Advertisement

karnataka polls 2023: ಭಾವನೆ ಕೆರಳಿಸುವ ಸಂಘಟನೆ ನಿಷೇಧ : ಎಂ.ಬಿ.ಪಾಟೀಲ

07:25 PM May 03, 2023 | Shreeram Nayak |

ವಿಜಯಪುರ : ಕೋಮು ಭಾವನೆ ಕೆರಳಿಸುವ ಪಿಎಫ್‍ಐ, ಭಜರಂಗದಳ ಮಾತ್ರವಲ್ಲ ಹಿಂದೂ, ಮುಸ್ಲೀಂ, ಕ್ರಿಶ್ಚಿಯನ್ ಸೇರಿದಂತೆ ಧರ್ಮದ, ಯಾವುದೇ ಸಂಘಟನೆ ಇದ್ದರೂ ನಿಷೇಧಿಸಲಾಗುತ್ತದೆ. ಜನರ ಮುಂದೆ ಹೋಗಲು ಏನೂ ವಿಷಯ ಇಲ್ಲದ ಪ್ರಧಾನಿ ಮೋದಿ ಅವರು ಭಜರಂಗದಳದ ವಿಷಯವನ್ನು ಪ್ರಸ್ತಾಪಿಸಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ತಿರುಗೇಟು ನೀಡಿದ್ದಾರೆ.

Advertisement

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಹಿಜಾಬ್, ಹಲಾಲ್ ಅಂತೆಲ್ಲ ಭಾವನೆ ಪ್ರಚೋದನಾತ್ಮಕ ವಿಚಾರಳಿಂದ ಇದೀಗ ಬಿಜೆಪಿ ನಾಯಕರಿಗೆ ಅಭಿವೃದ್ಧಿ ವಿಷಯ ಮಾಡಿದ್ದನ್ನು ಹೇಳಿಕೊಳ್ಳಲು ಏನೂ ಇಲ್ಲ. ಹೀಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೀಗ ಭಜರಂಗದಳ ನಿಷೇಧದ ಕುರಿತ ನಮ್ಮ ಪಕ್ಷದ ಪ್ರಣಾಳಿಕೆ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಲಿಂಗಾಯತ ದಾಳಕ್ಕೆ ಜಗದೀಶ ಶಟ್ಟರ, ಲಕ್ಷ್ಮಣ ಸವದಿ ಬಲಿಯಾಗಲಿದ್ದಾರೆ ಎಂದು ಅಪಪ್ರಚಾರ ನಡೆಸಿದ್ದಾರೆ. ವೀರೇಂದ್ರ ಪಾಟೀಲ ಅವರ ಸಂದರ್ಭವನ್ನು ಅನಗತ್ಯವಾಗಿ ಎಳೆದು ತರುತ್ತಿದ್ದಾರೆ. ಅವಾಸ್ತವ ಸಂಗತಿಗಳನ್ನು ಹೇಳುತ್ತಿದ್ದಾರೆ ಎಂದು ದೂರಿದರು.

ಲಿಂಗಾಯತ ನಾಯಕ ಯಡಿಯೂರಪ್ಪ ಅವರನ್ನು ಬಳಸಿಕೊಂಡು ಬಿಜೆಪಿ ನಾಯಕರು ಅನೈತಿಕ ಮಾರ್ಗದಲ್ಲಿ ಸರ್ಕಾರವನ್ನು ಅಧಿಕಾರಕ್ಕೆ ತಂದರೂ ಅವರನ್ನೇ ಅಧಿಕಾರದಿಂದ ಕೆಳಗೆ ಇಳಿಸಿದರು. ಜನಸಂಘದ ಕಾಲದಿಂದ ಬಿಜೆಪಿ ಕಟ್ಟಿದ ಆರು ಬಾರಿ ಗೆದ್ದಿದ್ದ ಜಗದೀಶ ಶಟ್ಟರ ಅವರಿಗೆ ಟಿಕೆಟ್ ನೀಡದೇ ಮೋಸ ಮಾಡಿದರು. ಇದೀಗ ಜಗದೀಶ ಶಟ್ಟರ, ಲಕ್ಷ್ಮಣ ಸವದಿ ಅವರ ವಿರುದ್ಧ ಲಿಂಗಾಯತ ನಾಯಕ ಯಡಿಯೂರಪ್ಪ ಅವರನ್ನೇ ಬಳಸಲಾಗುತ್ತಿದೆ. ಬಿಜೆಪಿ ಪಕ್ಷದಲ್ಲಿ ಲಿಂಗಾಯತರನ್ನು ಬಳಸಿ ಬಿಸಾಡುವುದೇ ಕೆಲಸ ಎಂದರು ಕುಟುಕಿದರು.

ಡಬಲ್ ಎಂಜಿನ್‍ನ ಎರಡೂ ಸರ್ಕಾರದ ವೈಫಲ್ಯದಿಂದ ರಾಜ್ಯದ ಜನ ಸಂಕಷ್ಟ್ಟ ಅನುಭವಿಸುತ್ತಿದ್ದು, ಮೋದಿ ಅವರ ಅಚ್ಚೇ ದಿನ್ ಬರಲೇ ಇಲ್ಲ. ಬದಲಾಗಿ ಜನ ದುಸ್ಥಿತಿ ಎದುರಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಮಂತ್ರಿಗಳೆಲ್ಲ ಕರ್ನಾಟಕದಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಗೇಲಿ ಮಾಡಿದರು.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಬೆಂಬಲ ಸಿಗಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆ ಮೀರಿ ಬೆಂಬಲ ದೊರೆಯಲಿದೆ. ನಮ್ಮದೇ ಪಕ್ಷದ ಸುಭದ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next