Advertisement
ಕೋಮು ಹಿಂಸಾಚಾರದಂತಹ ಘಟನೆಗಳು ನಡೆದಾಗ ವದಂತಿಗಳನ್ನೇ ಸುದ್ದಿಗಳಾಗಿ ಬಿತ್ತರಿಸುವ ಕೆಲಸವನ್ನು ಮಾಧ್ಯಮಗಳು ಮಾಡಬಾರದು. ಇತ್ತೀಚಿನ ವರ್ಷಗಳಲ್ಲಿ ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಅನಧಿಕೃತ ಮಾಹಿತಿ, ವೀಡಿಯೋ ತುಣುಕುಗಳನ್ನು ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಬಿತ್ತರಿಸುವುದು ಸಾಮಾನ್ಯವಾಗಿದೆ. ಈ ಮಾಹಿತಿಗಳು ಮತ್ತು ವೀಡಿಯೋ ತುಣುಕುಗಳ ನಿಖರತೆ ಮತ್ತು ವಾಸ್ತವಾಂಶಗಳ ಬಗೆಗೆ ಪರಿಶೀಲನೆ ನಡೆಸದೆ ಸುದ್ದಿ ನೀಡುವ ಪೈಪೋಟಿಯಲ್ಲಿ ಬೇಕಾಬಿಟ್ಟಿಯಾಗಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ನಿಟ್ಟಿನಲ್ಲಿ ಸರಕಾರಕ್ಕೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾವುದೇ ದುರಂತ, ಹಿಂಸಾಚಾರ, ಕೋಮುದಳ್ಳುರಿಯಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಕೆಲವು ಮಾಧ್ಯಮಗಳ ಈ ರೀತಿಯ ವರ್ತನೆಯು ಪರಿಸ್ಥಿತಿ ಯನ್ನು ಮತ್ತಷ್ಟು ಹದಗೆಡುವಂತೆ ಮಾಡುತ್ತಿದೆ. ಇಂದಿನ ಪೈಪೋಟಿಯ ಕಾಲಘಟ್ಟದಲ್ಲಿ ಎಲ್ಲವೂ ಮೊದಲು ನಮ್ಮ ವಾಹಿನಿಯಲ್ಲೇ ಬಿತ್ತರಗೊಳ್ಳ ಬೇಕು ಎಂಬ ಧಾವಂತದಲ್ಲಿ ತಿರುಚಲ್ಪಟ್ಟ ಅಥವಾ ಯಾವುದೋ ಹಳೆಯ ವೀಡಿಯೋ ತುಣುಕುಗಳನ್ನು ಬಿತ್ತರಿಸುವ ಕಾರ್ಯ ಕೆಲವು ಆಧುನಿಕ ಮಾಧ್ಯಮಗಳಿಂದಾಗುತ್ತಿವೆ. ಈ ಕಾರಣದಿಂದಾಗಿಯೇ ಕೋಮು ಹಿಂಸಾಚಾರ, ದುರಂತಗಳು ನಡೆದ ಸಂದರ್ಭದಲ್ಲಿ ಇಂಟರ್‌ನೆಟ್ ಸಂಪರ್ಕ ಸ್ಥಗಿತ, ಕೇಬಲ್ ಕಡಿತದಂತಹ ಕಠಿನ ಮತ್ತು ಅನಿವಾರ್ಯ ಕ್ರಮಗಳನ್ನು ಸ್ಥಳೀಯಾಡಳಿತ ವ್ಯವಸ್ಥೆ ಕೈಗೊಂಡ ಉದಾಹರಣೆ ನಮ್ಮ ಮುಂದೆ ಸಾಕಷ್ಟಿವೆ. ಆದರೆ ಈ ಸಂದರ್ಭದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸುವ ಇದೇ ಸಂಸ್ಥೆಗಳು ಸೂಕ್ಷ್ಮ ವಿಚಾರಗಳನ್ನು ಬಿತ್ತರಿಸುವ ಸಂದರ್ಭದಲ್ಲಿ ಕಿಂಚಿತ್ ವಿವೇಚನೆಯನ್ನೂ ತೋರದಿರುವುದು ದುರಂತ ಎಂದರೆ ಅತಿಶಯೋಕ್ತಿಯಾಗಲಾರದು.
Advertisement
ಪೈಪೋಟಿಯ ಭರದಲ್ಲಿ ಮಾಧ್ಯಮಗಳು ಹೊಣೆಗಾರಿಕೆ ಮರೆಯದಿರಲಿ
11:26 PM Apr 24, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.