Advertisement
“ಇಂಗ್ಲಿಷ್ ವಿಂಗ್ಲಿಷ್’ ಚಲನಚಿತ್ರದಲ್ಲಿ ನಟಿ ಶ್ರೀದೇವಿ, ತನಗೆ ಇಂಗ್ಲಿಷ್ ಬರುವುದಿಲ್ಲ ಎಂಬ ಹೀಯಾಳಿಕೆಯನ್ನು ಮೆಟ್ಟಿ ನಿಲ್ಲಲು ಶಾಲೆ ಸೇರುತ್ತಾರೆ. ಪುಟ್ಟ ಮಕ್ಕಳೊಡನೆ ಪಾಠ ಕೇಳುತ್ತಾರೆ. ಆ ಸಂದರ್ಭದಲ್ಲಿ ಬಗೆ ಬಗೆಯ ಅವಮಾನಗಳಿಗೆ ತುತ್ತಾಗುತ್ತಾರೆ. ನಗೆಪಾಟಲಿಗೆ ಈಡಾಗುತ್ತಾರೆ. ಕಡೆಗೊಮ್ಮೆ ಎಲ್ಲರೂ ಚಪ್ಪಾಳೆ ಹೊಡೆಯುವ ಮಟ್ಟಕ್ಕೆ ಏರುತ್ತಾರೆ. ಅಂಥದೇ ಒಂದು ನಿಜಜೀವನದ ಕತೆ ಇಲ್ಲಿದೆ. ಸಂಸಾರದ ನೊಗ ಹೊತ್ತು, ಸರಕಾರಿ ನೌಕರಿ ಮಾಡುತ್ತಿದ್ದ ಗೃಹಿಣಿಯೊಬ್ಬರು, ಓದು ಮುಂದುವರಿಸಲು ತೀರ್ಮಾನಿಸಿ ಸಂಕಷ್ಟಗಳನ್ನು ಎದುರಿಸಿ ಗೆದ್ದ ಮಹಿಳೆಯ ಕತೆಯಿದು. ಇವರ ಹೆಸರು ಶೋಭಾ ಶ್ರೀನಿವಾಸ. ಸದ್ಯ ಕೋಲಾರ ಜಿಲ್ಲೆ ಮಾಸ್ತಿ ಬಳಿಯ ತೊಳಕನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ. ಕೆಲಸಕ್ಕೆ ಸೇರಿದ 6 ವರ್ಷಗಳ ಬಳಿಕ ಇವರಿಗೆ ಮದುವೆಯಾಯಿತು.ಗಂಡ, ಮನೆ, ಮಗು ಎಂಬ ಹೊಸ ಜವಾಬ್ದಾರಿಯ ಜೊತೆಯಲ್ಲಿ ಮತ್ತೂ ನಾಲ್ಕು ವರ್ಷಗಳು ಕಳೆದುಹೋದವು. ಈ ಸಂದರ್ಭದಲ್ಲಿಯೇ ಮತ್ತೆ ಕಾಲೇಜಿಗೆ ಹೋಗಬೇಕು, ಡಿಗ್ರಿ ಪಡೆಯಬೇಕು ಎಂಬ ಮಹದಾಸೆ ಇವರಿಗೆ ಜೊತೆಯಾಯಿತು. 10 ವರ್ಷಗಳ ಅಂತರದ ನಂತರ ಮತ್ತೆ ಕಾಲೇಜಿಗೆ ಸೇರಿ, ಕಷ್ಟಪಟ್ಟು ಓದಿ ಬಿಎಸ್ಸಿ ಪದವಿ ಪಡೆದದ್ದು ಮಾತ್ರವಲ್ಲ, ಕನ್ನಡದಲ್ಲಿ 2 ಚಿನ್ನದ ಪದಕಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ! ಗೃಹಿಣಿಯಾದ ನಂತರದಲ್ಲಿ ಓದಲು ಹೊರಟಾಗ ಕಾಲೇಜಿನ ಒಳಗೆ ಮತ್ತು ಹೊರಗೆ ತಮಗೆ ಜೊತೆಯಾದ ಸವಾಲು ಮತ್ತು ಸಂಭ್ರಮಗಳ ಕತೆಯನ್ನು ಇಲ್ಲಿ ಶೋಭಾ ಶ್ರೀನಿವಾಸ ಹೇಳಿಕೊಂಡಿದ್ದಾರೆ.
Related Articles
ಈ ಮಧ್ಯೆ ಹತ್ತು ವರ್ಷಗಳ ಅಂತರದ ನಂತರ ಮತ್ತೆ ವಿದ್ಯಾರ್ಥಿಯಂತೆ ಕೂತು ಪಾಠ ಕೇಳುವುದು ಬಹಳ ಕಷ್ಟವಾಗಿಬಿಟ್ಟಿತು. ಪಾಠ ಕೇಳ್ತಾ ಕೇಳ್ತಾ ನಿದ್ದೆ ಬಂದುಬಿಡುತಿತ್ತು.
Advertisement
ನನ್ನ ನಿದ್ದೆ ನೋಡಿ ಎಲ್ರೂ ನಗಾಡೋರು. ವಿಜ್ಞಾನದ ವಿಷಯಗಳು ತುಂಬಾ ಕಠಿಣವೆನಿಸುತ್ತಿತ್ತು. ಗಣಿತ ಸೂತ್ರಗಳು, ಹೆಸರುಗಳು ಮರೆತೇಹೋಗಿದ್ದವು. ಉಪನ್ಯಾಸಕರು ಪಿಯುಸಿ ಮಕ್ಕಳನ್ನು ಉದ್ದೇಶವಾಗಿಟ್ಟುಕೊಂಡು ನೇರ ವಿಷಯ ಮಂಡನೆ ಮಾಡಿಬಿಡುತ್ತಿದ್ದರು. ನನಗಂತೂ ಯಾವುದು, ಎಲ್ಲಿಂದ ಬಂತು? ಯಾವುದರ ಬಗ್ಗೆ ಇವರು ಪಾಠ ಮಾಡುತ್ತಿದ್ದಾರೆ ಅನ್ನೋದೇ ಮರೆತುಹೋಗುತಿತ್ತು. ಈ ಕಷ್ಟಕ್ಕೆ ಉಪ್ಪು ಖಾರ ಸವರುವಂತೆ ಮೊದಲನೇ ಸೆಮಿಸ್ಟರ್‌ನಲ್ಲಿ ಎಲ್ಲಾ ವಿಷಯಗಳಲ್ಲಿ ಅತಿ ಕಡಿಮೆ ಅಂಕಗಳು ಬಂದಾಗ ತುಂಬಾ ಆತಂಕಕ್ಕೆ ಒಳಗಾಗಿಬಿಟ್ಟೆ. ಅಯ್ಯೋ ದೇವೆÅ ಉದ್ಯೋಗ ಬಿಟ್ಟು ಎಂಥಾ ದೊಡ್ಡ ತಪ್ಪು ಮಾಡಿಬಿಟ್ಟೆ ಅಂತ ಬಹಳ ಚಿಂತೆಗೀಡಾದೆ. ಯಜಮಾನರು ಆಗೆಲ್ಲಾ ತುಂಬಾ ಧೈರ್ಯ ಹೇಳ್ತಿದ್ರು. ಕಷ್ಟಗಳು, ಮುಜುಗರಗಳು ಹೆಚ್ಚಿದಂತೆ ಮನದ ಮೂಲೆಯಲ್ಲೆಲ್ಲೋ ಒಂದು ಕಡೆ ಛಲ ತನ್ನಿಂತಾನೇ ರೂಪುಗೊಳ್ಳುತ್ತಾ ಹೋಯಿತು.ನಿನ್ನ ಮೇಲೆ ನಿನಗೆ ನಂಬಿಕೆ ಇರುವ ತನಕ ಯಾರೂ ನಿನ್ನನ್ನು ಸೋಲಿಸಲಾರರು ಎಂಬ ವಾಕ್ಯವನ್ನು ಪುನಃ ಪುನಃ ಮನಸಲ್ಲೇ ಹೇಳಿಕೊಂಡೆ. ಕಷ್ಟ ಎನಿಸುತ್ತಿದ್ದ ಸಂಗತಿಗಳ ಬಗ್ಗೆ ಹೆಚ್ಚು ಒಲವು ತೋರಿಸಲು ಶುರು ಮಾಡಿದೆ. ಕಷ್ಟಗಳನ್ನು ಪ್ರೀತಿಸಿದಂತೆಯೆ ಅವುಗಳು ಸಲೀಸಾಗಿ ಕಂಡವು ನನಗೆ. ಅಲ್ಲಿಂದ ಹಿಂದಿರುಗಿ ನೋಡಲಿಲ್ಲ. ಕಾಲೇಜಿನಲ್ಲಿ ನನ್ನದೇ ಆದ ಒಂದು ಸ್ನೇಹ ಬಳಗ ಸೃಷ್ಟಿಯಾಯಿತು. ಅನೇಕ ಕಾರಣಗಳಿಗೆ ಬೇಸರಗೊಳ್ಳುತ್ತಿದ್ದ, ನೋವುಣ್ಣುತ್ತಿದ್ದ ಹುಡುಗಿಯರು ನನ್ನ ಬಳಿ ಬಂದು ಕಷ್ಟಗಳನ್ನು ಹೇಳಿಕೊಳ್ತಿದ್ರು. ನನ್ನ ಹಿರಿತನ ಇಲ್ಲಿ ತುಂಬಾನೇ ಉಪಯೋಗಕ್ಕೆ ಬಂತು. ಅವರ ಕಷ್ಟಗಳಿಗೆ ಸ್ಪಂದಿಸಿದಂತೆಲ್ಲಾ ಅವರ ಆತ್ಮೀಯತೆ ಜಾಸ್ತಿಯಾಯಿತು. ಪಠ್ಯ ವಿಷಯದಲ್ಲೂ ಹೆಚ್ಚೆಚ್ಚು ಅಭ್ಯಾಸ ಮಾಡಿದಂತೆ ಕಠಿಣವಾದ ವಿಷಯಗಳು ಸರಳವಾದವು. ಹೀಗೆ ಕಷ್ಟಗಳು ನಿಧಾನಕ್ಕೆ ಕಣ್ಮರೆಯಾಗುತ್ತಾ ಬಂದವು. ಎರಡನೇ ಸೆಮಿಸ್ಟರ್ ಹೊತ್ತಿಗೆ ಮೊದಲ ದರ್ಜೆ ಪಡೆದ ಐದೋ ಹತ್ತೋ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬಳಾಗಿದ್ದೆ. ಅದುವರೆಗೂ ನನ್ನನ್ನು ಪ್ರತ್ಯೇಕಿಸಿ ನೋಡುತ್ತಿದ್ದವರೆಲ್ಲರೂ ಈಗ ತಮ್ಮ ಸ್ಪರ್ಧಿ ಎಂಬಂತೆ ನೋಡೋಕೆ ಶುರುಮಾಡಿದರು. ನಾನು ವಿಜ್ಞಾನದ ವಿದ್ಯಾರ್ಥಿಯಾಗಿ ಕನ್ನಡದಲ್ಲಿ ಹೇಗೆ ಚಿನ್ನದ ಪದಕ ಪಡೆದೆ ಎಂಬುದು ಇಂಟ್ರಸ್ಟಿಂಗ್ ವಿಷಯ. ನಮ್ಮ ಮನೆಯಲ್ಲಿ ಸಂಪೂರ್ಣ ಕನ್ನಡಮಯ ವಾತಾವರಣ. ಅದಕ್ಕೆ ಕಾರಣ ನಮ್ಮೆಜಮಾನ್ರು ಕನ್ನಡ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು. ವಾರಕ್ಕೆ ಕನಿಷ್ಠ 3 ಪುಸ್ತಕ ನಮ್ಮ ಮನೆಗೆ ಅತಿಥಿಗಳಂತೆ ಬರುತ್ತಿರುತ್ತವೆ. ನಮ್ಮವರ ಪುಸ್ತಕ ಓದುವ ಅಭ್ಯಾಸದಿಂದ ನನಗೂ ಪುಸ್ತಕಗಳನ್ನು ಓದುವುದು ಮೆಚ್ಚಿನ ಹವ್ಯಾಸವಾಗಿಬಿಟ್ಟಿತ್ತು. ಪಠ್ಯಪುಸ್ತಕಗಳ ಜೊತೆ ಜೊತೆಗೆ ಸಮಯ ಸಿಕ್ಕಾಗಲೆಲ್ಲಾ ನಮ್ಮವರು ತರುತ್ತಿದ್ದ ತರಹೇವಾರಿ ಪುಸ್ತಕಗಳನ್ನು ಓದುತ್ತಿದ್ದೆ. ಗಣಿತ, ರಸಾಯನ ಶಾಸ್ತ್ರ, ವಿಜ್ಞಾನ ಎಲ್ಲವನ್ನೂ ಬರೆದು ಬರೆದು ಅಭ್ಯಾಸ ಮಾಡುತ್ತಿದ್ದೆ, ಆದರೆ ಕನ್ನಡ ವಿಷಯಕ್ಕಾಗಿ ವಿಶೇಷ ಅಭ್ಯಾಸ ಮಾಡುತ್ತಲೇ ಇರಲಿಲ್ಲ. ಕನ್ನಡ ಹೇಗೋ ಪಾಸಾಗುತ್ತದೆ ಅಲ್ವಾ ಅದಕ್ಕೆ ಬೇರೆ ವಿಷಯಗಳನ್ನು ಹೆಚ್ಚು ಓದಿಕೊಳ್ಳೋಣ ಅಂದುಕೊಳ್ಳುತ್ತಿದ್ದೆ. ಆಶ್ಚರ್ಯವೆಂದರೆ, ಪರೀಕ್ಷೆ ಕೊಠಡಿಯಲ್ಲಿ ಕನ್ನಡ ಅದೆಷ್ಟು ಸಲೀಸಾಗಿರುತ್ತಿತ್ತು ಎಂದರೆ, ಒಂದೇ ಒಂದು ಪ್ರಶ್ನೆಯೂ ಕಷ್ಟವೆನಿಸುತ್ತಿರಲಿಲ್ಲ. ಎಲ್ಲವೂ ಥಟ್ಟನೆ ನೆನಪಾಗಿಬಿಡುತ್ತಿದ್ದವು. ಕನ್ನಡವೊಂದನ್ನು ಮಾತ್ರ ಇಷ್ಟಪಟ್ಟು ಓದುತ್ತಿದ್ದೆ ಎನ್ನಿಸುತ್ತಿದೆ. ಈ ಕಾರಣದಿಂದಲೇ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯಲು ಮತ್ತು ಆ ಮೂಲಕ ಚಿನ್ನದ ಪದಕ ಪದಕ ಪಡೆಯಲು ಸಾಧ್ಯವಾಯಿತು.