇಣು ಬಿಗಿದುಕೊಂಡಿದ್ದಾರೆ.
ತಮಿಳುನಾಡಿನಲ್ಲಿ ರಾಷ್ಟ್ರೀಯ ಪ್ರವೇಶ ಪರೀಕ್ಷೆ (ನೀಟ್) ಮೂಲಕವೇ ವೈದ್ಯ ಸೀಟುಗಳ ಪ್ರವೇಶ ಪ್ರಕ್ರಿಯೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ವಾರ ಕಳೆಯುವ ಮೊದಲೇ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿದ್ದಾರೆ. ವೈದ್ಯ ಕಾಲೇಜುಗಳ ಪ್ರವೇಶಕ್ಕೆ ನೀಟ್ ಕಡ್ಡಾಯ ಎಂಬ ನೀತಿ ವಿರುದ್ಧ ಧ್ವನಿ ಎತ್ತಿದ್ದ ಅನಿತಾ, ನೀಟ್ ಕಡ್ಡಾಯಗೊಳಿಸದಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಸುಪ್ರೀಂ ತೀರ್ಪಿನಿಂದಾಗಿ ಅನಿತಾ ಸೇರಿ ವೈದ್ಯ ಕೋರ್ಸ್ ಮಾಡುವ ಸಾವಿರಾರು ವಿದ್ಯಾರ್ಥಿಗಳ ಕನಸು ಕಮರಿಹೋಗಿದೆ.
ಪ್ರತಿಭಾನ್ವಿತೆ: ಬಡ ಹಾಗೂ ದಲಿತ ಕುಟುಂಬದಿಂದ ಬಂದಿರುವ ಅನಿತಾ ಅಪ್ಪಟ ಪ್ರತಿಭಾನ್ವಿತೆ. ದ್ವಿತೀಯ ಪಿಯುಸಿಯಲ್ಲಿ 1200 ಅಂಕಗಳಿಗೆ 1176 ಅಂಕ ಗಳಿಸಿದ್ದ ಅನಿತಾ, ನೀಟ್ ಪರೀಕ್ಷೆಯಲ್ಲಿ 700 ಅಂಕಗಳಿಗೆ ಪಡೆದದ್ದು ಕೇವಲ 86 ಅಂಕ. ಹೀಗಾಗಿ ಅವರು ವೈದ್ಯ ಕಾಲೇಜು ಪ್ರವೇಶದಿಂದ ವಂಚಿತರಾಗಿದ್ದರು. ಎಂಜಿನಿಯರಿಂಗ್‌ನಲ್ಲಿ 199.75 ಮತ್ತು ಮೆಡಿಸಿನ್‌ನಲ್ಲಿ 196.75 ಕಟ್-ಆಫ್ ಸ್ಕೋರ್ ಮಾಡಿದ್ದ ಅನಿತಾಗೆ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಹಾಗೂ ಒರತನಾಡಿನ ಪಶುವೈದ್ಯ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ ಸೀಟು ಸಿಕ್ಕಿತ್ತು. ಆದರೆ ವೈದ್ಯೆಯಾಗುವ ಕನಸು ಕಂಡಿದ್ದ ಅನಿತಾ, ಈ ಎರಡೂ ಸೀಟುಗಳನ್ನು ನಿರಾಕರಿಸಿದ್ದರು.
ಜೊತೆಗೆ ನೀಟ್ ಕಡ್ಡಾಯ ಮಾಡುವುದರಿಂದ ತಮಿಳುನಾಡಿದ ಗ್ರಾಮೀಣ ಭಾಗಗಳ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲು ಆವರಿಸಲಿದೆ ಎಂದಿದ್ದ ಅನಿತಾ, ನ್ಯಾಯ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅನಿತಾ ಹಾಗೂ ತಮಿಳುನಾಡು ಸರ್ಕಾರದ ಕೋರಿಕೆ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ನೀಟ್ ಪರ ತೀರ್ಪು ನೀಡಿದ್ದರಿಂದ ಅನಿತಾ ನೊಂದಿದ್ದರು.
ಗಣ್ಯರ ಕಂಬನಿ: ಅನಿತಾ ಸಾವಿಗೆ ಸೂಪರ್‌ಸ್ಟಾರ್ ರಜನಿಕಾಂತ್, ನಟ ಕಮಲ್ ಹಾಸನ್ ಸೇರಿದಂತೆ ಹಲವು ಗಣ್ಯರು, ರಾಜಕೀಯ ಮುಖಂಡರು ಕಂಬನಿ ಮಿಡಿದಿದ್ದಾರೆ. “ಅನಿತಾ ಆತ್ಮಹತ್ಯೆ ಅನಿರೀಕ್ಷಿತ’ ಎಂದಿರುವ ರಜನಿಕಾಂತ್, “ವಿದ್ಯಾರ್ಥಿನಿ ಸಾವಿನಿಂದ ತುಂಬಾ ನೋವಾಗಿದೆ. ದೇವರು ಆಕೆಯ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ,’ ಎಂದಿದ್ದಾರೆ.
ಇದೇ ವೇಳೆ “ಅನಿತಾ ಸಾವಿಗೆ ರಾಜಕಾರಣಿಗಳೇ ಹೊಣೆ’ ಎಂದಿರುವ ಖ್ಯಾತ ನಟ ಕಮಲ್ ಹಾಸನ್, “ನ್ಯಾಯಾಲಯದಲ್ಲಿ ವಾದ ಮಂಡಿಸುವ ಬದಲು “ಚೌಕಾಸಿ’ ಮಾಡಲು ಕುಳಿತಿದ್ದರಿಂದ ಇಂದು ಅನಿತಾ ಪ್ರಾಣ ಕಳೆದುಕೊಂಡಿದ್ದಾಳೆ. ಆಕೆಯ ಜಾತಿ, ಊರು ಯಾವುದೇ ಆಗಿರಲಿ, ಅನಿತಾ ನನ್ನ ಮಗಳು. ನಾವು ಪಕ್ಷಭೇದ ಮರೆತು ಅನಿತಾಗಾಗಿ ಹೋರಾಡಬೇಕಿದೆ,’ ಎಂದು ಕರೆ ನೀಡಿದ್ದಾರೆ. “ಅನಿತಾ ಆತ್ಮಹತ್ಯೆಯ ವಿಷಯ ಕೇಳಿ ಆಘಾತವಾಯಿತು,’ ಎಂದು ತಮಿಳುನಾಡಿನ ಪ್ರಮುಖ ಪ್ರತಿಪಕ್ಷ ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.