Advertisement

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ  ಪದಕ ಗೆಲ್ಲಲು ಸ್ಫೂರ್ತಿ: ಗುರುರಾಜ್‌

07:30 AM Mar 07, 2018 | Team Udayavani |

ಕುಂದಾಪುರ: ತಾಲೂಕಿನ ಚಿತ್ತೂರಿನ ವೇಟ್‌ಲಿಫ್ಟರ್‌ ಗುರುರಾಜ್‌ ಪೂಜಾರಿ ಅವರು ಈ ಬಾರಿಯ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮಾ. 7ರಂದು ಬೆಂಗಳೂರಿನಲ್ಲಿ   ಪ್ರಶಸ್ತಿ ಸ್ವೀಕರಿಸುವರು. ವಂಡ್ಸೆ ನಿವಾಸಿ ಮಹಾಬಲ ಪೂಜಾರಿ ಮತ್ತು ಪದ್ದು ಪೂಜಾರಿ ದಂಪತಿಯ ಪುತ್ರನಾದ ಗುರುರಾಜ್‌ ಬಡತನದಿಂದ ಅರಳಿ ಬಂದ ಪ್ರತಿಭೆ. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಅಲ್ಲಿನ ಕೋಚ್‌ ರಾಜೇಂದ್ರ ಪ್ರಸಾದ್‌ ಗರಡಿಯಲ್ಲಿ ಪಳಗಿದ ಇವರು ಅಂತಾರಾಷ್ಟ್ರೀಯ ಮಟ್ಟದ ವೇಟ್‌ ಲಿಫ್ಟಿಂಗ್‌ನಲ್ಲಿ ಅನೇಕ ಚಿನ್ನದ ಪದಕಗಳನ್ನು ಪಡೆದು  ದೇಶಕ್ಕೆ ಕೀರ್ತಿ ತಂದಿದ್ದಾರೆ.

Advertisement

ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ  ಅವರು ಹಂತ- ಹಂತವಾಗಿ ಕಠಿನ ಪರಿಶ್ರಮದಿಂದ  ಬೆಳೆದವರು. ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ದಿಗಂತದೆಡೆಗೆ ಮುನ್ನಡೆದವರು. 

ಸಾಧನೆಗಳು
2016ರಲ್ಲಿ ಮಲೇಷ್ಯಾದಲ್ಲಿ ನಡೆದ ಕಾಮನ್‌ವೆಲ್ತ್‌ ಚಾಂಪಿಯನ್‌ ಶಿಪ್‌ನಲ್ಲಿ ಚಿನ್ನದ ಪದಕ, 2017 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಚಾಂಪಿ ಯನ್‌ ಶಿಪ್‌ನಲ್ಲಿ ಚಿನ್ನದ ಪದಕ, 2016ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್‌ ನಲ್ಲಿ ಚಿನ್ನದ ಪದಕ ಗೆದ್ದ ಇವರು, ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ 2015, 2016 ರಲ್ಲಿ ಚಿನ್ನ, 2014 ರಲ್ಲಿ ಬೆಳ್ಳಿ ಪದಕ, ಅಖೀಲ ಭಾರತೀಯ ಟೂರ್ನಿಯಲ್ಲಿ 2014 ಹಾಗೂ 15ರಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಗುರುರಾಜ್‌ ಅವರದು.

ತಂದೆಗೆ ಪ್ರಶಸ್ತಿ ಅರ್ಪಣೆ
ತನ್ನ ಸಾಧನೆಗೆ ಸರಕಾರದಿಂದ ಸಿಗುತ್ತಿರುವ ಮೊದಲ ಗೌರವ ವಾಗಿದ್ದು, ತುಂಬಾ ಖುಷಿಯಾಗ್ತಿದೆ.  ಎಪ್ರಿಲ್‌- ಮೇನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲಲು ಈ ಪ್ರಶಸ್ತಿ ಸ್ಫೂರ್ತಿಯಾಗಿದೆ. ಸದ್ಯ ಪಂಜಾಬ್‌ನ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಅಕಾಡೆಮಿ ಯಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ಗೆ ತಯಾರಿ ನಡೆಸುತ್ತಿದ್ದೇನೆ. ಈ ಪ್ರಶಸ್ತಿ ಕೋಚ್‌, ಗುರು ಗಳೂ, ಎಸ್‌ಡಿಎಂ ಶಿಕ್ಷಣ ಸಂಸ್ಥೆ, ಹೆತ್ತವರಿಗೆ ಸಂದ ಗೌರವ. ಅದರಲ್ಲೂ ರಿಕ್ಷಾದಲ್ಲಿ ದುಡಿದು ಕಷ್ಟ ಪಟ್ಟು ಓದಿಸಿದ ತಂದೆಗೆ ಈ ಪ್ರಶಸ್ತಿ ಅರ್ಪಣೆ. 
ಗುರುರಾಜ್‌ ,  ಏಕಲವ್ಯ ಪ್ರಶಸ್ತಿ ವಿಜೇತ

ಪ್ರಶಾಂತ್‌ ಪಾದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next