ಬೆಂಗಳೂರು: ಸಮಾಜ ಕಟ್ಟುವಿಕೆಯಲ್ಲಿ ಮಾಧ್ಯಮಗಳ ಪಾತ್ರದೊಡ್ಡದಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಭಾನುವಾರ ಪತ್ರಕರ್ತ ಎಂ.ವ್ಯೋಮಕೇಶ ಅವರ “ಬ್ರೇಕಿಂಗ್ ನ್ಯೂಸ್ ಮರ್ಮ, ಟಿಆರ್‌ಪಿ ಮಂತ್ರ ಹಾಗೂ ಸುದ್ದಿಮನೆ ಸ್ವಾರಸ್ಯಗಳು’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮಾಧ್ಯಮಗಳು ಒಳಿತು ಕೆಡಕುಗಳನ್ನು ಪರಾಮರ್ಶೆ ನಡೆಸಿ ಸುದ್ದಿ ಪ್ರಸಾರ ಮಾಡಬೇಕು ಎಂದು ಹೇಳಿದರು.
ಸಾಹಿತ್ಯದ ಅಧ್ಯಯನ ಇದ್ದಾಗ ಮಾತ್ರ ಮಾನವೀಯತೆ ಬೆಳೆಯುತ್ತದೆ. ಈ ಮಾನವೀಯ ನೆಲೆಯಲ್ಲಿ ಬರೆಯುವ ಸುದ್ದಿಗಳು ಸಮಾಜವನ್ನು ತಲುಪುತ್ತವೆ. ಹಾಗಾಗಿ ಪತ್ರಕರ್ತರು ಸಾಹಿತ್ಯ ಅಧಯ್ಯನಕ್ಕೆ ಒತ್ತು ನೀಡಬೇಕು. ತಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಲೇಖಕ ವ್ಯೋಮಕೇಶ ಅವರು ಸುದ್ದಿವಾಹಿನಿಗಳ ಕಾರ್ಯ ವೈಖರಿಯ ಹಲವು ಮಜಲುಗಳನ್ನು ಪರಿಚಯಿಸಿದ್ದಾರೆ. ವಾಹಿನಿಗಳ ಕಾರ್ಯ ನಿರ್ವಹಣೆ, ಟಿಆರ್‌ಪಿ, ಸುದ್ದಿ ವಾಚಕರ ವರ್ತನೆ, ಪ್ರಮಾದ ಸೇರಿದಂತೆ ಹಲವು ಸ್ವಾರಸ್ಯಕರ ಅಂಶಗಳ ಮೇಲೂ ಬೆಳಕು ಚೆಲ್ಲಿದ್ದಾರೆ ಎಂದು ಶ್ಲಾ ಸಿದರು.
ಅಂಕಣಕಾರ ದೀಪಕ್ ತಿಮ್ಮಯ್ಯ ಮಾತನಾಡಿ, ದಶಕಗಳ ಹಿಂದೆ ಮಾಧ್ಯಮಗಳಿಗೆ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೊಂಚ ಭಯ ಪಡುತ್ತಿದ್ದರು. ಇಂದು ಯಾರೂ ಹೆದರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವುದು ಇದಕ್ಕೆ ಕಾರಣ ಎಂದು ಆತಂಕ ವ್ಯಕ್ತಪಡಿಸಿದರು.
ವಚನ ಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ಮಂಗಳೂರು ಡಿವಿಜಿ ಕನ್ನಡ ಬಳಗದ ಕನಕರಾಜು, ಪ್ರಾಧ್ಯಾಪಕಿ ಡಾ.ಎಂ.ಪೊನ್ನಾಂಬಲೇಶ್ವರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.