ಮೆಲ್ಬರ್ನ್: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ಸಾಂಪ್ರದಾಯಿಕ “ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯವನ್ನು ಆಯೋಜಿಸಲು ಸರ್ವರೀತಿಯಲ್ಲೂ ಸಜ್ಜಾಗಿದೆ. ಭಾರತ-ಆಸ್ಟ್ರೇಲಿಯ ನಡುವಿನ 3ನೇ ಟೆಸ್ಟ್ ಬುಧವಾರದಿಂದ ಇಲ್ಲಿ ಆರಂಭವಾಗಲಿದ್ದು, ಇತ್ತಂಡಗಳನ್ನು “ಸ್ಪೋರ್ಟೀವ್ ಟ್ರ್ಯಾಕ್’ ಎದುರಾಗಲಿದೆ ಎಂದು ಮೈದಾನದ ಕ್ಯುರೇಟರ್ ಮ್ಯಾಥ್ಯೂ ಪೇಜ್ ಹೇಳಿದ್ದಾರೆ.
ಸಾಮಾನ್ಯವಾಗಿ ಆಸ್ಟ್ರೇಲಿಯದ ಪಿಚ್‌ಗಳೆಲ್ಲ ಬೌನ್ಸಿ ಹಾಗೂ ವೇಗದಿಂದ ಕೂಡಿರುತ್ತದೆ. ಆದರೆ ಮೆಲ್ಬರ್ನ್ ಪಿಚ್ ಇದಕ್ಕೆ ಅಪವಾದ. ಇದು ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಕಳೆದ ಆ್ಯಶಸ್ ಸರಣಿಯ ವೇಳೆ ಮೆಲ್ಬರ್ನ್ ಅಂಗಳದಲ್ಲಿ ಧಾರಾಳ ರನ್ ಹರಿದು ಬಂದಿತ್ತು. ಬಳಿಕ ಇದು ಐಸಿಸಿಯಿಂದ “ಕಳಪೆ ಪಿಚ್’ ಎಂಬ ಟೀಕೆಗೂ ಗುರಿಯಾಗಿತ್ತು.
ಅಂದಿನಿಂದ ಮೆಲ್ಬರ್ನ್ ಮೈದಾನದ ಕ್ಯುರೇಟರ್ ಎಚ್ಚೆತ್ತುಕೊಂಡಿದ್ದು, ಈ ಬಾರಿ ಬ್ಯಾಟಿಂಗ್ ಹಾಗೂ ಬೌಲರ್‌ಗಳಿಬ್ಬರಿಗೂ ನೆರವಾಗುವ ಸ್ಪರ್ಧಾತ್ಮಕ ಪಿಚ್ ರೂಪುಗೊಳ್ಳಲಿದೆ ಎಂದಿದ್ದಾರೆ.
ಸ್ಪರ್ಧಾತ್ಮಕ ಪಿಚ್
“ಕಳೆದ ಆ್ಯಶಸ್ ಸರಣಿಯ ಟೆಸ್ಟ್ ವೇಳೆ ರನ್ ಹರಿದು ಬಂದದ್ದು ನಿಜ. ಆದರೆ ಅಂತಿಮ ದಿನದಾಟಕ್ಕೆ ಮಳೆ ಎದುರಾದುದರಿಂದ ಪಂದ್ಯ ಡ್ರಾಗೊಳ್ಳಬೇಕಾಯಿತು. ಈ ಬಾರಿ ಬ್ಯಾಟಿಂಗ್-ಬೌಲಿಂಗ್ ಎರಡಕ್ಕೂ ನೆರವಾಗುವ ರೀತಿಯಲ್ಲಿ ಪಿಚ್ ತಯಾರಾಗುತ್ತಿದೆ. ಪಂದ್ಯ ಹೆಚ್ಚು ಸ್ಪರ್ಧಾತ್ಮಕವಾಗಿರಲಿದೆ’ ಎಂದು ಮ್ಯಾಥ್ಯೂ ಪೇಜ್ ಹೇಳಿದರು.
ಕಳೆದ ವರ್ಷದ ಪಿಚ್ ರೇಟಿಂಗ್ ಕುರಿತು ಐಸಿಸಿ ನಕಾರಾತ್ಮಕ ಅನಿಸಿಕೆ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಪೇಜ್, “ಹಿಂದಿನ ವರ್ಷದ ಐಸಿಸಿ ಪಿಚ್ ರೇಟಿಂಗ್ ಹೇಗಿತ್ತು ಎಂಬ ಬಗ್ಗೆ ನಾನು ಚಿಂತಿಸುವುದಿಲ್ಲ. ಪ್ರತೀ ಸಲವೂ ನೀವು ಗರಿಷ್ಠ ಪ್ರಯತ್ನದೊಂದಿಗೆ ಅತ್ಯುತ್ತಮ ಸಾಮರ್ಥ್ಯಕ್ಕಾಗಿ ಶ್ರಮಪಡಲೇಬೇಕು. ಪ್ರತೀ ಸಲವೂ ಒತ್ತಡ ಇದ್ದೇ ಇರುತ್ತದೆ.’ ಎಂದರು.