Advertisement

ಪಾಲಿಕೆಯ ಘನತೆ-ಮಾನ-ಮರ್ಯಾದೆ ಮೂರಾಬಟ್ಟೆ..

12:41 PM Apr 04, 2017 | |

ಹುಬ್ಬಳ್ಳಿ: ಮಹಾಪೌರ-ಆಯುಕ್ತರು ಪರಸ್ಪರ ಆರೋಪ- ಪ್ರತ್ಯಾರೋಪ,  ಸವಾಲು, ಸಭಾತ್ಯಾಗ ನಂತರ ಆಡಳಿತ ಪಕ್ಷದ ಸದಸ್ಯರು ಮಹಾಪೌರ ಪೀಠದ ಹಿಂದೆ ಆಗಮಿಸಿ ಸಭೆ ಮುಂದೂಡುವಂತೆ ಒತ್ತಾಯ, ವಿಪಕ್ಷ ಸದಸ್ಯರೊಬ್ಬರಿಂದ ಬದ್ಮಾಶ್‌ಗಳು ಪದ ಬಳಕೆ, ವಿಪಕ್ಷ ನಾಯಕರಿಗೆ ಮಹಾಪೌರ ಸ್ಥಾನದಲ್ಲಿ ಕೂಡಲು ಆಹ್ವಾನ.. 

Advertisement

ಹೀಗೆ ಹಲವು ಅಧ್ವಾನಗಳೊಂದಿಗೆ ಪಾಲಿಕೆ ಘನತೆ, ಮಾನ-ಮಾರ್ಯದೆ ಮೂರಾಬಟ್ಟೆಗೆ ಸಾಮಾನ್ಯ ಸಭೆ ವೇದಿಕೆ-ಸಾಕ್ಷಿಯಾಯ್ತು. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ-ವಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ, ವಿಪಕ್ಷಗಳ ಸಭಾತ್ಯಾಗ ಸಾಮಾನ್ಯ ಆದರೆ, ಆಡಳಿತ ನಿರ್ವಹಣೆ ಜವಾಬ್ದಾರಿಯ ಮಹಾಪೌರ-ಆಯುಕ್ತರು ಸದನದಲ್ಲಿ ಬಹಿರಂಗವಾಗಿ ಆರೋಪ-ಸವಾಲು ಹಾಕುವುದು,

ಆಡಳಿತ ಪಕ್ಷದ ಸದಸ್ಯರೇ ಸಭಾತ್ಯಾಗ ಮಾಡುವುದು, ಪಾಲಿಕೆ ಆದಾಯ ವಿಷಯಕ್ಕೆ ಆಡಳಿತ ಪಕ್ಷದವರ ಮೂಗು ಹಿಡಿಯಬೇಕಾದ ವಿಪಕ್ಷದ ಸದಸ್ಯರು ಅಧಿಕಾರಿಗಳ ವಕ್ತಾರರಂತೆ ಬೆಂಬಲಕ್ಕೆ ನಿಲ್ಲುವಂತಹ ಕೆಟ್ಟ ಸಂಪ್ರದಾಯ ಗೋಚರಿಸುವಂತಾಯಿತು. ಸೋಮವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಆದಾಯ ಕುರಿತಾಗಿ ನಡೆದ ಚರ್ಚೆ ಹಲವು ತಿರುವುಗಳೊಂದಿಗೆ ಅಸಮಾನ್ಯ ಸ್ಥಿತಿಯಲ್ಲಿ ಸಭೆ ಮುಕ್ತಾಯಗೊಂಡಿತು. 

ಧಾರವಾಡದಲ್ಲಿನ ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಪೌರ-ಆಯುಕ್ತರು ಬಹಿರಂಗ ಆರೋಪ-ಪ್ರತ್ಯಾರೋಪಕ್ಕೆ ಮುಂದಾಗುವ ಲಕ ಸಭೆಯ ಘನತೆಗೆ ಕುಂದು ತರುವ ಕಾರ್ಯ ಮಾಡಿದರು. ಗೊಂದಲದ  ವಾತಾವರಣ ಸೃಷ್ಟಿಸಿದರು. 

ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಮಳಿಗೆಗಳವರಿಗೆ 15 ದಿನ ಕಾಲಾವಕಾಶ ಮಹಾಪೌರರು ನೀಡಿದ್ದು, ನನಗೂ ಫೋನ್‌ನಲ್ಲಿ ಈ ಬಗ್ಗೆ ತಿಳಿಸಿದ್ದಾರೆ ಎಂದುಆಯುಕ್ತರು ಹೇಳಿದ್ದು, ವಿವಾದದ ಬೆಂಕಿಗೆ ತುಪ್ಪ ಸುರಿದಂತಾಯಿತು. ಇದರಿಂದ ಕಾಂಗ್ರೆಸ್‌ ಸದಸ್ಯರು ಮಹಾಪೌರರ ಮೇಲೆ ಮುಗಿ ಬಿದ್ದು ನೀವೇ ಕಾಲಾವಕಾಶ ನೀಡುತ್ತೀರಿ ನಿಮ್ಮ ಪಕ್ಷದ ಸದಸ್ಯರು ಇದೇ ವಿಷಯವಾಗಿ ಸಭಾತ್ಯಾಗ ಮಾಡುತ್ತಾರೆ ಏನಿದರ್ಥ ಎಂದು ತರಾಟೆಗೆ ತೆಗೆದುಕೊಂಡರು. 

Advertisement

ಇದರಿಂದ ಕೊಂಚ ಗಲಿವಿಲಿಗೊಂಡ ಮಹಾಪೌರರು ಆಕ್ರೋಶಭರಿತರಾಗಿ 15 ದಿನ ತಡೆಗೆ ಒತ್ತಡ ತಂದ ದಾಖಲೆ ತೋರಿಸಲಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದರು. ಕೆಲವೇ ನಿಮಿಷಗಳಲ್ಲಿ ತಮ್ಮ ಹೇಳಿಕೆ ಬದಲಾಯಿಸಿದ ಆಯುಕ್ತರು ಮಹಾಪೌರರು ನನಗೆ ನೇರವಾಗಿ ಹೇಳಿಲ್ಲ. ನಮ್ಮ ಅಧಿಕಾರಿಗೆ ಹೇಳಿದ್ದು ಅವರು ನನಗೆ ಹೇಳಿದ್ದಾರೆಂದು ಹೇಳಿ ಗೊಂದಲ ಸೃಷ್ಟಿಸಿದರು. ಪಾಲಿಕೆಯ ಜವಾಬ್ದಾರಿ ಸ್ಥಾನದ ಇಬ್ಬರು ತಾವೇ ಖುದ್ದಾಗಿ ಪಾಲಿಕೆ ಮಾನ- ಮರ್ಯಾದೆಯ ಮೂರಾಬಟ್ಟೆಗೆ ಮುಂದಾದರು.  

ವಿಪಕ್ಷ ನಾಯಕರಿಗೆ ಆಹ್ವಾನ: ಬಿಜೆಪಿ ಸದಸ್ಯರು ಸಭಾತ್ಯಾಗದಿಂದ ಮಹಾಪೌರರು ಸಭೆ ಕೆಲಕಾಲ ಮುಂದೂಡಿದಾಗ, ಕಾಂಗ್ರೆಸ್‌ನ ಕೆಲ ಸದಸ್ಯರು ನಡೆದುಕೊಂಡ ರೀತಿ ಎಂಥವರಿಗೂ ನಾಚಿಕೆ ತರಿಸುವಂತಿತ್ತು. ಮಹಾಪೌರರು ಇಲ್ಲದಿದ್ದರೇನಂತೆ ನೀವು ಮಹಾಪೌರರ ಆಸನಕ್ಕೆ ಬನ್ನಿ ನಾವೇ ಸಭೆ ನಡೆಸೋಣ ಎಂದು ವಿಪಕ್ಷ ನಾಯಕ ಸುಭಾಸ ಶಿಂಧೆ ಅವರನ್ನು ಆಹ್ವಾನಿಸುವ ಮೂಲಕ ಎಲ್‌ ಕೆಜಿ, ಯುಕೆಜಿ ಮಕ್ಕಳಿಗಿಂತಲೂ ಕಡೆ ರೀತಿಯಲ್ಲಿ ವರ್ತಿಸಿದರು.

ಮಾತಿನ ಭರಾಟೆಯಲ್ಲಿ ಕಾಂಗ್ರೆಸ್‌ ಸದಸ್ಯರೊಬ್ಬರು ಆಡಳಿತ ನಡೆಸಲು ಬರುವುದಿಲ್ಲ ಬದ್ಮಾಶ್‌ ಗಳು ಸಭಾತ್ಯಾಗ ಮಾಡುತ್ತಾರೆ ಎಂದು ಹೇಳಿದ್ದು, ಮಹಾನಗರ ಪಾಲಿಕೆ ಸಭೆ ಎತ್ತಸಾಗುತ್ತಿದೆ ಎಂಬ ಪ್ರಶ್ನೆ ಹುಟ್ಟು ಹಾಕುವಂತೆ ಮಾಡಿತು. 

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next