ಥಾಣೆ, ಮಾ. 16: ನವೋದಯ ಕನ್ನಡ ಸೇವಾ ಸಂಘ ಥಾಣೆ ಇವರ ಸಂಚಾಲಕತ್ವದಲ್ಲಿರುವ ನವೋದಯ ಇಂಗ್ಲಿಷ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ವಾರ್ಷಿಕ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಮಾ. 1ರಂದು ಜೂನಿಯರ್ ಕಾಲೇಜಿನ ಸಭಾಗೃಹದಲ್ಲಿ ನಡೆಯಿತು.
ನವೋದಯ ಕನ್ನಡ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವು ಪ್ರಾರ್ಥನೆ ಹಾಗೂ ಸ್ವಾಗತ ಭಾಷಣದೊಂದಿಗೆ ಪ್ರಾರಂಭಗೊಂಡಿತು. ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಕನ್ನಡ ವಿದ್ಯಾರ್ಜನೆಯನ್ನು ಮಾಡಿ, ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಹಾದಿಯನ್ನು ಶಾಲಾ ಶಿಕ್ಷಕಿ ಶ್ರುತಿ ಎನ್. ಇವರು ಪ್ರಸ್ತುತಪಡಿಸಿದರು. ಪಾಲಕ-ಪೋಷಕರ ಸಮ್ಮುಖದಲ್ಲಿ ತೇರ್ಗಡೆ ಹೊಂದಿದ ಮಕ್ಕಳಿಗೆ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಲಾಯಿತು.
ಬಳಿಕ ವಿವಿಧ ಪಠ್ಯೇತರ ಸ್ಪರ್ಧೆ – ಕಥೆ ಹೇಳುವ ಸ್ಪರ್ಧೆ, ಶುದ್ಧ ಬರಹ ಲೇಖನ ಸ್ಪರ್ಧೆ, ಸಂಗೀತ ಸ್ಪರ್ಧೆ, ಭಾಷಣ ಸ್ಪರ್ಧೆ ಇತ್ಯಾದಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ 2018-2019ರ ಶೈಕ್ಷಣಿಕ ವರ್ಷದ ಕನ್ನಡ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಐದು ವರ್ಷಗಳಿಂದ ಕನ್ನಡ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ, ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದು ಅಲ್ಲದೆ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಬಹುಮಾನ ಗಿಟ್ಟಿಸಿಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳೆಂದು ಗುರುತಿಸಲ್ಪಟ್ಟ ಇಬ್ಬರು ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ವಿದ್ಯಾರ್ಥಿನಿ ಪುರಸ್ಕಾರವನ್ನು ಕು| ಕಶ್ವಿ ವೈ. ಶೆಟ್ಟಿ ಹಾಗೂ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರವನ್ನು ಅನೂಪ್ ಹೆಗ್ಡೆ ಅವರಿಗೆ ಪ್ರದಾನಿಸಿ ಗೌರವಿಸಲಾಯಿತು.
ಪ್ರಾಥಮಿಕ ವಿಭಾಗದ ಉಪ ಮುಖ್ಯ ಶಿಕ್ಷಕಿ ಕುಸುಮಾ ಸಾಲ್ಯಾನ್ ಇವರು ಮಾತನಾಡಿ, ನಮ್ಮ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಕಲಿಯುವುದರ ಜೊತೆಗೆ ಕನ್ನಡವನ್ನು ಹೆಚ್ಚುವರಿ ವಿಷಯವನ್ನಾಗಿ ಕಲಿತು ಉತ್ತಮ ಗುಣಮಟ್ಟದ ಬರವಣಿಗೆ ಮತ್ತು ಬಹಳ ಸ್ಪಷ್ಟವಾದ ರೀತಿಯಲ್ಲಿ ಕನ್ನಡವನ್ನು ಓದುತ್ತಾರೆ. ಮೊತ್ತ ಮೊದಲಿಗೆ ನಮ್ಮ ಶಾಲೆ ಆಂಗ್ಲ ಮಾಧ್ಯಮ ಶಾಲೆಯಾಗಿದ್ದರೂ ತುಳು- ಕನ್ನಡಿಗರಿಗೆ ಕನ್ನಡ ಕಲಿಸುವ ಉದ್ದೇಶದಿಂದ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಸಂಘವು ಧರ್ಮಾರ್ಥವಾಗಿ ಕನ್ನಡ ತರಗತಿಯನ್ನು ನಡೆಸುತ್ತಿರುವುದು ಶ್ಲಾಘನೀಯ. ಕನ್ನಡ ತರಗತಿಗೆ ಅನುವು ಮಾಡಿಕೊಟ್ಟ ನಮ್ಮ ನವೋದಯ ಕನ್ನಡ ಸೇವಾ ಸಂಘಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದರ ಜತೆಗೆ ಸತತ ಎರಡು ವರ್ಷಗಳಿಂದ ನಮ್ಮ ಕನ್ನಡ ವಿದ್ಯಾರ್ಥಿಗಳು ಕನ್ನಡ ಅಂತರ್ ಶಾಲಾ ಸ್ಪರ್ಧೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಪ್ರಶಸ್ತಿಯೊಂದಿಗೆ ಚಲಿತ ಫಲಕವನ್ನು ತಮ್ಮದಾಗಿಸಿಕೊಂಡು ನಮ್ಮ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಿಗಿಂತ ತಾವೇನೂ ಕನ್ನಡದಲ್ಲಿ ಕಡಿಮೆ ಇಲ್ಲ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಅಜಿತಾ ಪ್ರದೀಪ್ ಕುಮಾರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವಿವಿಧ ಸ್ಪರ್ಧೆ ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ತಮ್ಮ ಪ್ರೋತ್ಸಾಹವನ್ನು ನೀಡಬೇಕಾಗಿ ಸಲಹೆ ನೀಡಿ ಶುಭ ಹಾರೈಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಅನುರಾಧ ಅರ್ಜುನ್ ವಾಡ್ಕರ್ ಮಾತನಾಡಿ, ಕನ್ನಡ ಕಲಿತು, ಕನ್ನಡಕ್ಕೆ ಗೌರವ ಕೊಟ್ಟು ಮಾತೃಭಾಷೆಯಾದಕನ್ನಡದ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿ ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಸಂಘದ ಅಧ್ಯಕ್ಷ ಜಯ ಕೆ. ಶೆಟ್ಟಿ ಇವರು ಮಾತನಾಡಿ, ನಮ್ಮ ಶಾಲೆಯಲ್ಲಿ ಕನ್ನಡಾಭ್ಯಾಸವನ್ನು ಮಾಡುವ ಮಕ್ಕಳ ಪ್ರತಿಭೆಗಳನ್ನು ನೋಡಿದಾಗ ನಮ್ಮ ಕಾರ್ಯಕಾರಿ ಸಮಿತಿಯ ಪ್ರಯತ್ನ ಸರಿಯಾದ ದಾರಿಯತ್ತ ಸಾಗುತ್ತಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ. ಮಕ್ಕಳು ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಮನೆಯಲ್ಲಿ ಕುಟುಂಬದ ಸದಸ್ಯರಿಂದ ಹಾಗೂ ಶಾಲೆಯ ಶಿಕ್ಷಕರಿಂದ ಕಲಿಯುತ್ತಾರೆ. ಮನುಷ್ಯನ ಶ್ರೇಷ್ಠತೆಯನ್ನು ಅಳೆಯುವುದು ಅವನ ಉಡುಗೆ-ತೊಡುಗೆಯಿಂದಲ್ಲ. ಅವನ ನಡತೆ ಮತ್ತು ಕೆಲಸದಿಂದ. ಇಂತಹ ಕಲಿಕೆಗೆ ಪಾಲಕರ ಪ್ರೋತ್ಸಾಹ ಸದಾ ಇರಬೇಕು ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದ್ಯಾರ್ಥಿಗಳಿಂದ ತಾಯಿಯೇ ದೇವರು -ಅಮ್ಮನ ಮಹತ್ವವನ್ನು ಸಾರುವ ಕಿರು ಪ್ರಹಸನವನ್ನುಪ್ರಸ್ತುತ ಪಡಿಸಲಾಯಿತು. ಸಮೂಹ ನೃತ್ಯ, ಸಮೂಹ ಗೀತೆ, ಭಾವ ಗೀತೆ, ಭಾಷಣ, ಕಥೆ ಇನ್ನಿತರ ಕಾರ್ಯ ಕ್ರಮಗಳು ನಡೆದವು. ಸಂಘದ ಅಧ್ಯಕ್ಷ ಜಯ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ದಯಾನಂದ್ ಎಸ್. ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ಸುನಿಲ್ ಎಸ್. ಶೆಟ್ಟಿ, ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಮುಖ್ಯೋಪಾಧ್ಯಾಯಿನಿಯರು, ಶಿಕ್ಷಕ ವೃಂದ, ಶಿಕ್ಷಕೇತರ ಸಿಬಂದಿ ಹಾಗೂ ಪಾಲಕ-ಪೋಷಕರು ಉಪಸ್ಥಿತರಿದ್ದರು.