Advertisement

ರಾಜ್ಯದಲ್ಲಿ ಫುಡ್ ಪಾರ್ಕ್ ಗಳ‌ ಸಂಖ್ಯೆ ಹೆಚ್ಚಳಕ್ಕೆ ಕ್ರಮ: ಬಿ.ಸಿ.ಪಾಟೀಲ್

04:22 PM Jul 03, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಸದ್ಯ ನಾಲ್ಕು ಫುಡ್ ಪಾರ್ಕ್ ಗಳಿದ್ದು, ಅವುಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

Advertisement

ಫುಡ್ ಪಾರ್ಕ್ ಗಳ ಅಭಿವೃದ್ಧಿ ಹಾಗೂ ಉದ್ದೇಶಗಳ ಈಡೇರಿಕೆಗೆ ಸರ್ಕಾರ ಫುಡ್ ಪಾರ್ಕ್ ಗಳ ಹಿಂದೆ ಶಕ್ತಿಯಾಗಿ ಬೆಂಬಲಿಸಲಿದೆ ಎಂದು ತಿಳಿಸಿದ್ದಾರೆ.

ಫುಡ್ ಪಾರ್ಕ್ ಗಳ ಪುನಶ್ಚೇತನ ಸಂಬಂಧ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ‘ಫುಡ್ ಕರ್ನಾಟಕ ಲಿಮಿಟೆಡ್’ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ರಾಜ್ಯದ ನಾಲ್ಕು ಫುಡ್ ಪಾರ್ಕ್ ಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಚಿವರು ಮಾತನಾಡಿದರು.

ಕೇಂದ್ರದ ಆತ್ಮನಿರ್ಭರ್ ಯೋಜನೆಯಲ್ಲಿ “ಫುಡ್ ಪಾರ್ಕ್ ಗೆ 4 ಸಾವಿರ ಕೋಟಿ ರೂ.ಅನುದಾನ ಒದಗಿಸಲಾಗಿದೆ. ಅನುದಾನದ ಉದ್ದೇಶ ಸಫಲವಾಗಬೇಕು. ಲಾಕ್ ಡೌನ್ ಆದ ಸಂದರ್ಭದಲ್ಲಿ ರೈತರ ಆರ್ಥಿಕ ಪರಿಸ್ಥಿತಿ ನಿಭಾಯಿಸಲು “ಆಹಾರ ಉತ್ಪಾದನಾ ಘಟಕಗಳು ಸಹಾಯಕವಾಗಲಿದೆ ಎಂಬುದನ್ನು ಗಮನಿಸಿ ರಾಜ್ಯದಲ್ಲಿನ ಫುಡ್ ಪಾರ್ಕ್ ಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು ಎಂದು ಹೇಳಿದರು.

ಈ ನಾಲ್ಕು ಫುಡ್ ಪಾರ್ಕ್ ಗಳ ಅಭಿವೃದ್ಧಿಯನ್ನು ಕಂಡು ರಾಜ್ಯದಲ್ಲಿ ಇನ್ನಷ್ಟು ಫುಡ್ ಪಾರ್ಕ್ ಗಳ ಸ್ಥಾಪನೆಗೆ ಜನರು ಮುಂದಾಗಬೇಕು. ಸರ್ಕಾರ ಸದಾ ಫುಡ್ ಪಾರ್ಕ್ ಗಳ ಹಿಂದೆ ಬೆನ್ನೆಲುಬಾಗಿ ನಿಲ್ಲಲಿದೆ. ಫುಡ್ ಪಾರ್ಕ್ ಗಳನ್ನು ಆರಂಭಿಸಿದ ಉದ್ದೇಶ ಈಡೇರಲೇಬೇಕು. ಹಣ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಫುಡ್ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸದೇ ಇರುವುದು ಸರಿಯಲ್ಲ. ಕಾರಣಗಳು ಸರಿಯಾಗಿರಬೇಕು. ಸಮರ್ಪಕವಾಗಿ ಕಾರ್ಯನಿರ್ವಹಿಸದ ಗುರಿಸಾಧಿಸದ ಫುಡ್ ಪಾರ್ಕ್ ಗಳ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

ಫುಡ್ ಪಾರ್ಕ್ ಗಳ ನಿರ್ಮಾಣ ಉದ್ದೇಶಕ್ಕಾಗಿ ಕಡಿಮೆ ವೆಚ್ಚದಲ್ಲಿ ಭೂಮಿ ಮಂಜೂರು ಮಾಡಿದೆ. ಸರ್ಕಾರದಿಂದ ಮಂಜುರಾದ ಭೂಮಿ ಫುಡ್ ಪಾರ್ಕ್ಗಳ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ರಾಜ್ಯದಲ್ಲಿರುವ 1.30 ಕೋಟಿ ಜನಸಂಖ್ಯೆಯಲ್ಲಿ ನಾಲ್ಕು ಮಂದಿ ಮಾತ್ರ ಫುಡ್ ಪಾರ್ಕ್ ನಿರ್ಮಿಸಿದ್ದನ್ನು ನೋಡಿದರೆ ಫುಡ್ ಪಾರ್ಕ್ ನಿರ್ಮಿಸಿದ ವ್ಯಕ್ತಿಗಳು ವಿಶೇಷ ಎಂಬುದು ಹೆಮ್ಮೆಯ ವಿಷಯವೂ ಹೌದು. ಫುಡ್ ಪಾರ್ಕ್ ಗಳ ಅಭಿವೃದ್ಧಿಗೆ ಅಗತ್ಯವಾದ ಸೌಲಭ್ಯಗಳನ್ನು ಸರ್ಕಾರ ನೀಡಲಿದೆ. ರಸ್ತೆಯಿಲ್ಲ ಎನ್ನುವುದೆಲ್ಲ ಕಾರಣಗಳಲ್ಲ. ರೈತರಿಗೆ ಅನುಕೂಲ ಕಲ್ಪಿಸಲು ಮತ್ತು ರೈತರ ಉತ್ಪನ್ನಗಳ ಸದುಪಯೋಗ ಹಾಗೂ ಕೃಷಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ನವೋದ್ಯಮಕ್ಕೆ ಚೈತನ್ಯ ನೀಡುವ ನಿಟ್ಟಿನಲ್ಲಿ “ಅಗ್ರಿಸ್ಟಾರ್ಟಪ್ ಗೆ  ಇನ್ನೂ ಕೆಲವೇ ದಿನಗಳಲ್ಲಿ ಚಾಲನೆಯನ್ನು ನೀಡಲಾಗುತ್ತಿದೆ. ಅಗ್ರಿ ಸ್ಟಾರ್ಟಪ್ ಮೂಲಕ ಫುಡ್ ಪಾರ್ಕ್ ಗಳಿಗೂ ಅನುಕೂಲ ಕಲ್ಪಿಸಬಹುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next