Advertisement

ಬಿಎಸ್‌ವೈ ಹಾಸಿಗೆ ಹಿಡಿದಿದ್ದರಾ? ಎಂ.ಬಿ.ಪಾಟೀಲ್‌

09:59 PM Feb 28, 2023 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ, ಅವರ ಬದಲಿಗೆ ಬೇರೆಯವರಿಗೆ ಅಧಿಕಾರ ನೀಡಲಾಯಿತು. ಆದರೆ, ಬಿ.ಎಸ್‌.ಯಡಿಯೂರಪ್ಪ ಅವರು ಹಾಸಿಗೆ ಹಿಡಿದಿದ್ದರಾ? ಅವರನ್ನು ಏಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು? ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಕೇಳಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ರಾಷ್ಟ್ರೀಯ ನಾಯಕ ಎಲ್‌.ಕೆ.ಅಡ್ವಾಣಿ ಅವರು ನಮಸ್ಕಾರ ಮಾಡಿದಾಗ, ಅವರ ಮುಖವನ್ನೂ ನರೇಂದ್ರ ಮೋದಿ ನೋಡಲಿಲ್ಲ. ಅದೇ ಪರಿಸ್ಥಿತಿ ಬಿಜೆಪಿಯಲ್ಲಿ ಈಗ ಯಡಿಯೂರಪ್ಪ ಅವರಿಗೂ ಬಂದಿದೆ. ಆರೋಗ್ಯವಾಗಿದ್ದರೂ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು ಎಂದು ಹೇಳಿದರು.

ಎಸ್‌. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ಖರ್ಗೆ ಅವರಿಗೆ ಕಾಂಗ್ರೆಸ್‌ ಅಪಮಾನ ಮಾಡಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿ, “ಇದು ಮೋದಿ ಅವರ ಚೀಪ್‌ ಗಿಮಿಕ್‌. ಎಐಸಿಸಿ ಅಧಿವೇಶನದಲ್ಲಿ ಸೋನಿಯಾ ಗಾಂಧಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಭದ್ರತಾ ಸಿಬ್ಬಂದಿ ಕೊಡೆ ಹಿಡಿದಿದ್ದರು. ಇದನ್ನು ಮುಂದಿಟ್ಟುಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಯಾಕೆ ಕೊಡೆ ಹಿಡಿದಿಲ್ಲ ಎಂದು ಹೇಳುವುದು ಅತ್ಯಂತ ಚೀಪ್‌ ಗಿಮಿಕ್‌ ಆಗಿದೆ. ಇವರು ಆಡ್ವಾಣಿ ಅವರು ನಮಸ್ಕಾರ ಮಾಡಿದಾಗ ಎಷ್ಟು ಗೌರವ ನೀಡಿದಿರಿ? ಇನ್ನು ವೀರೇಂದ್ರ ಪಾಟೀಲ್‌ ಚಿಕ್ಕಮಗಳೂರಿನಲ್ಲಿ ಸೋತಾಗ ಅವರನ್ನು ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಿ ಅಧಿಕಾರ ನೀಡಿದ್ದೆವು ಎಂದು ತೀಕ್ಷ್ಣವಾಗಿ ಹೇಳಿದರು.

ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಇರುವಷ್ಟು ಚುನಾವಣಾ ಕಾಳಜಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಇಲ್ಲವೇ ಎಂದು ಕೇಳಿದಾಗ, ಅವರಿಬ್ಬರೂ ರಾಜ್ಯದಲ್ಲಿ ಪ್ರವಾಹ ಬಂದಾಗ ಬರಲಿಲ್ಲ. ಪ್ರಧಾನಿ ವೈಮಾನಿಕ ಸಮೀಕ್ಷೆ ಮಾಡಲಿಲ್ಲ. ನಮ್ಮವರು ಚುನಾವಣೆ ಘೋಷಣೆಯಾದ ಬಳಿಕ ಬರುತ್ತಾರೆ. ಇವರ ದಿವಾಳಿತನಕ್ಕೆ ಇದೇ ಸಾಕ್ಷಿ. ಹುಬ್ಬಳ್ಳಿಯಲ್ಲಿ ನಡೆದ ರೋಡ್‌ ಶೋಗೂ ರಾಯಚೂರಿನಲ್ಲಿ ನಡೆದ ರಾಹುಲ್‌ ಗಾಂಧಿ ಅವರ ಭಾರತ ಜೋಡೋ ಯಾತ್ರೆಗೂ ಸೇರಿದ್ದ ಜನರನ್ನು ನೋಡಿ. ನಿಮಗೆ ವ್ಯತ್ಯಾಸ ಗೊತ್ತಾಗುತ್ತದೆ’ ಎಂದರು.

ಚುನಾವಣೆ ಸಮಯದಲ್ಲಿ ಇಡಿ, ಐಟಿ ದಾಳಿ ನಡೆಯುವುದೇ ಎಂಬ ಪ್ರಶ್ನೆಗೆ, ಅದು ಬಿಜೆಪಿಯ ತಂತ್ರಗಾರಿಕೆಯ ಭಾಗವಾಗಿದೆ. ಈ ಸಂಸ್ಥೆಗಳು ಬಿಜೆಪಿಯ ಘಟಕಗಳೇ ಆಗಿವೆ. ಚುನಾವಣೆ ಸಮಯದಲ್ಲಿ ಅದು ನಡೆಯುತ್ತದೆ. ಎಐಸಿಸಿ ಅಧಿವೇಶನಕ್ಕೆ ತೊಂದರೆ ಮಾಡಲು ರಾಯು³ರದಲ್ಲಿ ದಾಳಿ ಮಾಡಿದ್ದರು. ಎಂದಾದರೂ ಈ ಮಟ್ಟಕ್ಕೆ ರಾಜಕೀಯ ಇಳಿದಿತ್ತಾ ಎಂದು ಕೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next