Advertisement

ಉದ್ದು, ಹುರುಳಿ ಕಟಾವಿಗೆ ಜಿಲ್ಲೆಗೂ ಬಂತು ಯಾಂತ್ರೀಕೃತ ವಿಧಾನ

11:36 PM Feb 10, 2021 | Team Udayavani |

ಕೋಟ: ಉಡುಪಿ ಜಿಲ್ಲೆಯಲ್ಲಿ ಉದ್ದು, ಹುರುಳಿ, ಹೆಸರು ಮುಂತಾದ ಧಾನ್ಯಗಳ ಬೇಸಾಯಕ್ಕೆ ಇದುವರೆಗೆ ಸಾಂಪ್ರದಾಯಿಕ ವಿಧಾನವನ್ನೇ ಅನುಸರಿಸಲಾಗುತಿತ್ತು. ಆದರೆ ಕಾರ್ಮಿಕರ ಕೊರತೆ, ದುಬಾರಿ ವೆಚ್ಚ ಮುಂತಾದ ಸಮಸ್ಯೆಗಳಿರುವುದರಿಂದ ವರ್ಷದಿಂದ ವರ್ಷಕ್ಕೆ ಬೆಳೆಯ ಪ್ರಮಾಣ ಕುಸಿಯುತ್ತಿತ್ತು. ಯಾಂತ್ರೀಕೃತ ವಿಧಾನ ಇದ್ದರೂ ಬಂದಿರಲಿಲ್ಲ. ಈಗ ಯಡ್ತಾಡಿಯಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಉದ್ದು ಕಟಾವಿಗೆ ಯಾಂತ್ರೀಕೃತ ವಿಧಾನವನ್ನು ಬಳಸಿಕೊಳ್ಳಲಾಗಿದ್ದು ರೈತರಲ್ಲಿ ಆಶಾ ಭಾವನೆ ಮೂಡಿಸಿದೆ.

Advertisement

ಹೇಗಿದೆ ದ್ವಿದಳ ಧಾನ್ಯ ಕಟಾವು ಯಂತ್ರ?
ಭತ್ತ ಕಟಾವು ಯಂತ್ರದಲ್ಲೆ ಸ್ವಲ್ಪ ಬದಲಾವಣೆಗಳನ್ನು ಮಾಡಿ ಉದ್ದು ಮುಂತಾದ ಧಾನ್ಯದ ಕಟಾವು ತಂತ್ರಜ್ಞಾನವನ್ನು ರೂಪಿಸಲಾಗಿದೆ. ಕಟಾವು ಮಾಡಿ, ಕೋಡನ್ನು ಗಿಡದಿಂದ ಬೇರ್ಪಡಿಸಿ, ಶುದ್ಧೀಕರಿಸಿ, ಧಾನ್ಯವನ್ನು ಹೊರ ಹಾಕುವ ತಂತ್ರಜ್ಞಾನ ಈ ಯಂತ್ರದಲ್ಲಿದೆ. ಸಾಂಪ್ರದಾಯಿಕ ವಿಧಾನದಲ್ಲಿ ಗಿಡವನ್ನು ಕಿತ್ತು, ಬಿಸಿಲಿನಲ್ಲಿ ಒಣಗಿಸಿ ಅನಂತರ ಬಡಿದು ಬೇರ್ಪಡಿಸಬೇಕಾಗುತ್ತದೆ. ಆದರೆ ಈ ಯಂತ್ರ ಕೆಲವೇ ನಿಮಿಷಗಳಲ್ಲಿ ಈ ಎಲ್ಲ ಕೆಲಸವನ್ನು ಮುಗಿಸುತ್ತದೆ.

ಹೊಸ ಭರವಸೆ
ಉದ್ದು, ಹುರುಳಿ ಮುಂತಾದ ಧಾನ್ಯಗಳ ಬೇಸಾಯ ಭತ್ತಕ್ಕಿಂತ ಹೆಚ್ಚು ಲಾಭದಾಯಕ. ಆದರೆ ನಿರ್ವಹಣೆ ವೆಚ್ಚ, ಶ್ರಮ ಅಧಿಕವಾಗಿರುವುದರಿಂದ ಸಾಕಷ್ಟು ಮಂದಿ ಈ ಕೃಷಿಯನ್ನು ಕೈ ಬಿಟ್ಟಿದ್ದಾರೆ. ಇದೀಗ ಯಾಂತ್ರೀಕೃತ ವಿಧಾನ ಪರಿಚಯವಾಗಿರುವುದರಿಂದ ಸಮಸ್ಯೆಗಳು ದೂರವಾಗಲಿದ್ದು, ರೈತರು ಮನಸ್ಸು ಮಾಡಬಹುದು ಎನ್ನುವ ನಿರೀಕ್ಷೆ ಇದೆ. ಆದರೆ ದೊಡ್ಡ ಪ್ರಮಾಣದಲ್ಲಿ ಬೆಳೆ ಬೆಳೆದರೆ ಮಾತ್ರ ಈ ವಿಧಾನ ಹೆಚ್ಚು ಅನುಕೂಲವಾಗಲಿದೆ.

ಎಕರೆಗೆ ನಾಲ್ಕೈದು ಸಾವಿರ ರೂ. ಉಳಿತಾಯ
ಸಾಂಪ್ರದಾಯಿಕ ವಿಧಾನದಲ್ಲಿ 1ಎಕರೆ ಪ್ರದೇಶದ ಉದ್ದಿನ ಬೆಳೆಯನ್ನು ಕಟಾವು ಮಾಡಿ ಒಕ್ಕಣೆ ಮಾಡಲು ಸುಮಾರು 7-8 ಸಾವಿರ ರೂ. ಖರ್ಚು ತಗಲುತ್ತದೆ. ಆದರೆ ಈ ಯಂತ್ರ ಗಂಟೆಗೆ ಒಂದು ಎಕರೆ ಕೆಲಸ ಮಾಡುತ್ತದೆ. ಗಂಟೆಗೆ ಮೂರು ಸಾವಿರ ಬಾಡಿಗೆ ನಿಗದಿಪಡಿಸಲಾಗಿದ್ದು ಸಾಂಪ್ರದಾಯಿಕ ವಿಧಾನಕ್ಕಿಂತ ನಾಲ್ಕೈದು ಸಾವಿರ ರೂ. ಉಳಿತಾಯವಾಗುತ್ತದೆ.

ಸಾಕಷ್ಟು ಅನುಕೂಲ
ಅಧಿಕ ನಿರ್ವಹಣೆ ವೆಚ್ಚ, ಹೆಚ್ಚು ಶ್ರಮ ಮುಂತಾದ ಕಾರಣಗಳಿಗೆ ಜಿಲ್ಲೆಯಲ್ಲಿ ಉದ್ದು, ಹುರುಳಿ ಧಾನ್ಯದ ಬೇಸಾಯ ಕುಂಠಿತವಾಗುತ್ತಿದೆ. ರೈತರಲ್ಲಿ ಹೊಸ ಭರವಸೆ ಮೂಡಿಸಲು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಯಡ್ತಾಡಿ ಸತೀಶ್‌ ಶೆಟ್ಟಿಯವರ ಜಮೀನಿನಲ್ಲಿ ಯಂತ್ರ ಕಟಾವು ಪರಿಚಯಿಸಲಾಗಿದೆ. ಉದ್ದು, ಹುರುಳಿ ಬೆಳೆಗಾರರಲ್ಲಿ ಇದು ಹೊಸ ಭರವಸೆ ಮೂಡಿಸುವ ನಿರೀಕ್ಷೆ ಇದೆ.
-ಡಾ| ಶಂಕರ್‌, ಎಂಜಿನಿಯರ್‌, ವ. ಕೃ.ಸಂ. ಕೇಂದ್ರ ಬ್ರಹ್ಮಾವರ

Advertisement

ರೈತರಿಗೆ ಅನುಕೂಲ
ಯಾಂತ್ರೀಕೃತ ಕಟಾವು ವಿಧಾನದಿಂದ ಉದ್ದು, ಹುರುಳಿ ಬೇಸಾಯ ಉಳಿಯಲಿದೆ. ಈ ವಿಧಾನ ಸಾಕಷ್ಟು ಲಾಭದಾಯಕವಾಗಿದೆ. ರೈತರು ಈ ಬಗ್ಗೆ ಹೆಚ್ಚು ಗಮನಹರಿಸಬೇಕು.
-ಸತೀಶ್‌ ಶೆಟ್ಟಿ ಯಡ್ತಾಡಿ, ಯಾಂತ್ರೀಕೃತ ವಿಧಾನ ಅಳವಡಿಸಿಕೊಂಡ ರೈತ

Advertisement

Udayavani is now on Telegram. Click here to join our channel and stay updated with the latest news.

Next