Advertisement

ವಿಡಿಯೋ ಕಾನ್ಫರೆನ್ಸ್‌ನಿಂದ ವೈದ್ಯಕೀಯ ಸಲಹೆ

12:18 PM Apr 18, 2020 | Suhan S |

ಹುಬ್ಬಳ್ಳಿ: ಕೋವಿಡ್‌-19 ಕಾರಣದಿಂದ ದೇಶಾದ್ಯಂತ ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಮನೋರೋಗಿಗಳಿಗೆ ಸೂಕ್ತ ಸಲಹೆ-ಸೂಚನೆ ನೀಡುತ್ತಿರುವ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್‌) ಜಿಲ್ಲಾಡಳಿತದ ಸಹಕಾರದಿಂದೊಂದಿಗೆ ಹೆಲ್ಫ್ಲೈನ್‌ ಆರಂಭಿಸಿದ್ದು, ಇದೀಗ ವಿಡಿಯೋ ಕಾನ್ಫರೆನ್ಸ್‌ ಮೂಲಕ ವೈದ್ಯಕೀಯ ಸಲಹೆ ನೀಡಲು ಮುಂದಾಗಿದ್ದು, ಇನ್ನೊಂದು ವಾರದಲ್ಲಿ ಈ ಸೇವೆ ಆರಂಭಗೊಳ್ಳಲಿದೆ.

Advertisement

ಪ್ರಸ್ತುತ ಲ್ಯಾಂಡ್‌ಲೈನ್‌ ಹಾಗೂ ಮೊಬೈಲ್‌ ಮೂಲಕ ವೈದ್ಯಕೀಯ ಸಂಬಂಧಿತ ಸಂದೇಹಗಳ ನಿವಾರಣೆಗೆ ಸಲಹೆ-ಸೂಚನೆ ನೀಡಲಾಗುತ್ತದೆ. ಆದರೆ ಇನ್ನು ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕವೂ ವೈದ್ಯಕೀಯ ಸಲಹೆ ನೀಡಲಾಗುತ್ತದೆ. ಸ್ಮಾರ್ಟ್‌ ಫೋನ್‌ ಅಥವಾ ವಾಟ್ಸ್‌ಆ್ಯಪ್‌ ವಿಡಿಯೋ ಕರೆ ಮೂಲಕ ಡಿಮ್ಹಾನ್ಸ್‌ ತಜ್ಞ ವೈದ್ಯರು ರೋಗಿಗಳೊಂದಿಗೆ  ಸಮಾಲೋಚಿಸಲಿದ್ದಾರೆ.

ಇಲ್ಲಿ ಕೇವಲ ಮನೋರೋಗಗಳಿಗೆ ಮಾತ್ರವಲ್ಲ ಸಾಮಾನ್ಯ ರೋಗಗಳೂ ಕೂಡ ಶುಶ್ರೂಷೆ ಕುರಿತಾದ ಸಲಹೆ ಪಡೆಯಬಹುದಾಗಿದೆ. ತಮ್ಮ ಸಮಸ್ಯೆಗಳನ್ನು ತಜ್ಞ ವೈದ್ಯರೊಂದಿಗೆ ನೇರವಾಗಿ ಹೇಳಿಕೊಳ್ಳುವುದರಿಂದ ರೋಗಿಗಳ ಮನಸ್ಸು ನಿರಾಳವಾಗುತ್ತದೆ ಅಲ್ಲದೇ ಸೂಕ್ತ ಶುಶ್ರೂಷೆ, ಚಿಕಿತ್ಸೆ ಅಥವಾ ಔಷಧ ಸಿಗುವ ಭರವಸೆ ಮೂಡುತ್ತದೆ.

ಡಿಮ್ಹಾನ್ಸ್‌ನಲ್ಲಿ ಏಪ್ರಿಲ್‌ 6ರಿಂದ ಹೆಲ್‌ ಲೈನ್‌ ಸೇವೆ ಆರಂಭಗೊಂಡಿದ್ದು, ಪ್ರತಿದಿನ ಉಕ ಸೇರಿದಂತೆ ದಕ ಭಾಗದ ಹಲವಾರು ಜನರು ಪ್ರತಿನಿತ್ಯ ಕೋವಿಡ್‌-19 ಸಂಬಂಧಿತ ವೈದ್ಯಕೀಯ ಸಂದೇಹಗಳಿಗೆ ತಜ್ಞರಿಂದ ಸಲಹೆ ಪಡೆಯುತ್ತಿರುವುದು ವಿಶೇಷ. ಹೆಲ್ಪ್ಲೈನ್‌ ಗೆ ಕೋವಿಡ್‌-19 ವಿಷಯವಾಗಿ ಶೇ 60 ಪುರುಷರು ಹಾಗೂ ಶೇ.40 ಮಹಿಳೆಯರು ಕರೆ ಮಾಡುತ್ತಿದ್ದಾರೆ. 30ರಿಂದ 40 ವಯೋಮಿತಿಯ ಜನರು ಹೆಚ್ಚಾಗಿ ಹೆಲ್ಪ್ಲೈನ್‌ಗೆ ಕರೆ ಮಾಡುತ್ತಿದ್ದಾರೆ. ಹವಾಮಾನ ಬದಲಾವಣೆಯಿಂದ ಬರುವ ನೆಗಡಿ, ಕೆಮ್ಮು ಕೂಡ ಕೊರೊನಾ ಲಕ್ಷಣದಂತೆಯೇ ಗೋಚರವಾಗಬಹುದಾಗಿದೆ. ಹಲವರ ಊಟ, ನಿದ್ರೆ ಮಾಡುವ ಶೈಲಿಯೇ ಬದಲಾಗಿದೆ. ಲಾಕ್‌ ಡೌನ್‌ ಮೇ 3ರವರೆಗೆ ವಿಸ್ತರಿಸಿರುವುದರಿಂದ ಹಲವರಲ್ಲಿ ಮನೋವ್ಯಥೆಗಳು ಹೆಚ್ಚಾಗಬಹುದು.

ಮಾನಸಿಕ ಭೀತಿ, ಒತ್ತಡ ಖನ್ನತೆಯ ಹಂತಕ್ಕೂ ಹೋಗಬಹುದಾಗಿದೆ. ಲಾಕ್‌ ಡೌನ್‌ ಮಧ್ಯೆಯೂ ಹವ್ಯಾಸಗಳು, ಯೋಗ, ಧ್ಯಾನ, ಕ್ರೀಡೆ ಮೊದಲಾದ ಚಟುವಟಿಕೆಗಳ ಸಹಾಯದಿಂದ ಕ್ರಿಯಾಶೀಲವಾಗಿರಲು ಸಾಧ್ಯವಿದೆ. ಒತ್ತಡ, ಭೀತಿಗೊಳಗಾದವರಿಗೆ, ಖನ್ನತೆಯಿಂದ ಬಳಲುತ್ತಿರುವವರಿಗೆ ಹೆಲ್ಪ್ಲೈನ್‌ ವರದಾನವಾಗಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾನಸಿಕ ಸಂದೇಹ ನಿವಾರಿಸಲು ಮುಂದಾಗಿರುವ ಡಿಮ್ಹಾನ್ಸ್‌ ಕಾರ್ಯ ಶ್ಲಾಘನೀಯವಾಗಿದೆ.

Advertisement

ಜಿಲ್ಲಾಡಳಿತದ ಸಹಕಾರದೊಂದಿಗೆ ಡಿಮ್ಹಾನ್ಸ್‌ ಆರಂಭಿಸಿರುವ ಹೆಲ್ಪ್ಲೈನ್‌ನಿಂದ ಸಾಕಷ್ಟು ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಕೋವಿಡ್‌-19 ಕುರಿತಾದ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳುತ್ತಿದ್ದಾರೆ. ಡಿಮ್ಹಾನ್ಸ್‌ನಿಂದ ಶೀಘ್ರ ವಿಡಿಯೋ ಕಾನ್ಫರೆನ್ಸ್‌ ಸೇವೆ ಆರಂಭಿಸಲಾಗುವುದು. ಇದು ರೋಗಿಗಳ ಸಂದೇಹ ನಿವಾರಣೆಗೆ ಪೂರಕವಾಗುವ ಭರವಸೆಯಿದೆ. ಕೋವಿಡ್‌-19 ಬಗ್ಗೆ ಜನರು ಆತಂಕಗೊಳ್ಳದೇ ವೈದ್ಯರು ನೀಡಿದ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಬೇಕು. – ಡಾ| ಮಹೇಶ ದೇಸಾಯಿ, ಡಿಮ್ಹಾನ್ಸ್‌ ನಿರ್ದೇಶಕರು

 

-ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next