ಜಮಖಂಡಿ: ಲಾಕ್‌ಡೌನ್ ಮುಕ್ತಾಯಗೊಳ್ಳುವವರೆಗೆ ನಿರ್ಗತಿಕರು, ಬಡವರು, ಕೋವಿಡ್ 19 ವಾರಿಯರ್ಸ್ ಗಳಿಗೆ ತಿಂಡಿ, ಊಟ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ನಗರಸಭೆ ಸದಸ್ಯ ರಾಜು ಪಿಸಾಳ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮಾ. 22ರಿಂದ ನಗರದ ನಿರ್ಗತಿಕರು, ಕೋವಿಡ್ 19 ವಾರಿಯರ್ಸ್, ಪೊಲೀಸರು, ಆಸ್ಪತ್ರೆ ಸಿಬ್ಬಂದಿ, ರೋಗಿಗಳು, ಆಶಾ ಕಾರ್ಯಕರ್ತೆಯರಿಗೆ ಊಟ ನೀಡಲಾಗುತ್ತಿದೆ. ಪ್ರತಿನಿತ್ಯ 600ಕ್ಕೂ ಹೆಚ್ಚು ಜನರಿಗೆ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ 1500ಕ್ಕೂ ಹೆಚ್ಚು ಬಡವರಿಗೆ ಆಹಾರ ಪದಾರ್ಥಗಳ ಕಿಟ್, 2500 ಸ್ಯಾನಿಟೈಜರ್, ಮಾಸ್ಕ್ಗಳನ್ನು ವಿತರಿಸಲಾಗಿದೆ ಎಂದರು.
ಶಾಸಕ ಆನಂದ ನ್ಯಾಮಗೌಡ ಮಾರ್ಗದರ್ಶನದಲ್ಲಿ ಅಂದಾಜು 60 ಸ್ವಯಂ ಸೇವಕರು ಸೇರಿಕೊಂಡು ಆಹಾರ ತಯಾರಿಸುತ್ತಿದ್ದಾರೆ. ಅರ್ಬನ್ ಬ್ಯಾಂಕ್, ಎಸ್‌ಎಸ್‌ವೈ, ಬ್ರಾಹ್ಮಣ ಸಮಾಜ ಹಾಗೂ ಅಶೋಕ ಗಾಂವಿ ಕುಟುಂಬದ ಸದಸ್ಯರು ಎರಡು ದಿನದ ಊಟ-ಉಪಹಾರ ಸೇವೆ ಮಾಡಿದ್ದು, ಕೊರೊನಾ ವೈರಸ್ ಅಂಟಿಕೊಳ್ಳದಂತೆ ಕಷಾಯಿ, ಬಿಸಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದರು.
ಕೋವಿಡ್-19 ಹರಡುತ್ತಿದ್ದು, ಅದನ್ನು ಓಡಿಸಲು ಪ್ರತಿಯೊಬ್ಬರು ಮನೆಯಲ್ಲಿದ್ದುಕೊಂಡು, ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಪ್ರತಿಯೊಬ್ಬರು ಸಾಮಾಜಿಕ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮೇ 3ರ ನಂತರ ಲಾಕ್‌ಡೌನ್ ಮುಂದುವರಿದಲ್ಲಿ ನಗರದ ರೋಗಿಗಳಿಗೆ ಉಚಿತ ಔಷಧ, ಮಾತ್ರೆ ವಿತರಣೆ ಮಾಡುವ ಚಿಂತನೆ ನಡೆಸಲಾಗುತ್ತಿದೆ. ಮೂಕಪ್ರಾಣಿಗಳಾದ ನಾಯಿ, ಬೆಕ್ಕು, ಜಾನುವಾರುಗಳಿಗೆ ಆಹಾರ ವಿತರಿಸಲಾಗುತ್ತಿದೆ. ಅನ್ನದಾನ ಕಾರ್ಯದಲ್ಲಿ ರುಕ್ಮಿಣಿ ಪಿಸಾಳ, ಕಿರಣ ಪಿಸಾಳ, ಶುಭಂ, ಸೌರಭ, ಗಿರೀಶ, ಧನಂಜಯ ಪವಾರ, ರಾಜೇಶ ಜೈನ್, ವಸಂತ ಶಿಂಧೆ, ಪ್ರದೀಪ ಡಾಗಾ, ವಿಠಲ ಶಿಂಧೆ, ಕೈಲಾಸ ಓಸ್ವಾಲ ಅನೇಕರು ಕೈಜೋಡಿಸಿದ್ದಾರೆ. ಉದ್ಯಮಿ ಜಗದೀಶ ಗುಡಗುಂಟಿಮಠ ಅನ್ನದಾನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.