ದೇವದುರ್ಗ: ಪ್ರಕೃತಿ ವಿಕೋಪದಿಂದ ಪ್ರವಾಹ ಪೀಡಿತ ನೆರೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದರು.
ಪಟ್ಟಣದ ಬಾಲಕಿಯರ ಪ್ರೌಢಶಾಲೆಯ ನೆರೆ ಸಂತ್ರಸ್ತರ ಗಂಜಿ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಬಳಿಕ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರಕಾರ ಈಗಾಗಲೇ 125 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಸಿಎಂ ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. 3 ಸಾವಿರ ಕೋಟಿ ನೀಡುವ ಭರವಸೆ ನೀಡಿದ್ದು, ನಷ್ಟದ ಸಮೀಕ್ಷೆ ನಂತರ ಅನುದಾನ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದರು.
ಜಿಲ್ಲಾಧಿಕಾರಿ ಖಾತೆಯಲ್ಲಿ 7.5 ಕೋಟಿ ರೂ. ಅನುದಾನ ಇರುವುದರಿಂದ ರಾಜ್ಯ ಸರ್ಕಾರ ಜಿಲ್ಲೆಗೆ ಅನುದಾನ ನೀಡುವಲ್ಲಿ ವಿಳಂಬ ಮಾಡಿದೆ ಎಂದು ಸ್ಪಷ್ಟಪಡಿಸಿದ ಅವರು, ಬೆಳೆ ಹಾನಿ ಸಮೀಕ್ಷೆಗೆ ಶಾಸಕರ ಜತೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಜಾನುವಾರಗಳಿಗೆ ಮೇವಿನ ಅಭಾವ ಉಂಟಾಗದಂತೆ ಜಿಲ್ಲಾ ಮತ್ತು ತಾಲೂಕು ಆಡಳಿತ ಮುಂಜಾಗ್ರತೆ ವಹಿಸಿದೆ. ನುಡುಗಡ್ಡೆಗಳ ಜನರನ್ನು ಶಾಶ್ವತ ಸ್ಥಳಾಂತರಕ್ಕೆ ಮುಖ್ಯಮಂತ್ರಿಗಳ ಜತೆ ಚರ್ಚಿಸುವೆ ಎಂದರು.
ಹೈಕ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ಈಗಾಗಲೇ ನೆರೆ ಸ್ಥಿತಿಗತಿ ಪರಿಶೀಲಿಸಲಾಗಿದೆ. ಸಾವಿರಾರು ಎಕರೆ ಬೆಳೆ ಹಾನಿ ಆಗಿದೆ. ಸಮರ್ಪಕ ಬೆಳೆ ಹಾನಿ ಸಮೀಕ್ಷೆ ನಡೆಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಗಂಗಾವತಿ ಸಮೀಪ ಮೀರಾಪುರ ಗ್ರಾಮದಲ್ಲಿ 300 ಜನರು ಸಿಲುಕಿಕೊಂಡಿದ್ದಾರೆ. ಬೋಟ್ ಮೂಲಕ 5 ಜನರನ್ನು ರಕ್ಷಣೆ ಮಾಡುವ ಮೂರು ಜನರು ನದಿಯಲ್ಲಿ ಮುಳುಗಿದ್ದಾರೆ ಎಂಬ ಮಾಹಿತಿ ಬಂದಿದೆ. 2ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದು, ಯಾವುದೇ ಅವಘಡ ಜರುಗಿಲ್ಲ ಎಂದು ಹೇಳಿದರು.
ಶಾಸಕ ಕೆ.ಶಿವನಗೌಡ ನಾಯಕ, ತಾಪಂ ಅಧ್ಯಕ್ಷ ಹನುಮಂತ ಕಟ್ಟಿಮನಿ, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ ಪಾಟೀಲ, ತಹಶೀಲ್ದಾರ್ ಮಂಜುನಾಥ, ಸಿಪಿಐ ಎನ್.ಲೋಕೇಶ, ಸಿಪಿಐ ಎಲ್.ಬಿ.ಅಗ್ನಿ ಇತರರು ಇದ್ದರು.