ಬದಿಯಡ್ಕ:ಉತ್ತಮ ಆರೋಗ್ಯ ಮತ್ತು ಮನಸ್ಸಿನ ಸ್ಥಿಮಿತಕ್ಕಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡುವುದು ಅತ್ಯಗತ್ಯ. ಎದುರಾಗುವ ಸನ್ನಿವೇಶಗಳನ್ನು ಧೆ„ರ್ಯದಿಂದ ಎದುರಿಸುವ ಶಕ್ತಿ ಯೋಗದಿಂದ ಲಭ್ಯವಾಗುತ್ತದೆ. ನಮ್ಮೊಳಗಿನ ನೋವು ಮತ್ತು ಸಮಸ್ಯೆಗಳಿಂದ ಮುಕ್ತಿ ನೀಡುವ ಸುಲಭದಾರಿ ಯೋಗಾಭ್ಯಾಸ ಎಂದು ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿ ಈಶ್ವರ ನಾಯಕ್ ಅಭಿಪ್ರಾಯ ಪಟ್ಟರು.
ಪೆರಡಾಲ ಕೊರಗ ಕಾಲನಿಯಲ್ಲಿ ಮೀಡಿಯಾ ಕ್ಲಾಸಿಕಲ್ಸ್ ಆಶ್ರಯದಲ್ಲಿ ಜರುಗಿದ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಬದಿಯಡ್ಕ ವ್ಯಾಪಾರಿ ವ್ಯವಸಾಯಿ ಸಮಿತಿಯ ಅಧ್ಯಕ್ಷರಾದ ಕುಂಜಾರು ಮಹಮ್ಮದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಯಾವುದೇ ಮತ, ಧರ್ಮ, ಜಾತಿ, ಕುಲವೆನ್ನದೆ ಜಗತ್ತು ಒಪ್ಪಿಕೊಂಡ ಜೀವನ ಸೂತ್ರ ಇದಾಗಿದೆ. ಧಾರ್ಮಿಕ ಎಲ್ಲೆಗಳನ್ನು ಮೀರಿದ ಅಭ್ಯಾಸವಿದು. ಮನಸಿನ ನಿಯಂತ್ರಣ ಮತ್ತು ದೇಹದ ಸಮರ್ಪಕ ಕಾರ್ಯ ನಿರ್ವಹಣೆಗೆ ಕಾರಣವಾಗುವ ಯೋಗ ಮಾನವನನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ಯಬಲ್ಲುದು ಎಂದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಸದಸ್ಯೆ ಅನಿತಾ ಮಯ್ಯ ಬದಿಯಡ್ಕ ಸಂಪನ್ಮೂಲ ವ್ಯಕ್ತಿಯಾಗಿ ಯೋಗದ ಕುರಿತು ಮಾಹಿತಿ ನೀಡಿ ಯೋಗಾಭ್ಯಾಸವು ಆಧ್ಯಾತ್ಮಿಕ ಆಚರಣೆಯಾಗಿದ್ದು ಚಿರಂತನ ಮತ್ತು ಪರಿಪೂರ್ಣವಾದುದಾಗಿದೆ. ಎಲ್ಲಾ ಕಾಲಕ್ಕೂ ಸಲ್ಲುವ ಹಾಗೂ ಭಗವಂತನೆಡೆಗೆ ಸಾಗುವ ಮಾರ್ಗೋಪಾಯ, ಮಾತ್ರವಲ್ಲದೆ ಇಡೀ ಮಾನವಕುಲದ ಅತ್ಯಂತ ದೊಡ್ಡ ಸಂಪತ್ತು ಯೋಗ. ಮನುಷ್ಯ ಮತ್ತು ಭಗವಂತನ ನಡುವಿನ ಕಳಚಿದ ಕೊಂಡಿಯನ್ನು ಬೆಸೆದು ಸತ್ಕರ್ಮದ ಮೂಲಕ ಸರಿದಾರಿ ತೋರುವ ಶಕ್ತಿ. ಆರೋಗ್ಯಕರ ಜೀವನಕ್ಕೆ ಯೋಗ ಅಗತ್ಯ. ನಮ್ಮ ದೇಶದಲ್ಲಿ ಮಹೋನ್ನತ ಸ್ಥಾನವನ್ನು ಪಡೆದಿರುವ ಈ ಹವ್ಯಾಸ ಸುಖ ಜೀವನದ ಅವಿಭಾಜ್ಯ ಅಂಗ. ದೇಹ ಮತ್ತು ಮನಸ್ಸಿನೊಂದಿಗೆ ಮೌನ ಸಂವಾದ ನಡೆಸುವ ಯೋಗವೆಂಬುದು ಒಂದು ಸಾಧನೆ. ಸಮರ್ಪಕವಾದ, ಕ್ರಮಬದ್ದವಾದ, ಸೂಕ್ತವಾದ, ಸರಿಯಾದ ಯೋಗಾಭ್ಯಾಸ ನಮ್ಮಲ್ಲಿ ನಿಯಂತ್ರಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೆ ಶಾಂತವಾದ ಜೀವನಕ್ಕೆ ಮೂಲವಾಗಿದೆ. ದೇಹ ಮತ್ತು ,ಮನಸ್ಸನ್ನು ಒಂದುಗೂಡಿಸಿ ಏಕಾಗ್ರತೆಗೊಳಿಸುವುದೇ ಯೋಗದ ಗುರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಲೌಕಿಕ ಭೋಗಗಳಿಗಿಂತಲೂ ಆಂತರಿಕ ಶುದ್ಧಿ, ಸಮಾಧಾನ ಮುಖ್ಯವಾದುದು. ಆಧುನಿಕ ಜೀವನ ರೀತಿ, ಆಹಾರ ಪದ್ಧತಿ ತಂದೊಡ್ಡುವ ಹೆಚ್ಚಿನ ಎಲ್ಲಾ ಸಮಸ್ಯೆಗಳಿಗೂ ಯೋಗವೇ ಪರಿಹಾರ. ಮನಸಿದ್ದರೆ ಮಾರ್ಗ. ಆದುದರಿಂದ ಇರುವ ಸಮಯದಲ್ಲಿ ಒಂದಷ್ಟು ಹೊತ್ತು ಯೋಗಕ್ಕಾಗಿ ಮೀಸಲಿಟ್ಟು ಸುಂದರವಾದ ಬದುಕನ್ನು ಕಂಡುಕೊಳ್ಳುವ ಮನಸು ಮಾಡುವ ಮೂಲಕ ಉತ್ತಮವಾದ ಜೀವನ ಶೆ„ಲಿಯನ್ನು ನಮ್ಮದಾಗಿಸುವ ಎಂದು ಸಲಹೆಯನ್ನಿತ್ತರು. ಮೀಡಿಯಾ ಕ್ಲಾಸಿಕಲ್ ಸ್ಥಾಪಕರಾದ ಅಖೀಲೇಶ್ ನಗುಮುಗಂ, ಶ್ಯಾಮಲಾ ನಾರಂಪಾಡಿ ಶುಭಾಶಂಸನೆಗೆ„ದರು. ಕಾರ್ಯದರ್ಶಿಗಳಾದ ಬಾಲಕೃಷ್ಣ ಆಚ್ಚಾಯಿ ಧನ್ಯವಾದ ಸಮರ್ಪಿಸಿದರು. ಸಂಘಟನಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.