ನವದೆಹಲಿ: ಕರ್ನಾಟಕದಲ್ಲಿ ಹಲಾಲ್, ಆಜಾನ್ ವಿವಾದ ತಲೆದೋರಿರುವ ಬೆನ್ನಲ್ಲೇ ಚೈತ್ರ ನವರಾತ್ರಿ ಹಿನ್ನೆಲೆಯಲ್ಲಿ ಮಂಗಳವಾರದಿಂದ (ಏ.05) ಏಪ್ರಿಲ್ 11ರವರೆಗೆ ಮಾಂಸ ಮಾರಾಟ ಮಾಡಲು ಅನುಮತಿ ನೀಡಬಾರದು ಎಂದು ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯ ಮೇಯರ್ ತಿಳಿಸಿದ್ದಾರೆ. ಅದೇ ರೀತಿ ಮದ್ಯದ ಅಂಗಡಿಗಳನ್ನು ಬಂದ್ ಮಾಡುವಂತೆ ಮುಖ್ಯಮಂತ್ರಿ ಕೇಜ್ರಿವಾಲ್ ಆದೇಶ ಹೊರಡಿಸಲಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಬೆಲೆ ಏರಿಕೆ ಮರೆಮಾಚಲು ಹಲಾಲ್, ಭಗವದ್ಗೀತೆ, ಅಜಾನ್ ವಿವಾದ ಸೃಷ್ಠಿ: ಸಿದ್ಧರಾಮಯ್ಯ
ಏಪ್ರಿಲ್ 2ರಿಂದ 11ರವರೆಗೆ ಚೈತ್ರ ನವರಾತ್ರಿ ನಡೆಯಲಿದ್ದು, ಇದೇ ಮೊದಲ ಬಾರಿ ದೆಹಲಿ ಮಹಾನಗರ ಪಾಲಿಕೆ ಮಾಂಸ ಮಾರಾಟ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿರುವುದಾಗಿ ವರದಿ ಹೇಳಿದೆ.
ಮಾಂಸದ ಅಂಗಡಿ ಬಂದ್ ಮಾಡುವಂತೆ ಮೇಯರ್ ಮುಕೇಶ್ ಸೂರ್ಯನ್ ಎಸ್ ಡಿಎಂಸಿ ಕಮಿಷನರ್ ಜ್ಞಾನೇಶ್ ಭಾರ್ತಿ ಅವರಿಗೆ ಪತ್ರ ಬರೆದಿದ್ದು, ಚೈತ್ರನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ದುರ್ಗಾದೇವಿಗೆ ಪೂಜೆ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಮಾಂಸದ ಕೆಟ್ಟ ವಾಸನೆಯಿಂದ ಭಕ್ತರ ಭಾವನೆ ಮತ್ತು ಧಾರ್ಮಿಕ ನಂಬಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಉಲ್ಲೇಖಿಸಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ದುರ್ಗಾ ಮಾತೆಯ ಭಕ್ತರು ಒಂಬತ್ತು ದಿನಗಳ ಕಾಲ ಕಟ್ಟುನಿಟ್ಟಾಗಿ ಸಸ್ಯಾಹಾರದ ಜತೆ ಉಪವಾಸ ಆಚರಿಸುತ್ತಾರೆ. ಅದೇ ರೀತಿ ಮಾಂಸಾಹಾರ, ಮದ್ಯ ಹಾಗೂ ಕೆಲವೊಂದು ಖಾರದ ವಸ್ತುಗಳನ್ನು ತಿನ್ನುವುದಿಲ್ಲ ಎಂದು ಮೇಯರ್ ಮುಕೇಶ್ ತಿಳಿಸಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ಜನರು ತಮ್ಮ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಕೆ ಮಾಡುವುದಿಲ್ಲ. ಹೀಗಾಗಿ ನವರಾತ್ರಿ ವೇಳೆ ದೇವಾಲಯದ ಸಮೀಪ, ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಮಾಂಸ ಮಾರಾಟ ಮಾಡಿದರೆ ಜನರಿಗೆ ತೊಂದರೆಯಾಗುತ್ತದೆ ಎಂದು ಮೇಯರ್ ಪತ್ರದಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ.