Advertisement

ಮಧ್ಯಸ್ಥಿಕೆಗೆ ಸಮಾನ ಮನಸ್ಥಿತಿ ಅವಶ್ಯ

10:50 AM Aug 04, 2018 | |

ಕಲಬುರಗಿ: ನ್ಯಾಯಾಲಯದಲ್ಲಿ ಬಗೆಹರಿಯದ ಕೆಲವೊಂದು ಪ್ರಕರಣಗಳು ಮಧ್ಯಸ್ಥಿಕೆ ಕೇಂದ್ರದಿಂದ ಇತ್ಯರ್ಥಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಧ್ಯಸ್ಥಿಕೆದಾರರು ಯಾವುದೇ ಪಕ್ಷಗಾರರ ಪರ-ವಿರೋಧ ನಿಲುವು ತಾಳದೆ ಸಮಾನ ಮನಸ್ಥಿತಿ ಹೊಂದುವುದು ಅವಶ್ಯಕವಾಗಿದೆ ಎಂದು ಕರ್ನಾಟಕ ಉತ್ಛ ನ್ಯಾಯಾಲಯ ನ್ಯಾಯಮೂರ್ತಿ, ರಾಜ್ಯ
ಕಾನೂನು ಸೇವಾ ಸಮಿತಿ ಅಧ್ಯಕ್ಷ ಎಲ್‌. ನಾರಾಯಣಸ್ವಾಮಿ ಹೇಳಿದರು.

Advertisement

ಜಿಲ್ಲಾ ನ್ಯಾಯಾಲಯ ಸಮುತ್ಛಯದ ಎ.ಡಿ.ಆರ್‌. ಬಿಲ್ಡಿಂಗ್‌ನಲ್ಲಿ ಬೆಂಗಳೂರು ಹಾಗೂ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ಮಧ್ಯಸ್ಥಿಕೆದಾರರಿಗೆ ಪುನರ್‌ಮನನ್‌ ತರಬೇತಿ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ರಾಜಿ ಸಂಧಾನ ಮೂಲಕ ಸಮಸ್ಯೆಗಳಿಗೆ ಇತಿಶ್ರೀ ಹಾಡುವ ಮಧ್ಯಸ್ಥಿಕೆದಾರರಿಗೆ ಯಾವುದೇ ಶಬ್ದ ಜ್ಞಾನ, ತೋಳ್ಬಲ ಬೇಕಿಲ್ಲ. ಆದರೆ ಪಕ್ಷಗಾರರನ್ನು ಮಾನವೀಯತೆಯಿಂದ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಗಾರರ ಒಳಿತಿಗಾಗಿಯೆ ಹಾಗೂ ಸಮಯ ಮತ್ತು ಆರ್ಥಿಕ ವೆಚ್ಚ ಉಳಿಸಲೆಂದೇ ಮಧ್ಯಸ್ಥಿಕೆ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅವರಿಗೆ ಮನಗಾಣಿಸಬೇಕು ಎಂದರು.

ಮಧ್ಯಸ್ಥಿಕೆದಾರರು ಯಾರು ಸರಿ, ತಪ್ಪು ಎನ್ನುವುದನ್ನು ನಿರ್ಧರಿಸುವುದನ್ನು ಬಿಟ್ಟು ಪ್ರಕರಣದ ವಾಸ್ತವ ಸ್ಥಿತಿಯನ್ನು
ಇಬ್ಬರಿಗೂ ಮನದಟ್ಟಾಗುವಂತೆ ಹೇಳಿ ಸಾಮಾನ್ಯ ಪರಿಹಾರಕ್ಕೆ ಬರುವಂತೆ ತಿಳಿಸಿ, ಪಕ್ಷಗಾರರೇ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮುಕ್ತ ಅವಕಾಶದ ವೇದಿಕೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬ ವ್ಯಕ್ತಿ ತನ್ನ ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರುತ್ತಾನೆ. ಸಾವಿರಾರು ಪ್ರಕರಣಕ್ಕೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಕಲ್ಪಿಸುವ ನ್ಯಾಯಾಧೀಶರಿಗೆ ಕೆಲವೊಮ್ಮೆ ಜಟಿಲ ಪ್ರಕರಣಗಳು ಮುಂದೆ ಬಂದಾಗ ಅದನ್ನು ಮಧ್ಯಸ್ಥಿಕೆ ಕೇಂದ್ರಕ್ಕೂ ವಹಿಸುವುದುಂಟು. ಹೀಗಾಗಿ ಮಧ್ಯಸ್ಥಿಕೆದಾರರು ಯಾವುದೇ ಫಲಾಪೇಕ್ಷವಿಲ್ಲದೆ ಸಮಾಜ ಮುಖೀಯಾಗಿ ಕಾರ್ಯನಿರ್ವಹಿಸಬೇಕು ಎಂದರು. 

ಕರ್ನಾಟಕ ಉತ್ಛನ್ಯಾಯಾಲಯದ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಮಾತನಾಡಿ, ಮಧ್ಯಸ್ಥಿಕೆದಾರರು ಮತ್ತು ಅವರ ವಕೀಲರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಕುಟುಂಬದ ಸದಸ್ಯರಂತೆ ಕಾಣಬೇಕು. ಕಾನೂನು ಕಟ್ಟಳೆಗಳಲ್ಲಿ ಸಡಿಲಿಕೆ ಮಾಡಿಕೊಂಡು ಪಕ್ಷಗಾರರಿಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದರು.

Advertisement

ಜಿಲ್ಲಾ ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಆರ್‌.ಕೆ. ಹಿರೇಮಠ, ಬೆಂಗಳೂರಿನ ಮಿಡಿಯೇಷನ್‌ ಸೆಂಟರಿನ ಮಾಸ್ಟರ್‌ ಟ್ರೇನರ್ ಆಂಡ್‌ ಕೋ-ಆರ್ಡಿನೇಟರ್‌ ಸುಶೀಲಾ ಎಸ್‌., ತರಬೇತಿದಾರರಾದ ಭರತ ಕುಮಾರ ಮೆಹತಾ, ಜೊಯ್‌ ಜೊಸೇಫ್‌, ಉಪನಿರ್ದೇಶಕ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ರಮಾಕಾಂತ ಚವ್ಹಾಣ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಕಾಶಿನಾಥ ಮೋತಕಪಲ್ಲಿ, ಲೋಕ ಅದಾಲತ್‌ ಅಧ್ಯಕ್ಷ ಎಸ್‌.ಎಂ.ಪಾಟೀಲ ಸೇರಿದಂತೆ
ಜಿಲ್ಲಾ ನ್ಯಾಯಾಲಯದ ವಿವಿಧ ಶ್ರೇಣಿಯ ಹಿರಿಯ ಕಿರಿಯ ನ್ಯಾಯಾಧಿಧೀಶರು ಭಾಗವಹಿಸಿದ್ದರು.

ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಪಿ.ಟಿ. ಕಟ್ಟಿಮನಿ ಸ್ವಾಗತಿಸಿದರು, ಹಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌.ಆರ್‌.
ಮಾಣಿಕ್ಯ ನಿರೂಪಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next